ಬೆಂಗಳೂರು: ದಾವೋಸ್ ಶೃಂಗಸಭೆಯಲ್ಲಿ ರಾಜ್ಯವು ಈ ಸಲ ಪ್ರಜ್ಞಾಪೂರ್ವಕವಾಗಿಯೇ ಭಾಗವಹಿಸುತ್ತಿಲ್ಲ. ಅಲ್ಲಿಗೂ ಹೋಗಿ ಒಡಂಬಡಿಕೆಗಳಿಗೆ ಸಹಿ ಹಾಕುವುದು ಮತ್ತು ಅವೇ ಕಂಪನಿಗಳನ್ನು ಇಲ್ಲಿಗೂ ಕರೆದು ಮತ್ತೆ ಅದೇ ಒಡಂಬಡಿಕೆಗಳಿಗೆ ಸಹಿ ಹಾಕುವುದರಿಂದ ವೃಥಾ ಗೊಂದಲ ಉಂಟಾಗುತ್ತದೆ. ಇದನ್ನು ತಪ್ಪಿಸಲೆಂದೇ ನಾವು ಈ ಸಲ ದಾವೋಸ್ ಶೃಂಗಸಭೆಯಿಂದ ದೂರ ಉಳಿದಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಅವರು ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಫೆ.11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಾಗತಿಕ ಮಟ್ಟದ ಕಂಪನಿಗಳೆಲ್ಲ ಭಾಗವಹಿಸಲಿವೆ. ಇದರಿಂದ ರಾಜ್ಯಕ್ಕೆ 8ರಿಂದ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಬರುವ ನಿರೀಕ್ಷೆ ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಮಾಡಿಕೊಳ್ಳುವ ಒಡಂಬಡಿಕೆಗಳ ಪೈಕಿ ಮುಕ್ಕಾಲು ಪಾಲಾದರೂ ವಾಸ್ತವವಾಗಿ ಬಂಡವಾಳ ರೂಪದಲ್ಲಿ ನಮಗೆ ಬರಬೇಕು. ಇಲ್ಲದೆ ಹೋದರೆ ಎಲ್ಲವೂ ವ್ಯರ್ಥ. ಆದ್ದರಿಂದ ನಾವು ವಾಸ್ತವಿಕ ದೃಷ್ಟಿಕೋನ ಹೊಂದಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದನ್ನೇ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2022ರಲ್ಲಿ ಬಿಜೆಪಿ ಸರಕಾರ ಕೂಡ ಹೂಡಿಕೆದಾರರ ಸಮಾವೇಶ ಮಾಡಿ, 50 ಲಕ್ಷ ಕೋಟಿ ರೂಪಾಯಿ ಬರುತ್ತದೆ ಎಂದಿತು. ಅದರಲ್ಲೂ ಗ್ರೀನ್ ಎನರ್ಜಿ ವಲಯಕ್ಕೆ 2.40 ಲಕ್ಷ ಕೋಟಿ ರೂಪಾಯಿ ಹೂಡಿಕೆ ಆಗಲಿದೆ ಎಂದಿತು. ಆದರೆ ಒಂದು ರೂಪಾಯಿ ಕೂಡ ಬರಲಿಲ್ಲ ಎಂದು ಅವರು ನೈಜ ಚಿತ್ರಣ ಕೊಟ್ಟಿದ್ದಾರೆ.
ನಮ್ಮಲ್ಲಿ ಗ್ರೀನ್ ಎನರ್ಜಿ ಕ್ಷೇತ್ರಕ್ಕೆ ಅಷ್ಟೊಂದು ಬಂಡವಾಳ ತಡೆದುಕೊಳ್ಳುವ ಧಾರಣಾಶಕ್ತಿಯೇ ಇಲ್ಲ. ಆದರೂ ಬಿಜೆಪಿ ಸರಕಾರ ದೊಡ್ಡದಾಗಿ ಹೇಳಿಕೊಂಡಿತು. ಅಂತಹ ತಪ್ಪು ಈ ಬಾರಿ ಆಗುವುದಿಲ್ಲ ಎಂದು ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಜಾರಕಿಹೊಳಿಗೆ ಶಕ್ತಿ ಇದೆ
ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳಿ ಪಕ್ಷದ ನೇತಾರರು. ಅವರನ್ನು ರಾಜಕೀಯವಾಗಿ ಯಾರೂ ಮುಗಿಸಲಾರರು. ಅಂತಹ ಆಲೋಚನೆ ಕೂಡ ಯಾರಿಗೂ ಇಲ್ಲ. ಈ ವಿಚಾರವಾಗಿ ಬಿಜೆಪಿಯ ಜನಾರ್ದನ ರೆಡ್ಡಿ ಮಾತನಾಡಿರುವುದು ರಾಜಕೀಯಪ್ರೇರಿತ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.
ಶ್ರೀರಾಮುಲು ಮತ್ತು ರೆಡ್ಡಿ ಅವರ ಸಂಬಂಧ ಈಗ ಹಳಸಿದೆ. ಶ್ರೀರಾಮುಲು ನಮ್ಮ ಪಕ್ಷಕ್ಕೆ ಬರುವ ಆಸಕ್ತಿ ವ್ಯಕ್ತಪಡಿಸಿದರೆ, ಅದರ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಆದರೆ ರೆಡ್ಡಿ ವಿರುದ್ಧ ನಾವೆಲ್ಲರೂ ಹೋರಾಡಿದ್ದೇವೆ. ಹೀಗಾಗಿಯೇ ಹಿಂದೆ ಅವರು ನಮ್ಮ ಪಕ್ಷಕ್ಕೆ ಸೇರಲು ಬಂದರೂ ನಾವು ಅದನ್ನು ಒಪ್ಪಲಿಲ್ಲ ಎಂದು ಪಾಟೀಲ ಹೇಳಿದ್ದಾರೆ.