ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐಗೆ ನೀಡಿದ್ದು ಕಾನೂನುಬಾಹಿರ. ರಾಜಕೀಯ ದುರುದ್ದೇಶ ಇಟ್ಟುಕೊಂಡು ಈ ಮೂಲಕ ನಮ್ಮ ನಾಯಕರಾದ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಬಿಜೆಪಿ ಸಂಚು ಮಾಡಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ 9-10 ವರ್ಷಗಳಿಂದ ವಿರೋಧ ಪಕ್ಷಗಳನ್ನು ಮುಗಿಸುವ ಸಂಚು ನಡೆಸುತ್ತಿದೆ. ವಿರೋಧ ಪಕ್ಷಗಳ ಧ್ವನಿ ಅಡಗಿಸಲು, ವಿರೋಧ ಪಕ್ಷದ ನಾಯಕರಿಂದ ಎದುರಾಗುವ ತೊಂದರೆ ದಮನಿಸಲು ಆಪರೇಷನ್ ಕಮಲ ಹಾಗೂ ಐಟಿ, ಇಡಿ, ಸಿಬಿಐ ಬೆದರಿಕೆ ಮೂಲಕ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಮಾಜಿ ಎಐಸಿಸಿ ಅಧ್ಯಕ್ಷರಿಂದ ನಮ್ಮ ಪಿಸಿಸಿ ಅಧ್ಯಕ್ಷರವರೆಗೂ ಯಂಗ್ ಇಂಡಿಯಾ, ನ್ಯಾಷನಲ್ ಹೆರಾಲ್ಡ್ ಹಾಗೂ ಆಕ್ರಮ ಆಸ್ತಿ ಪ್ರಕರಣಗಳನ್ನು ಬಳಸುತ್ತಿದೆ. ಇದರಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲಾ ರೀತಿಯ ಕಿರುಕುಳ ನೀಡಿದರು. ಚುನಾವಣೆ ಬಂದಾಕ್ಷಣ ವಿರೋಧ ಪಕ್ಷಗಳ ನಾಯಕರ ಮೇಲೆ ಮಾತ್ರ ಐಟಿ, ಇಡಿ ದಾಳಿಗಳಾಗುತ್ತವೆ. ಬಿಜೆಪಿಯ ಯಾವುದೇ ನಾಯಕರ ಮೇಲೆ ನಡೆಯುವುದಿಲ್ಲ. ಬಿಜೆಪಿ ನಾಯಕರು ಹಗಲು ದರೋಡೆ, ಕೊಲೆ ಮಾಡಿದರೂ ತನಿಖೆ ಮಾಡುವುದಿಲ್ಲ ಎಂದರು.
ನಿನ್ನೆ ನಮ್ಮ ಸರ್ಕಾರ, ಡಿ.ಕೆ. ಶಿವಕುಮಾರ್ ಅವರ ಮೇಲಿನ ಪ್ರಕರಣವನ್ನು ಸಿಬಿಐ ವಿಚಾರಣೆಯಿಂದ ಹಿಂಪಡೆಯುವ ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ನಿನ್ನೆ ರಾತ್ರಿಯಿಂದ ಮಾಧ್ಯಮ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಯಾಗುತ್ತಿದೆ. ಕಾನೂನು ವಿಚಾರವಾಗಿ ಸಾಕಷ್ಟು ಗೊಂದಲವಿದೆ. ಈ ಮಧ್ಯೆ ಬಿಜೆಪಿ ಹಲವು ತಪ್ಪು ಮಾಹಿತಿ ನೀಡುತ್ತಿದೆ.ಕಳೆದ ಬಿಜೆಪಿ ರಾಜ್ಯ ಸರ್ಕಾರ ಡಿ.ಕೆ. ಶಿವಕುಮಾರ್ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದು ಕಾನೂನು ಬಾಹೀರ. ಇದೊಂದು ರಾಜಕೀಯ ಪ್ರೇರಿತ ಸಂಚು. ವಿರೋಧ ಪಕ್ಷಗಳನ್ನು ಕಟ್ಟಿಹಾಕುವ ಪ್ರಯತ್ನವಾಗಿತ್ತು. