Home ಟಾಪ್ ಸುದ್ದಿಗಳು ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಕಾನೂನಿನ ರಕ್ಷಣೆ ಸಿಗಬೇಕಾದರೆ  ಸಂವಿಧಾನ ತಿದ್ದುಪಡಿ ಅಗತ್ಯ: ಸಿದ್ದರಾಮಯ್ಯ

ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಕಾನೂನಿನ ರಕ್ಷಣೆ ಸಿಗಬೇಕಾದರೆ  ಸಂವಿಧಾನ ತಿದ್ದುಪಡಿ ಅಗತ್ಯ: ಸಿದ್ದರಾಮಯ್ಯ

►ಸುಗ್ರೀವಾಜ್ಞೆ ಬದಲು ಅಧಿವೇಶನ ಕರೆಯಬೇಕು

ಬೆಂಗಳೂರು: ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಕಾನೂನಿನ ರಕ್ಷಣೆ ಸಿಗಬೇಕು ಎಂದಾದರೆ ಸಂವಿಧಾನ ತಿದ್ದುಪಡಿ ಆಗಲೇಬೇಕು, ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದ ಆಯೋಗ ನೀಡಿರುವ ವರದಿಯಲ್ಲಿ ಪರಿಶಿಷ್ಟ ವರ್ಗದ ಮೀಸಲಾತಿಯನ್ನು 3% ಇಂದ 7% ಗೆ ಮತ್ತು ಪರಿಶಿಷ್ಟ ಜಾತಿಯ ಮೀಸಲಾತಿಯನ್ನು 15% ಇಂದ 17% ಗೆ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಹೀಗೆ ಒಟ್ಟು ಮೀಸಲಾತಿ ಪ್ರಮಾಣ 24% ಗೆ ಏರಿಕೆ ಮಾಡಬೇಕು ಎಂದಿದೆ.

