Home ಟಾಪ್ ಸುದ್ದಿಗಳು ‘ಅಗ್ನಿಪತ್’ ವಿರೋಧಿಸಿ ಜೂ.27ರಂದು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ: ರಾಮಲಿಂಗಾರೆಡ್ಡಿ

‘ಅಗ್ನಿಪತ್’ ವಿರೋಧಿಸಿ ಜೂ.27ರಂದು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ: ರಾಮಲಿಂಗಾರೆಡ್ಡಿ

ಬೆಂಗಳೂರು: ಭಾರತೀಯ ಯೋಧರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಅಗ್ನಿಪತ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇದೇ ತಿಂಗಳು 27ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೂ ರಾಜ್ಯಾದ್ಯಂತ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಂಸದರು, ಇತರೆ ನಾಯಕರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.


ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ನಡೆಸಿ ಶುಕ್ರವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿದರು. ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಬಣ್ಣ ಬಣ್ಣದ ಮಾತುಗಳ ಮೂಲಕ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು. ಕಳೆದ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ನೀಡಬೇಕಿತ್ತು. ಆದರೆ ನೀಡಲಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲೇ 60 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಈ ವಿಚಾರವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನೆಲೆ ಈಗ 10 ಲಕ್ಷ ಉದ್ಯೋಗ ಭರ್ತಿ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈ ದೇಶವನ್ನು ಹಂತ ಹಂತವಾಗಿ ನಾಶ ಮಾಡಲು ಹೊರಟಿದೆ. ನೋಟು ರದ್ದತಿ, ಅವೈಜ್ಞಾನಿಕ ಜಿಎಸ್ ಟಿ, ತರಾತುರಿ ಲಾಕ್ ಡೌನ್ ಮೂಲಕ ದೇಶದ ಆರ್ಥಿಕತೆಗೆ ನಾಶ. ಕರಾಳ ಕೃಷಿ ಕಾಯ್ದೆ ತಂದು ರೈತರ ಭವಿಷ್ಯ ನಾಶ ಮಾಡಲು ಮುಂದಾದರು. ನಂತರ ವ್ಯಾಪಕ ವಿರೋಧದಿಂದ ಹಿಂಪಡೆದರು. ಇನ್ನು ದೇಶದಲ್ಲಿ ಕೋಮುದ್ವೇಷ ಹಚ್ಚಿ ದೇಶದ ಐಕ್ಯತೆ ನಾಶ ಮಾಡಿದರೆ, ಅಧಿಕಾರ, ಸಂವಿಧಾನ ಸಂಸ್ಥೆಗಳ ದುರ್ಬಳಕೆ ಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ನಾಶ ಮಾಡಿದ್ದಾರೆ. ಈಗ ಆಗ್ನಿಪತ್ ಯೋಜನೆ ಹೆಸರಲ್ಲಿ ದೇಶದ ಭದ್ರತೆ ನಾಶ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.


ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂದರು. ಆದರೆ ಬಿಜೆಪಿ ರೈತರು ಹಾಗೂ ಯೋಧರನ್ನು ಫುಟ್ಬಾಲ್ ಆಟವಾಡುತ್ತಿದ್ದಾರೆ. ದೇಶ ಕಾಯುವ ಯೋಧರನ್ನು ಗುತ್ತಿಗೆ ಕಾರ್ಮಿಕರಂತೆ ಮಾಡುತ್ತಿದ್ದಾರೆ. ಆಮೂಲಕ ಭವಿಷ್ಯದ ಜತೆ ಆಟವಾಡುತ್ತಿರುವುದು ದುರಂತ. ಇವರು 23 ವರ್ಷದ ನಂತರ ಏನು ಮಾಡಬೇಕು? ಈ ವಿಚಾರವಾಗಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ಅಗ್ನಿವೀರರನ್ನು ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಇದು ದೇಶದ ಸೈನಿಕರ ಕುರಿತು ಬಿಜೆಪಿ ನಾಯಕರ ಮನಸ್ಥಿತಿಗೆ ಸಾಕ್ಷಿ. ಬಿಜೆಪಿಯ ನಾಯಕರ ಮಕ್ಕಳು ಅಗ್ನಿವೀರರಾಗಿ ಬಿಜೆಪಿ ಕಚೇರಿಯ ಗಾರ್ಡ್ ಆಗುತ್ತಾರಾ? ಬಿಜೆಪಿಯವರು ಕಂಡವರ ಮಕ್ಕಳನ್ನು ಬಾವಿಗೆ ಇಳಿಸಿ ಆಳ ನೋಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಈ ಯೋಜನೆಯಲ್ಲಿ ಸೇನೆ ಸೇವಾ ಅವಧಿ ಕೇವಲ 4 ವರ್ಷ ಮಾತ್ರ. ಯೋಧರಿಗೆ ಸೇನೆಯಲ್ಲಿ ಶ್ರೇಣಿ ಇಲ್ಲ, ಪಿಂಚಣಿ ಇಲ್ಲ, ಉದ್ಯೋಗ ಭದ್ರತೆ ಇಲ್ಲವಾಗಿದೆ. ಸೇವೆ ನಂತರ 11 ಲಕ್ಷ ನೀಡುವುದಾಗಿ ತಿಳಿಸಿದ್ದು, ಅದರ ಜತೆಗೆ ಬ್ಯಾಂಕುಗಳಲ್ಲಿ ಸಾಲ ನೀಡುತ್ತಾರಂತೆ. ಈ ಸರ್ಕಾರ ಎಲ್ಲರನ್ನು ಸಾಲಗಾರರನ್ನಾಗಿ ಮಾಡಲು ಪಣ ತೊಟ್ಟಿದೆಯೇ? ರಾಜ್ಯಗಳು ಜಿಎಸ್ ಟಿ ಪಾಲು ಕೇಳಿದರೆ ಸಾಲ ಕೊಡುತ್ತೇವೆ ಎನ್ನುತ್ತಾರೆ, ಕೇಂದ್ರ ಸರ್ಕಾರ 8 ವರ್ಷಗಳಲ್ಲಿ 100 ಕೋಟಿ ಸಾಲ ಮಾಡಿ ಎಲ್ಲಾ ಜನರನ್ನು ಸಾಲಗಾರರನ್ನಾಗಿ ಮಾಡಿದೆ. ಸ್ವಾತಂತ್ರ್ಯ ಬಂದ ನಂತರ ದೇಶದ ಸಾಲ 52 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಆದರೆ ಕಳೆದ ಎಂಟು ವರ್ಷಗಳಲ್ಲಿ ಮೋದಿ ಅರು 103 ಲಕ್ಷ ಕೋಟಿ ಸಾಲ ಮಾಡಿ, ದೇಶದ ಸಾಲದ ಪ್ರಮಾಣವನ್ನು 155 ಲಕ್ಷ ಕೋಟಿಗೆ ಕೊಂಡೊಯ್ದಿದ್ದಾರೆ. ಆ ಮೂಲಕ ಪ್ರತಿ ಪ್ರಜೆಯ ಮೇಲೆ 1.75 ಲಕ್ಷ ಸಾಲ ಹೊರಿಸಿದ್ದಾರೆ. ಇದೆಲ್ಲದರ ನಂತರ ಈಗ ಯೋಧರನ್ನು ಸಾಲಗಾರರನ್ನಾಗಿ ಮಾಡಲು ಹೊರಟಿದೆ. ಇಂತಹ ಪರಿಸ್ಥಿತಿಯಲ್ಲಿ ಸೇನೆಗೆ ಸೇರುವವರು ಯಾವ ಮನಸ್ಥಿತಿಯಲ್ಲಿ ಗಡಿ ಕಾಯುವರು? ಅರೆಕಾಲಿಕ ಸೈನಿಕರನ್ನು ನೇಮಿಸಿಕೊಂಡರೆ ದೇಶಕ್ಕೆ ಭದ್ರತೆ ಇರುತ್ತದೆಯೇ? ಮಕ್ಕಳು ಓದಿ ವಿದ್ಯಾವಂತರಾಗಿ ಭವಿಷ್ಯ ಕಟ್ಟಿಕೊಳ್ಳುವ ಸಮಯದಲ್ಲಿ ಸೇನೆಯಲ್ಲಿ ದೇಶ ಕಾಯಬೇಕು ನಂತರ ಅಲ್ಲಿಂದ ಹೊರ ಬಂದಮೇಲೆ ನಿರುದ್ಯೋಗಿಗಳಾಗಬೇಕಾ? ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.


