ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ಜಾತಿಗಳ  ಅಧ್ಯಯನ ಸಮಿತಿ ರಚನೆ?

Prasthutha|

ನವದೆಹಲಿ: ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ಜಾತಿಗಳ ಸದಸ್ಯರ ಅಥವಾ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ಕೇಂದ್ರವು ರಾಷ್ಟ್ರೀಯ ಆಯೋಗವನ್ನು ರಚಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

- Advertisement -

ಅಂತಹ ಆಯೋಗವನ್ನು ರಚಿಸುವ ಪ್ರಸ್ತಾಪವನ್ನು ಕೇಂದ್ರದಲ್ಲಿ ಸಕ್ರಿಯವಾಗಿ ಚರ್ಚಿಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) ಮೂಲಗಳು ಇಂತಹ ಕ್ರಮಕ್ಕೆ ಹಸಿರು ನಿಶಾನೆ ತೋರಿವೆ. ಗೃಹ, ಕಾನೂನು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಹಣಕಾಸು ಸಚಿವಾಲಯಗಳಲ್ಲಿ ಈ ಪ್ರಸ್ತಾಪದ ಬಗ್ಗೆ ಸಮಾಲೋಚನೆಗಳು ಪ್ರಸ್ತುತ ನಡೆಯುತ್ತಿವೆ ಎಂದು ತಿಳಿದುಬಂದಿದೆ.

- Advertisement -

ಮೂರು ಅಥವಾ ನಾಲ್ಕು ಮಂದಿ ಸದಸ್ಯರನ್ನೊಳಗೊಂಡ ಸಮಿತಿಗೆ ಕೇಂದ್ರ ಸಚಿವರೊಬ್ಬರು ಅಧ್ಯಕ್ಷರಾಗುವ ಸಾಧ್ಯತೆ ಇದೆ. ವರದಿ ಸಲ್ಲಿಸಲು ಸಮಿತಿಗೆ ಕಾಲಾವಕಾಶ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕ್ರಿಶ್ಚಿಯನ್ ಮತ್ತು ಇಸ್ಲಾಂಗೆ ಮತಾಂತರಗೊಂಡಿರುವ ದಲಿತರಿಗೆ ಮೀಸಲಾತಿ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಹಲವು ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಈ ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅಕ್ಟೋಬರ್ 11ರ ವರೆಗೆ ಕಾಲಾವಕಾಶ ನೀಡಿದೆ.

Join Whatsapp