Home ಟಾಪ್ ಸುದ್ದಿಗಳು ಮಹಿಳಾ ಹಾಗೂ ದಲಿತ ವಿರೋಧಿ ನೀತಿ RSS ಶಾಖೆಯಲ್ಲಿ ಕಲಿಸಿದ್ದಾ?: ಶಾಸಕ ಮುನಿರತ್ನ ಅವರನ್ನು ಪಕ್ಷದಿಂದ...

ಮಹಿಳಾ ಹಾಗೂ ದಲಿತ ವಿರೋಧಿ ನೀತಿ RSS ಶಾಖೆಯಲ್ಲಿ ಕಲಿಸಿದ್ದಾ?: ಶಾಸಕ ಮುನಿರತ್ನ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಕಾಂಗ್ರೆಸ್‌ ಪಟ್ಟು

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಕಮಿಷನ್ ಹಣಕ್ಕಾಗಿ ದೌರ್ಜನ್ಯ ಎಸಗುವಾಗ ದಲಿತ ಸಮುದಾಯ, ಮಹಿಳೆ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅತ್ಯಂತ ಕೀಳು ಪದಗಳನ್ನು ಬಳಸಿ ನಿಂದಿಸಿದ್ದನ್ನು ಈ ನಾಡು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಟ್ವೀಟ್‌ ಮಾಡಿದೆ.

ಈ ಮಹಿಳಾ ಹಾಗೂ ದಲಿತ ವಿರೋಧಿ ನೀತಿಯನ್ನು ಆರ್‌ಎಸ್‌ಎಸ್‌ ಶಾಖೆಯಲ್ಲಿ ಕಲಿಸಿದ್ದಾ? ನಿನ್ನೆ ನಡೆದ ಆರ್‌ಎಸ್‌ಎಸ್‌ ಸಭೆಯಲ್ಲಿ ದಲಿತ ವಿರೋಧಿ ಟ್ರೈನಿಂಗ್ ನೀಡಲಾಯಿತೇ ಎಂದು ಪ್ರಶ್ನೆ ಮಾಡಿದೆ. ಬಿಜೆಪಿ ದಲಿತರ ಬಗ್ಗೆ ಗೌರವ ಹೊಂದಿದ್ದೇ ಆದರೆ ಶಾಸಕನನ್ನು ಉಚ್ಚಾಟಿಸಲಿ, ಇಲ್ಲದಿದ್ದರೆ ಬಿಜೆಪಿಯ ದಲಿತ ವಿರೋಧಿ ನೀತಿಯನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದೆ.

ʼದಲಿತರ ಬಗ್ಗೆ, ಮಹಿಳೆಯರ ಬಗ್ಗೆ, ಒಕ್ಕಲಿಗ ಸಮುದಾಯದ ಬಗ್ಗೆ ಬಿಜೆಪಿಗಿರುವ ಅಸಹನೆ ದ್ವೇಷ ಮುನಿರತ್ನರ ಬಾಯಲ್ಲಿ ಬಯಲಾಗಿದೆ. ಬಿಜೆಪಿ ಆಡಳಿತದಲ್ಲಿ ಗುತ್ತಿಗೆದಾರರನ್ನು ಪೀಡಿಸುವ ಭೀಕರತೆಯ ಅನಾವರಣವಾಗಿದೆ, ಈ ಕಾರಣಕ್ಕಾಗಿಯೇ ಬಿಜೆಪಿ ಅವಧಿಯಲ್ಲಿ ಹಲವು ಗುತ್ತಿಗೆದಾರರು ಆತ್ಮಹತ್ಯೆಯ ದಾರಿ ಹಿಡಿದಿದ್ದರು ಎಂದು ಕುಟುಕಿದೆ.

ಬಿಜೆಪಿ ಪಕ್ಷ ಈ ನಾಡಿನ ದಲಿತ ಸಮುದಾಯದ ಕಾಲು ಹಿಡಿದು ಕ್ಷಮೆ ಕೇಳಬೇಕು, ನಾಡಿನ ಮಹಿಳೆಯರನ್ನು ಕೀಳಾಗಿ ಕಂಡಿರುವ ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗಿಯಾಗಲು ಯಾವುದೇ ಅರ್ಹತೆ ಹೊಂದಿಲ್ಲ. ದಲಿತರ ಬಗ್ಗೆ ಕೀಳು ಮಟ್ಟದಲ್ಲಿ ನಿಂದಿಸಿದ ಸಂಗತಿ ಹಾಗೂ ಒಕ್ಕಲಿಗ ಸಮುದಾಯದ ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡಿದ ತಮ್ಮ ಶಾಸಕನ ಬಗ್ಗೆ ಬಿಜೆಪಿ ನಾಯಕರು ಇನ್ನೂ ಮೌನವಾಗಿರುವುದು ಬಿಜೆಪಿಯ ದಲಿತ ಹಾಗೂ ಮಹಿಳಾ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದು ಆರೋಪ ಮಾಡಿದೆ.

Join Whatsapp
Exit mobile version