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಕಟ್ಟಿಹಾಕಲು ಬಿಜೆಪಿ ಮಾಡಿದ ಷಡ್ಯಂತ್ರ.9-9-2019ರಂದು ಇಡಿಯಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನೆಯಾಗಿ, ಅದರಲ್ಲಿ ಸೆಕ್ಷನ್ 62 ಅಡಿಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಮತ್ತಿತರರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ (PMLA) ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ದೂರಿನ ಮೇಲೆ ಇಡಿ ನಡೆಸಿರುವ ತನಿಖೆಯ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿಸಿತ್ತು. ಜನಪ್ರತಿನಿಧಿಗಳ ವಿರುದ್ಧ ಯಾವುದೇ ತನಿಖೆಯಾದಾಗ ಆಯಾ ರಾಜ್ಯ ಸರ್ಕಾರಕ್ಕೆ ಆ ಪ್ರಕರಣದ ಕುರಿತು ಮಾಹಿತಿ ರವಾನೆಯಾಗುತ್ತದೆ. ಈ ಮಾಹಿತಿಯನ್ನು 2-9-2019ರಂದು ಸಿಬಿಐಗೂ ರವಾನಿಸಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಂತರ 11-9-2019ರಂದು ಮುಖ್ಯ ಕಾರ್ಯದರ್ಶಿಗಳು ಇದನ್ನು ಸ್ವೀಕರಿಸಿ 12-9-2019ರಂದು ಡಿಪಿಆರ್ ಗೆ ಕಳಿಹಿಸುತ್ತಾರೆ. ಇದು ತಮ್ಮ ವ್ಯಾಪ್ತಿಗೆ ಬಾರದಿದ್ದರೂ ಮುಖ್ಯ ಕಾರ್ಯದರ್ಶಿಗಳು ಯಾವ ಕಾರಣಕ್ಕೆ ಡಿಪಿಆರ್ ಗೆ ಕಳುಹಿಸಿದರು ಗೊತ್ತಿಲ್ಲ. ನಂತರ ತಮ್ಮ ಪತ್ರದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ಅನುಮತಿ ನೀಡುವ ಮುನ್ನ ಸ್ಪೀಕರ್ ಹಾಗೂ ಅಡ್ವಕೇಟ್ ಜೆನರಲ್ ಅವರ ಅನುಮತಿ ಪಡೆಯಬೇಕು ಎಂದು ತಿಳಿಸುತ್ತಾರೆ. ಇದು ಗೃಹ ಇಲಾಖೆಗೆ ಸಂಬಂಧಿಸಿದ ವಿಚಾರವಾಗಿದ್ದು, ಇದನ್ನು ಗೃಹ ಇಲಾಖೆಗೆ ರವಾನಿಸಲಾಗುವುದು ಎಂದು ತಿಳಿಸುತ್ತಾರೆ.
13-9-2019 ಈ ಪ್ರಕರಣದ ಮಾಹಿತಿಯನ್ನು ಗೃಹ ಇಲಾಖೆ ಹಾಗೂ ಅಡ್ವಕೇಟ್ ಜೆನರಲ್ ಅವರಿಗೆ ರವಾನಿಸಲಾಯಿತು. ಇದರ ಜತೆ ಕಾನೂನು ಪ್ರಕಾರ ಈ ಪ್ರಕರಣವನ್ನು ಮುಂದುವರಿಸಿ ಎಂದು ಹೇಳುತ್ತಾರೆ.
