Home ಟಾಪ್ ಸುದ್ದಿಗಳು ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ: ಸಿದ್ದರಾಮಯ್ಯ

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ: ಸಿದ್ದರಾಮಯ್ಯ

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಡಿಸೆಂಬರ್ ಮೊದಲ ವಾರ ಮೇಕೆದಾಟುವಿನಿಂದ ಬೆಂಗಳೂರು ವರೆಗೆ
ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ, ಯೋಜನೆ ಜಾರಿಗೆ ಬೇರೆ ಯಾವ ತಕರಾರು ಇಲ್ಲದ ಕಾರಣ ರಾಜ್ಯ ಸರ್ಕಾರ ಕೂಡಲೇ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮೇಕೆದಾಟು ಯೋಜನೆಗೆ ತಮಿಳುನಾಡಿನವರು ಸುಮ್ಮನೆ ಕ್ಯಾತೆ ತೆಗೆಯುತ್ತಿದ್ದಾರೆ. ಆದರೆ ಅವರಿಗೆ ಈ ಯೋಜನೆಯಿಂದ ಯಾವುದೇ ತೊಂದರೆಯಾಗಲ್ಲ, ಒಂದಷ್ಟು ಲಾಭವಾಗುತ್ತದೆ. ವಿದ್ಯುತ್ ಉತ್ಪಾದನೆ, ಬೆಂಗಳೂರಿಗೆ ಕುಡಿಯುವ ನೀರಿನ ಜೊತೆಗೆ ಮೇಕೆದಾಟು ಅಣೆಕಟ್ಟಿನಲ್ಲಿ ನೀರು ಶೇಖರಣೆ ಆಗುವುದರಿಂದ ತಮಿಳುನಾಡಿನಲ್ಲಿ ನೀರಿನ ಅಭಾವ ಇದ್ದಾಗ ಅವರಿಗೆ ಅದನ್ನು ಉಪಯೋಗಿಸಿಕೊಳ್ಳಲು ಅವಕಾಶವಾಗುತ್ತದೆ.

ಯೋಜನೆ ಅನುಷ್ಠಾನವಾದ ಮೇಲೆ ಕೂಡ ಕಾವೇರಿ ಪ್ರಾಧಿಕಾರವು ನ್ಯಾಯಾಲಯದ ಆದೇಶದ ಅನುಸಾರ ತಮಿಳುನಾಡಿನ ಪಾಲಿನ ನೀರನ್ನು ಅವರಿಗೆ ಬಿಡುತ್ತದೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ವಿನಃ ಬೇರೆ ಯಾವ ಕಾರಣಗಳು ಇಲ್ಲ.

ಇದು ಕರ್ನಾಟಕದ ಗಡಿ ಒಳಗಡೆ ನಿರ್ಮಿಸಲು ಉದ್ದೇಶಿಸಿರುವ ಯೋಜನೆ, ತಮಿಳುನಾಡಿನವರಿಗೆ ಅವರ ಪಾಲಿನ ನೀರನ್ನು ಪಡೆಯಲು ಮಾತ್ರ ಹಕ್ಕಿದೆ. ನಾವು ಪ್ರವಾಹದ ನೀರನ್ನು ಶೇಖರಣೆ ಮಾಡಿಟ್ಟು, ಅದರ ಸದ್ಬಳಕೆ ಮಾಡಿಕೊಂಡರೆ ತಮಿಳುನಾಡಿಗೇನು ತೊಂದರೆ? ಸಮುದ್ರ ಪಾಲಾಗುತ್ತಿರುವ ಹೆಚ್ಚುವರಿ ನೀರನ್ನು ಸದುಪಯೋಗ ಮಾಡಿಕೊಳ್ಳಲು ರೂಪಿಸಿರುವ ಯೋಜನೆ ಇದು.

ಮೇಕೆದಾಟು ಯೋಜನೆ ಜಾರಿ ಮಾಡಲು ನಮ್ಮ ರಾಜ್ಯಕ್ಕೆ ಕಾನೂನಾತ್ಮಕ ಸೇರಿದಂತೆ ಎಲ್ಲ ರೀತಿಯ ಹಕ್ಕುಗಳಿವೆ. ಸರ್ವೋಚ್ಚ ನ್ಯಾಯಾಲಯದ ಅಥವಾ ಇತರೆ ಯಾವುದೇ ತಕರಾರುಗಳು ಇಲ್ಲ. ಹೀಗಾಗಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಕೂಡಲೇ ಅನುಮತಿ ಪತ್ರ ನೀಡಬೇಕು ಹಾಗೂ ರಾಜ್ಯ ಸರ್ಕಾರ ಕೂಡಲೇ ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಡಿಸೆಂಬರ್ ಮೊದಲ ವಾರದಲ್ಲಿ ಮೇಕೆದಾಟುವಿನಿಂದ ಬೆಂಗಳೂರು ನಗರದ ವರೆಗೆ ಪಾದಯಾತ್ರೆ ನಡೆಸುತ್ತೇವೆ. ಇನ್ನೆರೆಡು ದಿನದಲ್ಲಿ ನಿರ್ಧಿಷ್ಟ ದಿನಾಂಕವನ್ನು ಘೋಷಣೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಚುನಾವಣೆಗಾಗಿ ಅಥವಾ ಮತ ಗಳಿಕೆಗಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ. ನಮ್ಮ ಸರ್ಕಾರ ಮೇಕೆದಾಟು ಯೋಜನೆಯನ್ನು ರೂಪಿಸಿ, ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು. ಕೇಂದ್ರ ಸರ್ಕಾರ ಅನುಮತಿ ನೀಡದ ಕಾರಣಕ್ಕೆ ಯೋಜನೆ ಜಾರಿ ಸಾಧ್ಯವಾಗಿರಲಿಲ್ಲ.

ಕೃಷ್ಣ ಮೇಲ್ದಂಡೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ಈ ಹಿಂದೆ ಪಾದಯಾತ್ರೆ ನಡೆಸಿ, ನಾವು ಅಧಿಕಾರಕ್ಕೆ ಬಂದರೆ ಸುಮಾರು 50,000 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಹೇಳಿದ್ದೆವು, ನಂತರ 2013 ರಲ್ಲಿ ನಾವು ಅಧಿಕಾರಕ್ಕೆ ಬಂದಮೇಲೆ ವಾರ್ಷಿಕ ಹತ್ತು ಸಾವಿರ ಕೋಟಿ ರೂಪಾಯಿಯಂತೆ ಐದು ವರ್ಷಗಳಲ್ಲಿ ರೂ. 50,000 ಕೋಟಿಗೂ ಅಧಿಕ ಹಣವನ್ನು ನೀರಾವರಿ ಉದ್ದೇಶಕ್ಕೆ ಖರ್ಚು ಮಾಡಿದ್ದೆವು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ನಮಗೆ ನಾಡಿನ ರೈತರ ಮತ್ತು ಜನರ ಹಿತ ಮುಖ್ಯ.

ಸಿ.ಟಿ ರವಿ ತಾವು ಭಾರತದ ಪರ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಕನ್ನಡಿಗರ ಪರ, ಕರ್ನಾಟಕದ ಪರ ಇದ್ದೇವೆ. ಮೇಕೆದಾಟು ಯೋಜನೆ ಶೀಘ್ರ ಜಾರಿಯಾಗಬೇಕು ಎಂಬುದು ನಮ್ಮ ಒತ್ತಾಯ ಎಂದರು.

Join Whatsapp
Exit mobile version