ವ್ಯಾಪಕ ವಿರೋಧಗಳು ವ್ಯಕ್ತವಾದ ನಂತರ ರಕ್ಷಣಾ ಇಲಾಖೆ ಹುದ್ದೆಗಳಲ್ಲಿ 10% ಮೀಸಲಾತಿ, ಕೇಂದ್ರೀಯ ಸಶಸ್ತ್ರ ಪಡೆ, ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ 10% ಮೀಸಲಾತಿ. ಈ ಎರಡು ಪಡೆಗಳ ನೇಮಕಾತಿಯ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ. ನಾಗರೀಕ ವಿಮಾನಯಾನ ಸಚಿವಾಲಯದಲ್ಲಿ ಉದ್ಯೋಗ ಅವಕಾಶ, ಮರ್ಚೆಂಟ್ ನೇವಿಯಲ್ಲಿ ಸೇರಲು ಅಗತ್ಯವಿರುವ ತರಬೇತಿ ನೀಡಲಾಗುವುದು ಎಂದು ಹೇಳಲಾಗಿದೆ. ಈಗಾಗಲೇ ನಿವೃತ್ತ ಯೋಧರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲಾಗಿದ್ದು, ಅದರಲ್ಲೇ ಸರಿಯಾಗಿ ಅವರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಸರ್ಕಾರ ಎಷ್ಟು ನಿವೃತ್ತ ಯೋಧರಿಗೆ ಸರ್ಕಾರ ಇಲಾಖೆಗಳಲ್ಲಿ ಕೆಲಸ ನೀಡಲಾಗಿದೆ ಎಂದು ಶ್ವೇತಪತ್ರ ಹೊರಡಿಸಲಿ. ಇನ್ನು ಆದರೆ ಸರ್ಕಾರ ಕಳೆದ 3 ವರ್ಷಗಳಿಂದ ಸರಿಯಾಗಿ ಸೇನಾ ನೇಮಕಾತಿ ನಡೆಸಿಲ್ಲ. ಆದರೆ ರಕ್ಷಣಾ ಇಲಾಖೆಯಲ್ಲಿ 10% ಮೀಸಲಾತಿಯ ಪ್ರಕಾರ ಅಗ್ನಿವೀರ ಯೋಧರಿಗೆ ಎಷ್ಟು ಉದ್ಯೋಗ ನೀಡಲು ಸಾಧ್ಯ? ಇದಕ್ಕೂ ಮೊದಲು ನಾಗರೀಕ ವಿಮಾನಯಾನ ಸಚಿವಾಲಯದಲ್ಲಿ ಎಷ್ಟು ನಿವೃತ್ತ ಯೋಧರಿಗೆ ಸಚಿವಾಲಯದಲ್ಲಿ ಕೆಲಸ ಕೊಟ್ಟಿದ್ದಾರೆ? ಎಂದು ಅವರು ಪ್ರಶ್ನಿಸಿದರು.