16-9-2019ರಂದು ಇಡಿಯ ಪತ್ರವನ್ನು ಪರಿಶೀಲಿಸಿದ ಅಧಿಕಾರಿಗಳು ಇದು ಪಿಎಎಲ್ಎ ಕಾಯ್ದೆ ಆಗಿರುವುದರಿಂದ ತನಿಖೆ ಅಗತ್ಯವಿದೆ ಎಂದು ಹೇಳುತ್ತಾರೆ. ಇದರ ತನಿಖೆಯನ್ನು ನೀಡಲು ಸ್ಪೀಕರ್ ಅನುಮತಿ ಪಡೆಯಬೇಕಾ ಅಥವಾ ರಾಜ್ಯಪಾಲರ ಅನುಮತಿ ಪಡೆಯಬೇಕಾ ಎಂದು ಪ್ರಶ್ನೆ ಎತ್ತುತ್ತಾರೆ. ಜನಪ್ರತಿನಿಧಿ ವಿರುದ್ಧ ಪ್ರಕರಣವನ್ನು ಸಿಬಿಐಗೆ ವಿಚಾರಣೆಗೆ ನೀಡುವ ವಿಚಾರವಾದ್ದರಿಂದ ಇದನ್ನು ಮುಖ್ಯಮಂತ್ರಿಗಳ ಮುಂದೆ ಇಡುತ್ತೇವೆ ಎಂದು ತಿಳಿಸುತ್ತಾರೆ.
16-9-2019ರಂದು ಉಪಕಾರ್ಯದರ್ಶಿಗಳಿಂದ ಎಸಿಎಸ್ ಅವರಿಗೆ ಪತ್ರ ರವಾನೆಯಾಗುತ್ತದೆ. ನಂತರ ಇದನ್ನು ಅಡ್ವಕೇಟ್ ಜೆನರಲ್ ಅವರಿಗೆ ರವಾನಿಸಿ ಹಾಲಿ ಶಾಸಕರ ವಿರುದ್ಧದ ಈ ಪ್ರಕರಣ ಸಿಬಿಐಗೆ ನೀಡಲು ಸ್ಪೀಕರ್ ಅಥವಾ ರಾಜ್ಯಪಾಲರ ಅನುಮತಿ ಪಡೆಯಬೇಕಾ ಎಂಬ ವಿಚಾರವಾಗಿ ಕಾನೂನು ಇಲಾಖೆಯ ಅಭಿಪ್ರಾಯ ನೀಡಿ ಎಂದು ಕೇಳಿದರು.
17-9-2019ರಂದು ಎಜಿ ಅವರು ಯಾವುದೇ ಅಭಿಪ್ರಾಯ ನೀಡದೇ, ಐದು ದಿನಗಳ ಕಾಲ ಕಾಯುತ್ತಾರೆ. 24-9-2019ರಂದು ಇಡಿ ಇಲಾಖೆಯ ಮೂಲ ಪತ್ರ ಅಡ್ವಕೇಟ್ ಜೆನರಲ್ ಅವರ ಬಳಿ ಇದೆ ಎಂದು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹೊಸ ಫೈಲ್ ಓಪನ್ ಮಾಡಿ, ಅದೇ ದಿನ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಅಲ್ಲಿಯವರೆಗೂ ಅಡ್ವಕೇಟ್ ಜೆನರಲ್ ಅವರ ಅಭಿಪ್ರಾಯ ಪಡೆದಿರುವುದಿಲ್ಲ. ನಂತರ 25-9-2019ರಂದು, ಮುಖ್ಯಮಂತ್ರಿಗಳು ಈಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ಮೌಖಿಕವಾಗಿ ಆದೇಶ ನೀಡುತ್ತಾರೆ. ಮುಖ್ಯಮಂತ್ರಿಗಳು ಈ ವಿಚಾರವನ್ನು ಅಡ್ವಕೇಟ್ ಜೆನರಲ್ ಅವರ ಬಳಿ ದೂರವಾಣಿ ಮೂಲಕ ಚರ್ಚೆ ಮಾಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿರುತ್ತಾರೆ.