1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳ ಪೀಠವು ಮೀಸಲಾತಿ ಪ್ರಮಾಣ 50% ಮೀರುವಂತಿಲ್ಲ ಎಂಬ ತೀರ್ಪು ನೀಡಿದೆ. ಈಗ ನಮ್ಮಲ್ಲಿ ಮೀಸಲಾತಿ ಪ್ರಮಾಣ 50% ಮೀರಿದೆ, ಇದರ ಜೊತೆಗೆ ಆರ್ಥಿಕವಾಗಿ ದುರ್ಬಲರಾಗಿರುವ ಸಾಮಾನ್ಯ ವರ್ಗದ ಜನರಿಗೆ 10% ಮೀಸಲಾತಿ ನೀಡಲಾಗಿದೆ. ಈಗಾಗಲೇ ಮೀಸಲಾತಿ ಪ್ರಮಾಣ 60% ಇದ್ದು, ಇದನ್ನು ಇನ್ನೂ 6% ಹೆಚ್ಚು ಮಾಡುವುದರಿಂದ ಕೋರ್ಟ್ ತೀರ್ಪಿನ ಉಲ್ಲಂಘನೆ ಆಗುತ್ತದೆ, ಹೀಗಾಗಿ ಮತ್ತೆ ಮೀಸಲಾತಿ ಹೆಚ್ಚಳ ಮಾಡುವುದಕ್ಕೆ ಕಾನೂನಿನ ರಕ್ಷಣೆ ಸಿಗಬೇಕು ಎಂದಾದರೆ ಸಂವಿಧಾನ ತಿದ್ದುಪಡಿ ಆಗಲೇಬೇಕು, ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸರ್ಕಾರ ಸುಗ್ರೀಗಾಜ್ಞೆ ಮೂಲಕ ಮೀಸಲಾತಿ ಹೆಚ್ಚಿಸಲು ಹೊರಟಿದೆ, ಆದರೆ ನಾನು ಒಂದು ವಾರದೊಳಗೆ ಅಧಿವೇಶನ ಕರೆಯಿರಿ, ಅಲ್ಲಿ ಸುಗ್ರೀವಾಜ್ಞೆ ಬದಲು ಒಂದು ಮಸೂದೆಯನ್ನು ಅಂಗೀಕಾರ ಮಾಡೋಣ. ಇದರಿಂದ ಮೀಸಲಾತಿ ಹೆಚ್ಚಳಕ್ಕೆ ಇನ್ನೂ ಹೆಚ್ಚು ಶಕ್ತಿ ಬರುತ್ತದೆ. ಕೇಂದ್ರದಲ್ಲಿ ಬಿಜೆಪಿಯದೇ ಸರ್ಕಾರ ಇರುವುದರಿಂದ ದೆಹಲಿಗೆ ಹೋಗಿ ಪ್ರಯತ್ನ ಮಾಡಿ ಈ ಕಾಯ್ದೆಯನ್ನು 9ನೇ ಶೆಡ್ಯೂಲ್ ನಲ್ಲಿ ಸೇರಿಸುವ ಕೆಲಸ ಮಾಡಿ, ಆಗ ನಿಮ್ಮ ಪ್ರಾಮಾಣೀಕತೆ ಒಪ್ಪುವಂತಾಗುತ್ತದೆ ಎಂದು ಹೇಳಿದ್ದೆ. ಈ ಬಿಜೆಪಿ ಸರ್ಕಾರದ ಬಗ್ಗೆ ನಮಗೆ ಅನುಮಾನ ಯಾಕೆಂದರೆ 2 ವರ್ಷ 3 ತಿಂಗಳು ಸುಮ್ಮನಿದ್ದು, ಈಗ ನಾವೆಲ್ಲ ಒತ್ತಾಯ ಮಾಡಿದ ಮೇಲೆ ಸುಗ್ರೀವಾಜ್ಞೆ ಮೂಲಕ ತರುತ್ತೇವೆ ಎಂದು ಹೊರಟಿದ್ದಾರೆ. ಒಂದು ವಿಶೇಷ ಅಧಿವೇಶನ ಕರೆದರೆ ನಮ್ಮ ಪಕ್ಷ ಸಂಪೂರ್ಣ ಸಹಕಾರಿ ನೀಡಿ ಒಂದೇ ದಿನದಲ್ಲಿ ಮಸೂದೆ ಪಾಸ್ ಆಗಲು ಎಲ್ಲ ಸಹಕಾರ ನೀಡಲಿದೆ. ತತ್ ಕ್ಷಣ ಇದನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಲು ಕೇಂದ್ರದ ಮೇಲೆ ಒತ್ತಡ ಹಾಕಿ ಎಂಬುದು ನಮ್ಮ ಬೇಡಿಕೆ. ಇದನ್ನು ಬಿಟ್ಟು ಸರ್ಕಾರ ಅಡ್ಡದಾರಿ ಹಿಡಿದಿದ್ದು ಯಾಕೆ?  ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಡಿಸೆಂಬರ್ ನಲ್ಲಿ ಅಧಿವೇಶನ ಕರೆಯುತ್ತೇವೆ ಎಂದು ಹೇಳಿದ್ದಾರೆ, ಅಲ್ಲಿವರೆಗೆ ಯಾಕೆ ಕಾಯಬೇಕು? ಆಮೇಲೆ ಆಗತ್ತೋ ಇಲ್ಲವೋ ಗೊತ್ತಿಲ್ಲ. ಒಂದು ವಿಶೇಷ ಅಧಿವೇಶನವನ್ನು ಈಗಲೇ ಕರೆಯಬಹುದಲ್ವಾ? ಈಗಾಗಲೇ ಬಹಳಷ್ಟು ಕಾಯ್ದೆಗಳು 9ನೇ ಶೆಡ್ಯೂಲ್ ಸೇರಿಯಾಗಿದೆ. ಕರ್ನಾಟಕದ ಭೂಸುಧಾರಣಾ ಕಾಯ್ದೆ ಮತ್ತು ತಮಿಳುನಾಡಿನಲ್ಲಿ ಮೀಸಲಾತಿಯನ್ನು 69% ಗೆ ಹೆಚ್ಚಿಸಿದ್ದು ಕೂಡ 9ನೇ ಶೆಡ್ಯೂಲ್ ಸೇರಿದೆ. ಹೀಗಾಗಿ ಇದನ್ನು ಕೂಡಲೇ ಮಾಡಬೇಕು ಎಂಬುದು ನಮ್ಮ ಒತ್ತಾಯ ಎಂದು ಅವರು ಹೇಳಿದರು.

ನಾವು ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂಬುದರ ಪರವಾಗಿದ್ದೇವೆ. ಇದನ್ನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇವೆ. ಅಷ್ಟೇ ಅಲ್ಲ ಈ ಮೀಸಲಾತಿ ಹೆಚ್ಚಳಕ್ಕೆ ಕಾನೂನಿನ ರಕ್ಷಣೆಯನ್ನು ನೀಡಬೇಕು ಕೂಡ. ಬರೀ ಬಾಯಿ ಮಾತಲ್ಲಿ ಹೇಳಿ, ಮೊಸಳೆ ಕಣ್ಣೀರು ಸುರಿಸಿದ್ರೆ ಸಾಕಾಗಲ್ಲ, ಇದು ಶಾಸನ ರೂಪದಲ್ಲಿ ಬರಬೇಕು. ರಾಜ್ಯ ಸರ್ಕಾರ ಈಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಪ್ರಯತ್ನ ಮಾಡುತ್ತೇವೆ, ಮುಂದೆ ಅಧಿವೇಶನ ಕರೆದ ನಂತರ ಕಾಯ್ದೆ ಮಾಡುತ್ತೇವೆ ಎಂದಿದೆ. ಅದರ ಬದಲು ಸರ್ಕಾರ ಈಗ ಒಂದು ಅಥವಾ ಎರಡು ದಿನದ ವಿಶೇಷ ಅಧಿವೇಶನ ಕರೆಯಲಿ. ಮೀಸಲಾತಿ ಹೆಚ್ಚಳದ ಒಂದು ವಿಚಾರವನ್ನೇ ಚರ್ಚೆ ಮಾಡಿ, ಮೇಲ್ಮನೆ ಮತ್ತು ಕೆಳಮನೆ ಈ ಎರಡೂ ಸದನದಲ್ಲೂ ಶಾಸನ ರಚನೆ ಮಾಡೋಣ. ಇದನ್ನು ಅವಿರೋಧವಾಗಿ ಪಾಸ್ ಮಾಡಲು ನಾವು ಬೆಂಬಲ ನೀಡುತ್ತೇವೆ, ಕಾಂಗ್ರೆಸ್ ಪಕ್ಷ ಮೀಸಲಾತಿ ಹೆಚ್ಚಳಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಅವರು ಚುನಾವಣೆ ಇರುವುದರಿಂದ ಜನರ ಕಣ್ಣು ಒರೆಸುವ ತಂತ್ರ ಮಾಡುತ್ತಿದ್ದಾರೆ. ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ, ಈಗ ನಮ್ಮ ಕೈಲಿ ಏನು ಇಲ್ಲ ಎಂದು ಜನಗಳಿಗೆ ಹೇಳಿ ತಪ್ಪಿಸಿಕೊಳ್ಳುವ ತಂತ್ರವನ್ನು ಅನುಸರಿಸುತ್ತಿದ್ದಾರೆ.  ಎರಡು ವರ್ಷ ಮೂರು ತಿಂಗಳು ಸರ್ಕಾರ ನಿದ್ದೆ ಮಾಡುತ್ತಾ ಇತ್ತು, ಈಗ ನಮ್ಮವರೆಲ್ಲ ಒತ್ತಾಯ ಮಾಡಿದಮೇಲೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ, ಇದರ ಬದಲು ಕಾಯ್ದೆ ರೂಪಿಸಿ, ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಲಿ. ಬಿಜೆಪಿಗೆ ಇಚ್ಛಾಶಕ್ತಿ ಇದ್ದರೆ ಈ ಕೆಲಸ ಮಾಡಲಿ ಎಂದು ಹೇಳಿದರು.

ನಮ್ಮ ಪಾದಯಾತ್ರೆ ಖಂಡಿತಾ ಫಲಪ್ರದವಾಗಲಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಯಾತ್ರೆಯ ಫಲವನ್ನು ಖಂಡಿತಾ ಪಡೆಯಲಿದೆ. ಇಂದು ಜನ ಸ್ವ ಇಚ್ಛೆಯಿಂದ ಸಾವಿರಾರು ಸಂಖ್ಯೆಯಲ್ಲಿ ಬಂದು, ಮಳೆ ಬಿಸಿಲು ಎನ್ನದೆ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತ ಪಡೆದು ಗೆಲುವು ಪಡೆಯಲು ಈ ಯಾತ್ರೆ ಸಹಕಾರಿಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

Join Whatsapp
Exit mobile version