ಮುಸ್ಲಿಮರ ದ್ವಿಪತ್ನಿತ್ವ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸೂಕ್ತ ಸಮಯದಲ್ಲಿ ಸಾಂವಿಧಾನಿಕ ಪೀಠ ರಚನೆ: ಸುಪ್ರೀಂ

Prasthutha|

ನವದೆಹಲಿ: ಮುಸ್ಲಿಮರಲ್ಲಿ ದ್ವಿಪತ್ನಿತ್ವ ಪದ್ಧತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗೆ ಸೂಕ್ತ ಸಮಯದಲ್ಲಿ ಸಾಂವಿಧಾನಿಕ ಪೀಠ ರಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
ವಕೀಲ ಅಶ್ವಿನಿ ಉಪಾಧ್ಯಾಯ ಅವರು ಅರ್ಜಿಯನ್ನು ಪ್ರಸ್ತಾಪಿಸಿದಾಗ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಈ ವಿಚಾರ ತಿಳಿಸಿತು. “ಇದನ್ನು ನಿರ್ಣಯಿಸಲು ಸೂಕ್ತ ಸಮಯದಲ್ಲಿ, ನಾನು ಒಂದು ಸಾಂವಿಧಾನಿಕ ಪೀಠವನ್ನು ರಚಿಸುತ್ತೇನೆ,” ಎಂದು ಸಿಜೆಐ ಹೇಳಿದರು.

- Advertisement -


ದ್ವಿಪತ್ನಿತ್ವ ಪದ್ದತಿ ಉಳಿದ ಧರ್ಮದಲ್ಲಿ ನಿಷೇಧಿತವಾಗಿರುವಾಗ ಕೇವಲ ಒಂದು ಧಾರ್ಮಿಕ ಸಮುದಾಯಕ್ಕೆ ಅದನ್ನು ಪಾಲಿಸಲು ಅನುಮತಿ ನೀಡಬಾರದು. ಈ ಆಚರಣೆಯನ್ನು ಅಸಾಂವಿಧಾನಿಕವೆಂದೂ, ಮಹಿಳೆಯರ ಮೇಲಿನ ದಬ್ಬಾಳಿಕೆಗೆ ಕಾರಣವಾಗುವಂತಹ, ಸಮಾನತೆಯ ವಿರೋಧಿ ಕೃತ್ಯ ಎಂದು ಘೋಷಿಸಲು ನ್ಯಾಯಾಲಯವನ್ನು ಅರ್ಜಿಯಲ್ಲಿ ಕೋರಲಾಗಿದೆ.
ಮುಸ್ಲಿಂ ಪುರುಷರು ಒಬ್ಬರಿಗಿಂತ ಹೆಚ್ಚು ಮಹಿಳೆಯರನ್ನು ವಿವಾಹವಾಗುವುದಕ್ಕೆ ಅನುವು ಮಾಡಿಕೊಡುವ ಐಪಿಸಿ ಸೆಕ್ಷನ್‌ 494 ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು (ಷರೀಯತ್‌) ಅನ್ವಯ ಕಾಯಿದೆ- 1937ರ ಸೆಕ್ಷನ್ 2ನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.


ಐಪಿಸಿ ಸೆಕ್ಷನ್‌ 494 ಪ್ರಕಾರ ಗಂಡನಿರುವ ಅಥವಾ ಹೆಂಡತಿ ಇರುವ ಯಾವುದೇ ವ್ಯಕ್ತಿಯು, ತನ್ನ ಗಂಡನ ಅಥವಾ ತನ್ನ ಹೆಂಡತಿಯ ಜೀವಿತ ಕಾಲದಲ್ಲಿ ಪುನಃ ಮದುವೆಯಾದರೆ ಹಾಗೆ ಗಂಡ ಅಥವಾ ಹೆಂಡತಿ ಬದುಕಿರುವ ಸಂದರ್ಭದಲ್ಲಿಯೇ ಮದುವೆಯಾದ ಕಾರಣಕ್ಕೆ ಅಂತಹ ಮದುವೆಯು ಅನೂರ್ಜಿತವಾಗುವುದು, ಹಾಗೆ ಮದುವೆಯಾದ ವ್ಯಕ್ತಿಗೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ನಿರ್ದಿಷ್ಟ ಅವಧಿಯ ಕಾರಾವಾಸದ ಶಿಕ್ಷೆ ವಿಧಿಸತಕ್ಕದ್ದು ಹಾಗೂ ಜುಲ್ಮಾನೆಗೂ ಸಹ ಗುರಿಯಾಗತಕ್ಕದ್ದು.
ಒಂದೇ ರೀತಿಯ ಕೃತ್ಯಕ್ಕೆ ಕೆಲವರಿಗೆ ಶಿಕ್ಷೆ ವಿಧಿಸಿದರೆ, ಮತ್ತೆ ಕೆಲವರಿಗೆ ಅದನ್ನು “ಅನುಭೋಗಯೋಗ್ಯ” ಮಾಡುವ ಮೂಲಕ ಪ್ರಭುತ್ವವು ಅಪರಾಧ ಕಾನೂನಿನಲ್ಲಿ ತಾರತಮ್ಯ ಸೃಷ್ಟಿಸಲಾಗದು ಎನ್ನುವುದು ಅರ್ಜಿದಾರರ ಪ್ರಧಾನ ವಾದವಾಗಿದೆ.
(ಕೃಪೆ: ಬಾರ್ & ಬೆಂಚ್)

Join Whatsapp