ಹಾಲಿ ಶಾಸಕರ ವಿರುದ್ಧದ ಪ್ರಕರಣ ತನಿಖೆ ಹಸ್ತಾಂತರಿಸಲು ಎಜಿ ಅಭಿಪ್ರಾಯ ಪಡೆಯದೇ ಆತುರ ಪಟ್ಟಿದ್ದು ಯಾಕೆ? ಮೌಖಿಕ ಆದೆಶ ನೀಡುತ್ತಾರೆ ಎಂದರೆ ಇದರ ಹಿಂದಿನ ಉದ್ದೇಶವೇನು? ಈಗ ಕಾನೂನು ಸಂವಿಧಾನದ ಬಗ್ಗೆ ಮಾತನಾಡುವ ಬಿಜೆಪಿಗರು ಕಾನೂನು ಸಂವಿಧಾನದ ಬಗ್ಗೆ ಅರಿವಿದೆಯೇ ಎಂದು ಈ ಪ್ರಶ್ನೆಗಳಿಗೆ ಉತ್ತರಿಸಬೇಕು.
ಮುಖ್ಯಮಂತ್ರಿಗಳು ಆದೇಶ ನೀಡಿದ ನಂತರ ಪಡೆದ ಎಜಿ ಅವರು ತಮ್ಮ ಅಭಿಪ್ರಾಯ ನೀಡಿದ್ದು, ಈ ಪ್ರಕರಣವನ್ನು ಜನಪ್ರತಿನಿಧಿ ಯಾವ ತಪ್ಪು ಮಾಡಿದ್ದಾರೆ ಎಂದು ಮೊದಲು ನಾವು ತನಿಖೆ ಮಾಡಿ ನಂತರ ಸಿಬಿಐ ತನಿಖೆಗೆ ಹಸ್ತಾಂತರಿಸಬೇಕು. ಇಲ್ಲದಿದ್ದರೆ ಸಿಬಿಐಗೆ ನೀಡಲು ಬರುವುದಿಲ್ಲ ಎಂದು ಎಜಿ ಅವರು ತಿಳಿಸಿದ್ದರು.
ಬಿಜೆಪಿಯಲ್ಲಿ ಅವಿವೇಕತನ ಪರಮಾವಧಿಗೆ ಮುಟ್ಟಿದೆ. ಕೇಂದ್ರ ಸರ್ಕಾರದ ಪ್ರಕಟಣೆಯಲ್ಲಿ ಸಿಬಿಐ ತನಿಖೆಯ ಪ್ರಸ್ತಾವನೆ ವಿಚಾರವಾಗಿ ಕೆಲವು ಮಾನದಂಡಗಳನ್ನು ನಿಗದಿ ಮಾಡಲಾಗಿದೆ.
1.ಪ್ರಕರಣದ ಮಾಹಿತಿ ಬೇಕು.
2 ಈ ಪ್ರಕರಣದ ಎಫ್ಐಆರ್ ಇಂಗ್ಲೀಷ್ ಪ್ರತಿ ನೀಡಬೇಕು.
- ಪ್ರಕರಣದ ಕುರಿತ ನ್ಯಾಯಾಲಯದ ವಿಚಾರಣೆ ಪ್ರತಿ ನೀಡಬೇಕು.
- ಸಿಬಿಐ ಪ್ರಕರಣ ಹಸ್ತಾಂತರ ಮಾಡುವಾಗ ಅಂತರ ರಾಜ್ಯ ಅಥವಾ ಅಂತರ ರಾಷ್ಟ್ರೀಯ ವಿಚಾರದ ಬಗ್ಗೆ ಸಂಪಷ್ಟನೆ ನೀಡಬೇಕು
- ಪ್ರಕರಣವನ್ನು ರಾಜ್ಯ ಪೊಲೀಸ್ ಅಥವಾ ರಾಜ್ಯ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಸ್ಪಷ್ಟನೆ ನೀಡಬೇಕು.
ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಬೇಕಾದರೆ ಈ ಪ್ರಕರಣದ ಕುರಿತ ಎಫ್ಐಆರ್ ಎಲ್ಲಿತ್ತು? ಆಗ ಶಿವಕುಮಾರ್ ಅವರು ಜೈಲಲ್ಲಿ ಇದ್ದರೇ? ಅಥವಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದಾದರೂ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತೇ? ಈ ಪ್ರಕರಣದಲ್ಲಿ ಅಂರತ ರಾಜ್ಯ ಅಥವಾ ಅಂತರ ರಾಷ್ಟ್ರೀಯ ವಿಚಾರ ಇದೆಯಾ? ಇನ್ನು ಈ ಪ್ರಕರಣವನ್ನು ಸಿಬಿಐಗೆ ನೀಡುವಾಗ ಪೊಲೀಸ್ ಇಲಾಖೆ ಅಥವಾ ರಾಜ್ಯ ತನಿಖಾ ಸಂಸ್ಥೆಗಳಿಂದ ತನಿಖೆ ಅಸಾಧ್ಯ ಎಂದು ಸ್ಪಷ್ಟೀಕರಣ ನೀಡಿದ್ದೀರಾ? ನೀಡಿದ್ದರೆ ಅದರ ಪ್ರತಿ ನೀಡಿ. ಈ ಐದು ಮಾನದಂಡಗಳಲ್ಲಿ ಯಾವ ಮಾನದಂಡಗಳನ್ನು ಪಾಲನೆ ಮಾಡಿ ಸಿಬಿಐಗೆ ತನಿಖೆಗೆ ಹಸ್ತಾಂತರ ಮಾಡಿದಿರಿ?
ಈ ಎಲ್ಲಾ ದಾಖಲೆಗಳು ಆಗಿನ ಬಿಜೆಪಿ ಸರ್ಕಾರದ ದಾಖಲೆಗಳು. ಇವುಗಳ ಪ್ರಕಾರ ಈ ಪ್ರಕರಣ ಕೇವಲ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿದೆ. ಮಾಧ್ಯಮಗಳ ಕ್ಯಾಮೆರಾ ಮುಂದೆ ಬಂಗು ಸಂವಿಧಾನದ ಕಗ್ಗೊಲೆ ಎನ್ನುವ ಬಿಜೆಪಿ ನಾಯಕರೇ ಕಾನೂನಿನ ಕಗ್ಗೊಲೆ ಮಾಡಿರುವವರು ಯಾರು? ನಿಯಮಗಳನ್ನು ಗಾಳಿಗೆ ತೂರಿದವರು ಯಾರು?
1-10-2019ರಂದು ಕೇಂದ್ರ ಸರ್ಕಾರ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುತ್ತಿದ್ದು, ಈ ಪ್ರಕರಣದ ಎಫ್ಐಆರ್, ಇತರೆ ಮಾಹಿತಿಯನ್ನು ನೀಡಿ ಎಂದು ಕೇಳುತ್ತಾರೆ. ಆದರೆ ರಾಜ್ಯ ಸರ್ಕಾರ ಶೂನ್ಯ ದಾಖಲೆಗಳನ್ನು ಒದಗಿಸಿತು.
4-11-2019ರಂದು ಯಾವುದೇ ಎಫ್ಐಆರ್ ದಾಖಲಾಗದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಈ ಫೈಲ್ ಅನ್ನು ಮುಖ್ಯಕಾರ್ಯದರ್ಶಿಗಳ ಮುಂದೆ ಇರಿಸಲಾಗಿದೆ ಎಂದು ಪತ್ರ ಬರೆಯಲಾಗಿದೆ.
22-11-2019ರಂದು ಯಾವುದೇ ದಾಖಲೆ ಇಲ್ಲದಿದ್ದರೂ ಮುಖ್ಯಮಂತ್ರಿಗಳು ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುತ್ತಾರೆ. ಇಷ್ಟು ಲೋಪಗಳಿದ್ದರೂ ಈ ತೀರ್ಮಾನ ಮಾಡಿದ್ದು ಯಾಕೆ?
03-10-2020ರಂದು 13 ತಿಂಗಳ ನಂತರ ಸಿಬಿಐ ಎಫ್ಐಆರ್ ದಾಖಲಿಸುತ್ತದೆ. ಇದೆಲ್ಲವು ರಾಜ್ಯ ಹಾಗೂ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಈ ರೀತಿ ಮಾಡಿದ್ದಾರೆ. ಈ ಪ್ರಕರಣ ಹಸ್ತಾಂತರ ನೀಡುವಾಗ ಯಾವ ಕಾನೂನು ಪಾಲನೆ ಆಗಿದೆ ಎಂದು ಬಿಜೆಪಿ ನಾಯಕರು ಉತ್ತರಿಸಲಿ.
ನಮ್ಮ ಸರ್ಕಾರ ಕಾನೂನಾತ್ಮಕವಾಗಿ ಪ್ರಕರಣ ಹಿಂಪಡೆದರೆ ಇವರಿಗೆ ಬೆಂಕಿ ಬಿದ್ದಿದೆ. ಈ ವಿಚಾರವಾಗಿ ಈಗಾಗಲೇ 3 ಸುಪ್ರೀಂ ಕೋರ್ಟ್ ಆದೇಶಗಳಿವೆ. ಉತ್ತರಪ್ರದೇಶ ಸರ್ಕಾರ ವರ್ಸಸ್ ಮಹರಾಜ ಧರ್ಮೇಂದ್ರ ಪ್ರಸಾದ್ ಸಿಂಗ್ 1989, ದೋರ್ಜಿ ವರ್ಸಸ್ ಸಿಬಿಐ 1994 ಪ್ರಕರಣಗಳ ಸುಪ್ರೀಂ ಕೋರ್ಟ್ ಆದೇಶಗಳು ಇವೆ. ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಎಲ್ಲಾ ಸಾಧಕ ಬಾದಕ ನೋಡಿಕೊಂಡು ಕಾನೂನು ಪ್ರಕಾರವಾಗಿ ತೀರ್ಮಾನ ಮಾಡಿದ್ದೇವೆ.
ಇಂದು ಉತ್ತರ ಕೊಡಬೇಕಾದವರು, ಅಂದಿನ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳು. ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಉತ್ತರ ನೀಡಬೇಕು. ಇದು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧದ ಪಿತೂರಿಯಲ್ಲದೇ ಮತ್ತೇನೂ ಅಲ್ಲ. ಇದಕ್ಕೆ ನಾವು ಹೆದರುವುದಿಲ್ಲ. ನಮಗೆ ಸಂವಿಧಾನ, ಕಾನೂನಿನ ಮೇಲೆ ಅಪಾರವಾದ ನಂಬಿಕೆ ಇದೆ. ನಾವು ಸಂವಿಧಾನ ಹಾಗೂ ಕಾನೂನು ಪ್ರಕಾರ ನಡೆಯುತ್ತೇವೆ. ಈ ವಿಚಾರವಾಗಿ ಬಿಜೆಪಿ ನಾಯಕರು ಎಲ್ಲಿ ಬೇಕಾದರೂ ಚರ್ಚೆಗೆ ಕರೆಯಲಿ ನಾವು ಸಿದ್ಧವಿದ್ದೇವೆ. ಐಟಿ, ಇಢಿ ಸಿಬಿಐನವರು ಈ ಪ್ರಕರಣವನ್ನು ಹಸ್ತಾಂತರ ಮಾಡಿ ಎಂದು ಕೇಳಿರುವ ಯಾವುದಾದರೂ ಒಂದು ಪತ್ರವನ್ನು ನಮಗೆ ತೋರಿಸಿ.