ಸರ್ಕಾರ ಪೂರ್ಣಾವಧಿಗೆ ಯೋಧರನ್ನು ನೇಮಕಮಾಡಿಕೊಳ್ಳಬೇಕೇ ಹೊರತು, ಕೇವಲ ನಾಲ್ಕು ವರ್ಷಕ್ಕೆ ನೇಮಕಮಾಡಿಕೊಂಡು ನಂತರ ಅವರನ್ನು ಮನೆಗೆ ಕಳುಹಿಸಬಾರದು. ಇದರಿಂದ ಯುವಕರ ಭವಿಷ್ಯ ನಾಶವಾಗಲಿದೆ. ಈ ಹಿಂದೆ ಕನಿಷ್ಠ 15 ವರ್ಷಗಳ ಕಾಲ ಯೋಧರಿಗೆ ಸೇವಾ ಅವಧಿ ಮಾಡಿ ನಿವೃತ್ತಿ ಪಡೆಯಬಹುದಾಗಿತ್ತು. ಇಲ್ಲದಿದ್ದರೆ 60 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿತ್ತು. ಹೀಗಾಗಿ ಯುವಕರ ಭವಿಷ್ಯ ದೇಶದ ರಕ್ಷಣೆ, ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಸರಿಯಾಗಿಲ್ಲ. ಹೀಗಾಗಿ ಇದುವರೆಗೂ ಹೇಗೆ ಸೇನಾ ಯೋಧರನ್ನು ಯಾವ ರೀತಿ ನೇಮಕ ಮಾಡಲಾಗುತ್ತಿತ್ತೋ ಅದೇರೀತಿ ಮುಂದುವರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಎಲ್ಲರೂ ಬಂದು ಭಾಗವಹಿಸಬೇಕು.

ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಪ್ರಣಾಳಿಕೆ ನೀಡುತ್ತವೆ. ನಾವು ಕೊಟ್ಟ 165 ಭರವಸೆಗಳನ್ನು ಈಡೇರಿಸಿದ್ದು, ಮೋದಿ ಅವರ ಸರ್ಕಾರದ ಪ್ರಣಾಳಿಕೆ ಇಟ್ಟುಕಂಡು ಎಷ್ಟು ಈಡೇರಿವೆ ಎಂಬುದನ್ನು ಪಟ್ಟಿ ಮಾಡಲಿ. ಬೆಲೆ ಏರಿಕೆ ಇಳಿಸಿ ಪೆಟ್ರೋಲ್ ಅನ್ನು 50 ರೂ.ಗೆ, ಅಡುಗೆ ಅನಿಲವನ್ನು 100 ರೂ.ಗೆ ನೀಡುತ್ತೇವೆ ಎಂದರು. ಕಪ್ಪು ಹಣ ತರುತ್ತೇವೆ ಎಂದರು, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು.


ಖಾಸಗಿಯವರು ಈ ಅಗ್ನಿವೀರರಿಗೆ ಕೆಲಸ ನೀಡಲು ಮುಂದೆ ಬಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಹಿಂದೆ ಮೈಕೋ ಕಾರ್ಖಾನೆಯಲ್ಲಿ 8 ಸಾವಿರದಷ್ಟಿದ್ದ ಸಿಬ್ಬಂದಿ ಸಂಖ್ಯೆ ಈಗ 900ಕ್ಕೆ ಕುಸಿದಿದೆ. ಮಹೀಂದ್ರ ಟೆಕ್ ಸೇರಿದಂತೆ ಯಾವ ಸಂಸ್ಥೆಗಳೂ ಖಾಯಂ ಉದ್ಯೋಗ ನೇಮಕ ಮಾಡುತ್ತಿಲ್ಲ, ಎಲ್ಲರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ನಿರ್ವಹಿಸುತ್ತಿದ್ದಾರೆ. ನಾವು ಸೇನೆಯಲ್ಲಿ ಉದ್ಯೋಗ ಭದ್ರತೆ ಬೇಕು ಎಂದು ಆಗ್ರಹಿಸುತ್ತಿದ್ದೇವೆ. ಸೇನೆಯಲ್ಲಿ ನೀವು ಪ್ರಯೋಗ ಮಾಡಿ ಆಟವಾಡಬೇಡಿ. ಪ್ರತಿ ವರ್ಷ ನಿವೃತ್ತಿಯಾದಷ್ಟು ಯೋಧರನ್ನಾದರೂ ನೇಮಕ ಮಾಡಿಕೊಳ್ಳಬೇಕಲ್ಲವೇ? ನಾನು ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಇಧಿಕಾರಗಿಲು ನಿವೃತ್ತಿಯಾಗುತ್ತಿದ್ದಂತೆ ಅದಕ್ಕೆ ಪೂರಕವಾಗಿ ಹೊಸ ನೇಮಕಾತಿ ಮಾಡಿಕೊಳ್ಳುತ್ತಿದ್ದೆವು. ಅದೇ ರೀತಿ ಸೇನೆಯಲ್ಲೂ ನೇಮಕಾತಿ ಆಗಬೇಕು. ಸರ್ಕಾರ ಬೇಕಾದರೆ ಎಲ್ಲರೂ ಇಂತಿಷ್ಟು ವರ್ಷ ಸೇನೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಲಿ, ಅದನ್ನು ಬಿಟ್ಟು ಈ ರೀತಿ ಗಿಮಿಕ್ ಮಾಡುವುದು ಬೇಡ’ ಎಂದು ಉತ್ತರಿಸಿದರು.


ಇನ್ನು ಬಿಬಿಎಂಪಿ ವಾರ್ಡ್ ಮರುವಿಂಗಡಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮಗೆ ವಾರ್ಡ್ ಮರುವಿಂಗಡಣೆ ಕುರಿತ ಪ್ರತಿ ಕೈಗೆ ಸಿಕ್ಕಿಲ್ಲ. ನಾನು ಕೂಡ ವಾರ್ಡ್ ಗಳ ಪಟ್ಟಿ ನೋಡಿದೆ. ಬೌಂಡರಿಯ ಕುರಿತು ಸ್ಪಷ್ಟತೆ ಸಿಗುತ್ತಿಲ್ಲ. ಇದನ್ನು ಸರ್ಕಾರ ಮುಗುಮ್ಮಾಗಿ ಇಟ್ಟಿದೆ. ನನ್ನ ಕ್ಷೇತ್ರದಲ್ಲಿರುವ ವಾರ್ಡ್ ಗಳ ಪಟ್ಟಿ ನೋಡಿದ ನಂತರ ನನಗೆ ನನ್ನ ಕ್ಷೇತ್ರದ ವ್ಯಾಪ್ತಿ ಅಂದಾಜು ಸಿಗುತ್ತಿಲ್ಲ. ಇದರ ಪ್ರತಿ ಸಿಕ್ಕ ನಂತರ ನಮ್ಮ ಕ್ಷೇತ್ರದ ವ್ಯಾಪ್ತಿ ಎಷ್ಟಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ನಂತರ ನಾವು ಎಲ್ಲೆಲ್ಲಿ ಲೋಪದೋಷಗಳಿವೆಯೋ ಆ ವಿಚಾರದಲ್ಲಿ ಆಕ್ಷೇಪವನ್ನು ಸಲ್ಲಿಸುತ್ತೇವೆ. ಈ ಹಿಂದೆ ಮರುವಿಂಗಡಣೆಯನ್ನು ಪಾಲಿಕೆಯಲ್ಲಿ ಮಾಡದೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮಾಡುತ್ತಿದ್ದರು. ಈ ಬಾರಿ ಪಾಲಿಕೆ ಮುಖ್ಯಆಯುಕ್ತರನ್ನು ಮರುವಿಂಗಡಣೆ ಸಮಿತಿ ಮುಖ್ಯಸ್ಥರನ್ನಾಗಿ ಮಾಡಿ ಉಳಿದಂತೆ ಇಬ್ಬರು ಹಿರಿಯ ಅಧಿಕಾರಿಗಳನ್ನು ಸಂಚಾಲಕರನ್ನಾಗಿ ಮಾಡಿದ್ದಾರೆ. ಈ ಹಿಂದೆ ಮರು ವಿಂಗಡಣೆ ಮಾಡುವಾಗ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಅಲ್ಲಿ ರೆವೆನ್ಯೂ ಕಚೇರಿಗೆ ರವಾನಿಸಿ, ಅಲ್ಲಿ ಅಧಿಕಾರಿಗಲು ಕೂತು ಮಾನದಂಡಗಳ ಆಧಾರದ ಮೇಲೆ ಬೌಂಡರಿ ಮಾಡಿ, ಜನಸಂಖ್ಯೆ ಪ್ರಮಾಣ ನಿರ್ಧರಿಸಿ ನಂತರ ಅವರು ತಮ್ಮ ವರದಿ ಸಲ್ಲಿಸುತ್ತಿದ್ದರು. ಹೀಗೆ 298 ಕ್ಷೇತ್ರಗಳಿಂದಲೂ ವರದಿಗಳು ಬರುತ್ತಿದ್ದವು. ನಂತರ ಜಿಲ್ಲಾಧಿಕಾರಿಗಳುಈ ವರದಿಗಳನ್ನು ಪರಿಶೀಲಿಸುತ್ತಿದ್ದರು. ಆದರೆ ಈ ಬಾರಿ ರೆವೆನ್ಯೂ ಕಚೇರಿಗಳಿಗೆ ಇದು ಬರಲೇ ಇಲ್ಲ. ಪಾಲಿಕೆಯ ಯಾವ ಅಧಿಕಾರಿಗಳ ಗಮನಕ್ಕೂ ಬರಲಿಲ್ಲ. ಈ ಮರುವಿಂಗಡಣೆ ಪ್ರಕ್ರಿಯೆ ಬಿಜೆಪಿ ಪಕ್ಷದ ಕಚೇರಿ, ಕೇಶವಕೃಪ, ಬಿಜೆಪಿ ಸಂಸದರು, ಶಾಸಕರ ಕಚೇರಿಯಲ್ಲಿ ನಿಗದಿ ಮಾಡಲಾಗಿದೆ. ಇವರು ಕೊಟ್ಟ ವರದಿಗೆ ಆಯುಕ್ತರು ಮುದ್ರೆ ಒತ್ತಿದ್ದಾರೆ. ವಾರ್ಡ್ ಮರುವಿಂಗಡಣೆಯಲ್ಲಿ ಈ ಸಮಿತಿಯ ಯಾವ ಪಾತ್ರವೂ ಇಲ್ಲ. ಜಂಟಿ ಆಯುಕ್ತರು, ಆಯುಕ್ತರಿಗೆ ಈ ಬಗ್ಗೆ ಮಾಹಿತಿ ಇಲ್ಲ. ವರದಿಯಲ್ಲಿ 11 ಸಭೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಾರ್ಡ್ ಮರುವಿಂಗಡಮೆ ಶೇ.100ರಷ್ಟು ವೈಜ್ಞಾನಿಕವಾಗಿ ಆಗಿಲ್ಲ. ಬೇಕಾದರೆ ನೀವು 28 ಕ್ಷೇತ್ರಗಳ ಅಧಿಕಾರಿಗಳ ಬಳಿ ಹೋಗಿ ನೀವು ವಾರ್ಡ್ ಮರುವಿಂಗಡಣೆ ಮಾಡಿದ್ದೀರಿಯೇ ಎಂದು ಕೇಳಿ ನೋಡಿ. ಎಲ್ಲರೂ ನಮಗೆ ಆ ಬಗ್ಗೆ ಗೊತ್ತಿಲ್ಲ ಅಂತಲೇ ಹೇಳುತ್ತಾರೆ’ ಎಂದರು.


