Home ಟಾಪ್ ಸುದ್ದಿಗಳು ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಪೋಟೋ ಇರುವ ಸೆಲ್ಫಿ ಬೂತ್‌ ನಿರ್ಮಾಣ: ಖರ್ಗೆ ಆಕ್ಷೇಪ

ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಪೋಟೋ ಇರುವ ಸೆಲ್ಫಿ ಬೂತ್‌ ನಿರ್ಮಾಣ: ಖರ್ಗೆ ಆಕ್ಷೇಪ

ನವದೆಹಲಿ: ದೇಶದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಪೋಟೋ ಇರುವ 3D ಸೆಲ್ಫಿ ಬೂತ್‌ ನಿರ್ಮಾಣ ಕಾರ್ಯ ನಡೆಯುತ್ತಿದ್ದು,. 1.62 ಕೋಟಿ ರೂ. ಇದಕ್ಕಾಗಿ ಖರ್ಚು ಮಾಡಲಾಗುತ್ತದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಕೇಂದ್ರ ರೈಲ್ವೆ ಇಲಾಖೆ ಉತ್ತರವನ್ನು ನೀಡಿದೆ.

ಮೋದಿ ಅವರ 3ಡಿ ಸೆಲ್ಫಿ ಬೂತ್‌ಗಳನ್ನು ಮುಂಬೈ, ಭೂಸಾವಲ್, ನಾಗಪುರ, ಪುಣೆ ಮತ್ತು ಸೊಲ್ಲಾಪುರಗಳ 50 ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಕಲ್ಯಾಣ್, ನಾಗ್ಪುರ ಮತ್ತು ಬೇತುಲ್ ಸೇರಿದಂತೆ 30 ಕೆಟಗರಿ ಎ ಸ್ಟೇಷನ್‌ಗಳಲ್ಲಿ ತಾತ್ಕಾಲಿಕ ಬೂತ್‌ಗಳನ್ನು ಸ್ಥಾಪಿಸಿದರೆ, ಕರ್ಜತ್, ಲಾತೂರ್ ಮತ್ತು ಕೋಪರ್‌ಗಾಂವ್ ಸೇರಿದಂತೆ 20 ನಿಲ್ದಾಣಗಳಲ್ಲಿ ಶಾಶ್ವತ ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದೆ.

ಶಾಶ್ವತ 3D ಸೆಲ್ಫಿ ಬೂತ್‌ಗೆ 6.25 ಲಕ್ಷದವರೆಗೆ ಮತ್ತು ತಾತ್ಕಾಲಿಕ ಸೆಲ್ಫಿ ಬೂತ್‌ಗೆ 1.25 ಲಕ್ಷಗಳವರೆಗೆ ವೆಚ್ಚ ಮಾಡಲಾಗುತ್ತದೆ ಎಂದು ಆರ್‌ಟಿಐ ನೀಡಿರುವ ಮಾಹಿತಿ ತಿಳಿಸುತ್ತದೆ.

ನಿವೃತ್ತ ರೈಲ್ವೇ ಅಧಿಕಾರಿ ಅಜಯ್ ಬೋಸ್ ಅವರು ಆರ್‌ಟಿಐ ಅಡಿಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರವಾಗಿ ಸೆಂಟ್ರಲ್ ರೈಲ್ವೇ ಡೆಪ್ಯುಟಿ ಜನರಲ್ ಮ್ಯಾನೇಜರ್ ಅಭಯ್ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಸೆಲ್ಫಿ ಬೂತ್‌ಗಳನ್ನು ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಿವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ತೆರಿಗೆದಾರರ ಹಣದ ದುರ್ಬಳಕೆ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರದ ಸ್ವಯಂ ಗೀಳಿನ ಪ್ರಚಾರಕ್ಕೆ ಯಾವುದೇ ಮಿತಿಯಿಲ್ಲ. ರೈಲ್ವೆ ನಿಲ್ದಾಣಗಳಲ್ಲಿ ಮೋದಿಜಿಯವರ 3D ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವ ಮೂಲಕ ತೆರಿಗೆದಾರರ ಹಣವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ಪ್ರಧಾನಿಯವರ ಪ್ರಮುಖ ಕಟೌಟ್‌ಗಳಿರುವ 822 ಸೆಲ್ಫಿ ಪಾಯಿಂಟ್‌ಗಳನ್ನು ಅಳವಡಿಸುವಂತೆ ಸಶಸ್ತ್ರ ಪಡೆಗಳಿಗೆ ಆದೇಶ ನೀಡುವ ಮೂಲಕ ದೇಶದ ವೀರ ಸೈನಿಕರ ರಕ್ತ ಮತ್ತು ತ್ಯಾಗವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗಿದೆ. ಮೋದಿ ಸರ್ಕಾರವು ರಾಜ್ಯಗಳಿಗೆ ಬರ ಮತ್ತು ಪ್ರವಾಹ ಪರಿಹಾರವನ್ನು ಒದಗಿಸಿಲ್ಲ. ವಿರೋಧ ಪಕ್ಷದ ಆಡಳಿತದ ರಾಜ್ಯಗಳಿಗೆ ಯೋಜನೆ ಹಣದ ಪಾವತಿ ಬಾಕಿ ಉಳಿದಿವೆ. ಆದರೆ ಈ ಕೀಳು ಮಟ್ಟದ ಚುನಾವಣಾ ಪ್ರಚಾರಕ್ಕೆ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Join Whatsapp
Exit mobile version