ನಿಮ್ಮ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡವನ್ನು ಉಲ್ಲಂಘನೆ ಮಾಡಿರುವುದೇಕೆ. ಈ ಬಗ್ಗೆ ಸದನದಲ್ಲಿ ಚರ್ಚೆಗೆ ಬರುವುದಾದರೆ ಬರಲಿ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಡಿಯೂರಪ್ಪ ಅವರ ಪ್ರಕರಣ ಸೇರಿದಂತೆ ಯಾವುದೇ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಸಿಬಿಐ ವಿಚಾರಣೆಗೆ ನೀಡಿಲ್ಲ.
ಪ್ರಶ್ನೋತ್ತರ:
ನಿಮ್ಮ ನಾಯಕರು ಯಾವುದೇ ತಪ್ಪು ಮಾಡಿಲ್ಲವಾದರೆ ಸಿಬಿಐ ತನಿಖೆಗೆ ಹೆದರುತ್ತಿರುವುದೇಕೆ “ನಾವು ಹೆದರುತ್ತಿಲ್ಲ. ನಾವು ದಾಖಲೆ ಸಮೇತ ಇಟ್ಟಿರುವ ಪ್ರಶ್ನೆಗಳಿಗೆ ಸಿಬಿಐ ಉತ್ತರಿಸಲಿ. ನ್ಯಾಯಾಲಯದಲ್ಲಿ ಶಿವಕುಮಾರ್ ಅವರು ಹೋರಾಟ ಮಾಡುತ್ತಿದ್ದು, ನ್ಯಾಯಲಯ ತನ್ನ ತೀರ್ಮಾನ ಮಾಡಲಿ. ಇಲ್ಲಿ ನಮ್ಮ ಪ್ರಶ್ನೆ ಸಿಬಿಐ ವಿಚಾರಣೆಗೆ ಅನುಮತಿ ನೀಡಿರುವ ಮಾನ್ಯತೆ ಬಗ್ಗೆ ಮಾತ್ರ. ಅದರ ಹೊರತಾಗಿ ಕಾನೂನು ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ಇರುವ ಪ್ರಕರಣ ಆರೋಪಪಟ್ಟಿ ಸಲ್ಲಿಕೆ ಹಂತದಲ್ಲಿರುವಾಗ ಈ ತೀರ್ಮಾನ ಯಾಕೆ ಎಂದು ಕೇಳಿದಾಗ, “ನಮಗೆ ಯಾವುದೇ ಭಯವಿಲ್ಲ. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಆದರೆ ಇಲ್ಲಿ ಉಪ್ಪು ತಿಂದಿಲ್ಲವಲ್ಲ. ನಾವು ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಮಾಡಬಹುದಾಗಿತ್ತು. ಈಗ ಆದ್ಯತೆ ಮೇರೆಗೆ ಇದನ್ನು ಮಾಡಿದ್ದೇವೆ. ನಾವು ಶಿವಕುಮಾರ್ ಅವರ ಬಗ್ಗೆ ಮಾತನಾಡುತ್ತಿಲ್ಲ. ಅವರು ತಪ್ಪು ಮಾಡಿದ್ದಾರೋ ಇಲ್ಲವೋ ಎಂದು ನ್ಯಾಯಲಯ ತೀರ್ಮಾನ ಮಾಡಲಿದೆ. ಅದರ ಬಗ್ಗೆ ನಾವು ನೀವು ತೀರ್ಮಾನ ಮಾಡಲು ಆಗುವುದಿಲ್ಲ. ನಾವು ಸಿಬಿಐಗೆ ವಿಚಾರಣೆಗೆ ಅನುಮತಿ ನೀಡಿರುವ ಬಗ್ಗೆ ಮಾತ್ರ ನಾವು ಚರ್ಚೆ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಶಿವಕುಮಾರ್ ಅವರ ರಕ್ಷಣೆಗೆ ಸರ್ಕಾರ ನಿಂತಿಲ್ಲವೇ ಎಂದು ಕೇಳಿದಾಗ, “ನಾವು ಕಾನೂನು ಪಾಲನೆ ಮಾಡಿ ತೀರ್ಮಾನ ಮಾಡಿರುವ ಬಗ್ಗೆ ಇಷ್ಟು ಪ್ರಶ್ನೆ ಮಾಡುತ್ತಿದ್ದೀರಿ. ಬಿಜೆಪಿ ಸರ್ಕಾರ ಕಾನೂನು ಬಾಹೀರವಾಗಿ ತೀರ್ಮಾನ ಮಾಡಿದ್ದರ ಬಗ್ಗೆ ಪ್ರಶ್ನೆ ಕೇಳುತ್ತಲೇ ಇಲ್ಲ” ಎಂದು ತಿಳಿಸಿದರು.