ಈಗ ಚುನಾವಣೆ ನಡೆದರೆ ನಿಮಗೆ ಕಷ್ಟವಾಗುತ್ತದೆಯೇ ಎಂಬ ಪ್ರಶ್ನೆಗೆ, ‘ಚುನಾವಣೆಯನ್ನು ಇಂದಲ್ಲ ನಾಳೆ ಮಾಡಲೇ ಬೇಕು. ಇದನ್ನು ಎಷ್ಟು ವರ್ಷ ಮುಂದಕ್ಕೆ ಹಾಕಲು ಸಾಧ್ಯ? ಆದರೆ ವಾಸ್ತವ ಸ್ಥಿತಿ ಏನಾಗಿದೆ ಎಂದು ಹೇಳುತ್ತಿದ್ದೇನೆ. ನೀವು ಇದನ್ನು ಪರಿಶೀಲಿಸಬೇಕಾದರೆ ಅಧಿಕಾರಿಗಳನ್ನೇ ಕೇಳಿ’ ಎಂದರು. ಈ ಮರುವಿಂಗಡಣೆ ವಿರುದ್ಧ ನ್ಯಾಯಾಲಯ ಮೆಟ್ಟಿಲೇರುತ್ತೀರಾ ಎಂಬ ಪ್ರಶ್ನೆಗೆ, ‘ಸದ್ಯ ನಮಗೆ ವಾರ್ಡ್ ಮರುವಿಂಗಡಣೆ ಪ್ರತಿ ಸಿಗಬೇಕು. ನಂತರ ಅವುಗಳನ್ನು ಪರಿಶೀಲಿಸಿ ಆಕ್ಷೇಪಣೆ ವ್ಯಕ್ತಪಡಿಸುತ್ತೇವೆ. ಅಧಾದ ನಂತರ ನ್ಯಾಯಾಲಯದ ಮೆಟ್ಟಿಲೇರುವ ವಿಚಾರ. ಅವರು ಎಲ್ಲವನ್ನು ಸರಿಯಾಗಿ ಮಾಡಿದ್ದರೆ ನಾವು ಒಪ್ಪುತ್ತೇವೆ. ಇಲ್ಲದಿದ್ದರೆ ಆಕ್ಷೇಪಣೆ ಹಾಕುತ್ತೇವೆ. ನಂತರ ಏನು ಮಾಡಬೇಕು ಎಂದು ನಿರ್ಧರಿಸುತ್ತೇವೆ’ ಎಂದರು. ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ವಾರ್ಡ್ ಹೆಚ್ಚಳ ಮಾಡಿಕೊಂಡು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ವಾರ್ಡ್ ಕಡಿಮೆ ಮಾಡಿರುವ ತಂತ್ರಗಾರಿಕೆ ಏನು ಎಂದು ಕೇಳಿದಾಗ, ‘ಅವರ ತಂತ್ರಗಾರಿಕೆ ಬಗ್ಗೆ ನೀವು ಅವರನ್ನೇ ಕೇಳಬೇಕು. ಅವರು ಕ್ಷೇತ್ರ ಹೆಚ್ಚಾಗಿ ಮಾಡಿಕೊಂಡರೆ ಗೆಲ್ಲುತ್ತೇವೆ ಎಂದು ಭಾವಿಸಿದ್ದಾರೆ. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯನ್ನೇ ನೋಡಿ. ನಮ್ಮದು ಒಂದೇ ಒಂದು ಸ್ಥಾನ ಇಲ್ಲದಿದ್ದರೂ 2 ಸ್ಥಾನ ಗೆದ್ದಿದೇವೆ. ಏನೇ ಮಾಡಿದರೂ ಬದಲಾವಣೆ ಗಾಳಿ ಬೀಸಿದರೆ ಎಲ್ಲರೂ ಉದುರಿ ಹೋಗುತ್ತಾರೆ’ ಎಂದು ತಿಳಿಸಿದರು.

Join Whatsapp
Exit mobile version