ಸಂವಿಧಾನ ವಿರೋಧಿಗಳಿಂದ ಸಂವಿಧಾನ ದಿನಾಚರಣೆ

Prasthutha|

ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಕೇಂದ್ರ ಸಚಿವರೊಬ್ಬರು ಬಹಿರಂಗ ಹೇಳಿಕೆ ನೀಡಿದರೂ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗದ ದೇಶದಲ್ಲಿ ಮತ್ತೊಂದು ಸಂವಿಧಾನ ದಿನವನ್ನು ನಾವು ಆಚರಿಸಿದ್ದೇವೆ. ವಿರೋಧ ಪಕ್ಷಗಳ ಬಹಿಷ್ಕಾರದೊಂದಿಗೆ ಒಕ್ಕೂಟ ಸರಕಾರವು ಈ ದಿನವನ್ನು ಆಚರಿಸಿದ್ದು, ಸಂವಿಧಾನದ ಬಗ್ಗೆ ಗೌರವದ ಮಾತನ್ನಾಡಿದೆ. ಹಿಂದೆಂದಿಗಿಂತಲೂ ಹೆಚ್ಚು ಅಪಾಯಕ್ಕೀಡಾಗಿರುವ ಸಂವಿಧಾನದ ಆಶಯಗಳನ್ನು ಮಣ್ಣುಪಾಲು ಮಾಡಲು ಪ್ರಯತ್ನಿಸುತ್ತಿರುವ ಸಂಘಪರಿವಾರ ಎಂದೂ ಸಂವಿಧಾನವನ್ನು ಒಪ್ಪಿಕೊಂಡಿಲ್ಲ ಎಂಬುದು ಐತಿಹಾಸಿಕ ಸತ್ಯ. ಸಂಘ ನಿಯಂತ್ರಿತ ಬಿಜೆಪಿ ಸರ್ಕಾರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವಲು ನಿರಂತರ ಪ್ರಯತ್ನದಲ್ಲಿ ತೊಡಗಿದೆ.

- Advertisement -


ಅಧಿಕಾರಕ್ಕೇರಿದ ನಂತರವಂತೂ ಅದು ಸಾಂವಿಧಾನಿಕ ಸಂಸ್ಥೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ದುರ್ಬಳಕೆ ಮಾಡುತ್ತಾ ಬಂದಿದೆ. ಈಡಿ, ಸಿಬಿಐ, ಎನ್.ಐ.ಎ ಯಂತಹ ತನಿಖೆ ಸಂಸ್ಥೆಗಳು ಪಕ್ಷಪಾತ ಮತ್ತು ಪೂರ್ವಗ್ರಹಪೀಡಿತ ತನಿಖೆಗಳ ಆರೋಪದಿಂದ ಹೊರತಾಗಿಲ್ಲ. ನ್ಯಾಯಾಂಗ ಕೂಡ ಹಸ್ತಕ್ಷೇಪದಿಂದ ಮುಕ್ತವಾಗಿಲ್ಲ. ನ್ಯಾಯಾಧೀಶರ ನೇಮಕಾತಿಯಲ್ಲಿ ಅಪಾರದರ್ಶಕತೆ, ಸರಕಾರದ ಜನ ವಿರೋಧಿ ಧೋರಣೆಗಳ ವಿರುದ್ಧ ತೀರ್ಪು ನೀಡುವ ನ್ಯಾಯಾಧೀಶರ ವರ್ಗಾವಣೆಯ ಸನ್ನಿವೇಶಗಳನ್ನೂ ದೇಶದ ಜನತೆ ಕಂಡಿದ್ದಾರೆ.