ಇಂದಿನ ಅಡ್ವಕೇಟ್ ಜೆನರಲ್ ಶಿವಕುಮಾರ್ ಅವರ ಆಪ್ತ ಕಾನೂನು ಸಲಹೆಗಾರರಿರಬಹುದು ಎಂಬ ಯತ್ನಾಳ್ ಅವರ ಅನುಮಾನದ ಬಗ್ಗೆ ಕೇಳಿದಾಗ, “ಅಡ್ವಕೇಟ್ ಜೆನರಲ್ ಯಾರೇ ಆಗಿರಲಿ, ಕಾನೂನು ಒಂದೇ ಅಲ್ಲವೇ? ಯತ್ನಾಳ್ ಅವರು ಆಗ ಏಕೆ ಸುಮ್ನಿದ್ದರು? ಬಿಜೆಪಿ ಅವಧಿಯಲ್ಲಿ ಪಿಎಸ್ಐ ಹಗರಣ, ಗಂಗಾ ಕಲ್ಯಾಣ ಹಗರಣ ಯಾರು ಮಾಡಿದ್ದಾರೆ ಎಂದು ಗೊತ್ತಿದೆಯಲ್ಲವೇ? ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ಅಲ್ಲವೇ? ಆಗ ಸಾರ್ವಜನಿಕರ ಹಿತಾಸಕ್ತಿ ಆಧಾರದ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ? ಆಗಿನ ಅಡ್ವಕೇಟ್ ಜೆನರಲ್ ಯಾರ ಸಂಬಂಧಿಕರಾಗಿದ್ದರು? ಬಿಜೆಪಿ ಈ ಪ್ರಕರಣದ ತನಿಖೆಯನ್ನು ಕಾನೂನು ಬಾಹೀರವಾಗಿ ಸಿಬಿಐ ವಿಚಾರಣೆಗೆ ನೀಡಿದೆ ಎಂಬುದಷ್ಟೇ ನಮ್ಮ ವಾದ” ಎಂದರು.
ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಶಿವಕುಮಾರ್ ಅವರ ರಕ್ಷಣೆಗೆ ಪ್ರಯತ್ನಿಸುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಕೇಂದ್ರ ಬಿಜೆಪಿ ಸರ್ಕಾರ ಅಷ್ಟು ಪ್ರಾಮಾಣಿಕವಾಗಿದ್ದರೆ, ಯಡಿಯೂರಪ್ಪ, ವಿಜಯೇಂದ್ರ ಅವರ ಪ್ರಕರಣ ಹಾಗೂ ಬಿಟ್ ಕಾಯಿನ್ ಹಗರಣವನ್ನು ಸಿಬಿಐ ತನಿಖೆಗೆ ಯಾಕೆ ನೀಡುತ್ತಿಲ್ಲ?” ಎಂದು ಮರುಪ್ರಶ್ನೆ ಹಾಕಿದರು.