ಕಾವೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಕಾರ್ಯಕರ್ತರು ಹುಮ್ಮಸ್ಸಿನಿಂದ ಸರಕಾರದ ಸೌಲಭ್ಯ ಮುಟ್ಟಿಸಲು ಕಂಕಣ ಬದ್ಧರಾಗಬೇಕು. ಸ್ಥಳೀಯವಾಗಿ ಗೆಲುವು ತಡವಾದರೂ ಮುಂದೊಂದು ದಿನ ನಮ್ಮ ವಿಜಯೋತ್ಸವ ಈ ಭಾಗದಲ್ಲಿ ನಡೆಯುವಂತೆ ಕಟಿಬದ್ಧರಾಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳೀದ್ದಾರೆ.
ಪಚ್ಚನಾಡಿ ವಾರ್ಡ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕರ್ತರ ಸಮಾಲೋಚನ ಸಭೆ ಹಾಗೂ ಧನ್ಯವಾದ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡ ವರ್ಗದ ಪರ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಿದೆ. ಪಕ್ಷನೀಡಿದ ಭರವಸೆ ಈಡೇರಿಸಲು ಬೇಕಾದ ಕ್ರಮವನ್ನು ಸರಕಾರಕೈಗೊಳ್ಳುತ್ತದೆ. ಐದು ಗ್ಯಾರಂಟಿಗಳನ್ನು ಈಡೇರಿಸಲು ಕಾಲಾವಕಾಶ ಬೇಕಾಗಿರುವುದರಿಂದ ವಿಪಕ್ಷ ಬಿಜೆಪಿಯ ಟೀಕೆಗೆ ಭರವಸೆ ಅನುಷ್ಠಾನದ ಮೂಲಕ ಉತ್ತರ ನೀಡಲಾಗುವುದು ಎಂದರು.
ಚುನಾವಣೆಯ ಸಂದರ್ಭ ನಿಸ್ವಾರ್ಥವಾಗಿ ದುಡಿದು ಪಕ್ಷಕ್ಕೆ ಶಕ್ತಿ ತುಂಬಿದ ಕಾರ್ಯಕರ್ತರನ್ನು ಹಾಗೂ ವಾರ್ಡ್ ಮತ್ತು ಬೂತ್ ಮಟ್ಟದ ಪದಾಧಿಕಾರಿಗಳನ್ನು ಈ ಸಂದರ್ಭ ಶ್ಲಾಘಿಸಿದರಲ್ಲದೆ, ಸಂದರ್ಭ ಸ್ಥಳೀಯ ಪ್ರದೇಶದ ಸಮಸ್ಯೆಗಳ ಬಗ್ಗೆ ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಮಾಜಿ ಮೇಯರ್ ಹರಿನಾಥ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಸ್ಟ್ಯಾನ್ಸಿ ಮತ್ತಿತರರು ಉಪಸ್ಥಿತರಿದ್ದರು.