ತಾವು ಆಯ್ಕೆಯಾಗಿ ಬಂದಿರುವುದೇ ಸಂವಿಧಾನ ಬದಲಾಯಿಸಲು ಅನ್ನುವ ಬಿಜೆಪಿ ಸಂಸದ ಮತ್ತು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಪಕ್ಷವು ಕ್ರಮ ಕೈಗೊಂಡ ನಿದರ್ಶನಗಳಿಲ್ಲ. ಇದು ಬಿಜೆಪಿ ಸರಕಾರ ಸಂವಿಧಾನದೊಂದಿಗೆ ಹೊಂದಿರುವ ಬದ್ಧತೆಯನ್ನು ಅನಾವರಣಗೊಳಿಸುತ್ತದೆ. ಕೆಲದಿನಗಳ ಹಿಂದೆ, ದ.ಕ.ಜಿಲ್ಲೆಯಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿರುವ ಜಿಲ್ಲಾಧಿಕಾರಿಯವರನ್ನು ಕೊರಳಪಟ್ಟಿ ಹಿಡಿದು ಥಳಿಸುವುದಾಗಿ ಸಂಘಪರಿವಾರದ ನಾಯಕನೊಬ್ಬ ಬಹಿರಂಗವಾಗಿ ಬೆದರಿಸಿದ್ದ. ಆದರ ಬೆನ್ನಲ್ಲೇ ಪೊಲೀಸ್ ಅಧಿಕಾರಿಯೊಬ್ಬರ ಕಾಲು ಮುರಿಯುವುದಾಗಿ ಬೆದರಿಕೆ ಹಾಕಲಾಯಿತು. ವಿಶೇಷ ಮಹತ್ವ ಹೊಂದಿರುವ ಜಿಲ್ಲಾಧಿಕಾರಿ ಹುದ್ದೆಗೆ ಬೆದರಿಕೆಯೊಡ್ಡಿದಾಗಲೂ ಬಿಜೆಪಿ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸಂವಿಧಾನವನ್ನು ಒಪ್ಪದ, ಸಾಂವಿಧಾನಿಕ ಹುದ್ದೆಗಳನ್ನು ದುರ್ಬಳಕೆ ಮಾಡುವ ಮತ್ತು ಅದನ್ನು ದುರ್ಬಲಗೊಳಿಸುವ, ಹಾಗೆಯೇ ಸಾಂವಿಧಾನಿಕ ಹುದ್ದೆಗಳಿಗೆ ಬೆದರಿಕೆಯೊಡ್ಡುವಾಗ ಮೌನವಾಗಿರುವ ಬಿಜೆಪಿ ಸಂವಿಧಾನ ದಿನವನ್ನು ಆಚರಿಸುತ್ತದೆ ಎಂದರೆ ಅದು ಬೂಟಾಟಿಕೆಯಲ್ಲದೇ ಮತ್ತೇನಲ್ಲ.

- Advertisement -


ನಮ್ಮ ದೇಶದ ಸಂವಿಧಾನ ದೇಶದ ಪ್ರತಿಯೋರ್ವ ಪ್ರಜೆಗೂ ಸಮಾನ ಹಕ್ಕುಗಳ ಜೊತೆಗೆ ಸ್ವತಂತ್ರವಾಗಿ ಬದುಕುವ ಅವಕಾಶವನ್ನು ನೀಡುತ್ತದೆ. ಆದರೆ ಸಂವಿಧಾನದತ್ತವಾದ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸುವ ಬಿಜೆಪಿ ಸರಕಾರದ ಸರ್ವಾಧಿಕಾರಿ ಧೋರಣೆಗಳು ಸಂವಿಧಾನದ ಮೌಲ್ಯಗಳಿಗೆ ಬೆದರಿಕೆಯೊಡ್ಡುತ್ತಿವೆ. ಒಂದೆಡೆ ಸಂವಿಧಾನದ ತತ್ವಗಳಿಗೆ ಧಕ್ಕೆ ಉಂಟು ಮಾಡುವ ಬಿಜೆಪಿ ಸರಕಾರವು ಮತ್ತೊಂದೆಡೆ, ಸಂವಿಧಾನದ ಬಗ್ಗೆ ಗೌರವದ ಮಾತುಗಳನ್ನಾಡುತ್ತಿದೆ. ತಾರತಮ್ಯರಹಿತವಾಗಿ ಸರ್ವ ಭಾರತೀಯರನ್ನು ಒಂದಾಗಿ ಕಾಣದ ವಿನಃ ಸಂವಿಧಾನದ ಆಶಯಗಳು ಪೂರ್ಣಗೊಳ್ಳಲಾರವು. ಜಾತಿ, ಮತ, ವರ್ಗ ಲಿಂಗ ಭೇದವಿಲ್ಲದೇ ಎಲ್ಲರಿಗೂ ಸಮಾನ ಹಕ್ಕುಗಳು ದೊರಕಿದ ಸಂದರ್ಭ ಆಚರಿಸುವ ಸಂವಿಧಾನ ದಿನ ಮಾತ್ರ ನೈಜ ಸಂವಿಧಾನ ದಿನಾಚರಣೆಯಾಗಲಿದೆ.

Join Whatsapp