► ತ್ರಿಶೂಲ ದೀಕ್ಷೆ ನೀಡಿ ಜನರನ್ನು ಭಯಭೀತಗೊಳಿಸಿದ್ದ ಸಂಘಪರಿವಾರಕ್ಕೆ ಸಡ್ಡು ಹೊಡೆಯಲು ಮುಂದಾದ ಕಾಂಗ್ರೆಸ್
ಬೆಂಗಳೂರು: ತನ್ನ ಕಾರ್ಯಕರ್ತರಿಗೆ ಆಯುಧ ಪೂಜೆಯ ದಿನದಂದು ತ್ರಿಶೂಲ ದೀಕ್ಷೆಯಾಗಿ ನೀಡಿ ಜನರನ್ನು ಭಯಭೀತಗೊಳಿಸಿದ್ದ ಸಂಘಪರಿವಾರಕ್ಕೆ ಇದೀಗ ಕಾಂಗ್ರೆಸ್ ಸಡ್ಡು ಹೊಡೆಯಲು ನಿರ್ಧರಿಸಿದೆ. ಕಳೆದ ಸೋಮವಾರವಷ್ಟೆ ಮಂಗಳೂರಿನಲ್ಲಿ ಜನರಿಗೆ ಎಸ್ ಡಿಪಿಐ ಸಂವಿಧಾನ ದೀಕ್ಷೆ ನೀಡಿತ್ತು. ಇದೀಗ ಕಾಂಗ್ರೆಸ್ ಕೂಡ ಹಿಂಸೆ ಪ್ರತಿಯಾಗಿ ಸಂವಿಧಾನದ ಸಂದೇಶ ನೀಡುವ ಉದ್ದೇಶದಿಂದ ಜನರಿಗೆ ಸಂವಿಧಾನದ ಪ್ರತಿ ನೀಡಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಪಿಸಿಸಿ ವಕ್ತಾರ ಸಿಎಂ ಧನಂಜಯ, ಇದೇ ನವೆಂಬರ್ 26 ರಿಂದ ಸಂಘಪರಿವಾರದ ತ್ರಿಶೂಲ ದೀಕ್ಷೆಯ ವಿರುದ್ಧ ಕಾಂಗ್ರೆಸ್ ಸಂವಿಧಾನದ ಪ್ರತಿಗಳನ್ನು ವಿತರಿಸುವ ಮೂಲಕ ಅಭಿಯಾನವನ್ನು ಪ್ರಾರಂಭಿಸಲಿದೆ, ಮತ್ತು ಈ ದಿನವನ್ನು ನಾವು ಸಂವಿಧಾನ ದಿನ ಅಥವಾ ರಾಷ್ಟ್ರೀಯ ಕಾನೂನು ದಿನವಾಗಿ ಆಚರಿಸುತ್ತೇವೆ ಎಂದು ಹೇಳಿದ್ದಾರೆ.
ಸಂವಿಧಾನಕ್ಕೆ ವಿರುದ್ಧವಾದ ತ್ರಿಶೂಲ ವಿತರಣೆ ಜನರನ್ನು ಭಯಭೀತಗೊಳಿಸಿದೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ, ಯುವಕರು ತ್ರಿಶೂಲ ಹಿಡಿದು ಕಂಬಿಗಳ ಹಿಂದೆ ಹೋಗುತ್ತೀರಾ ಅಥವಾ ದೇಶವಾಸಿಗಳನ್ನು ರಕ್ಷಿಸುವ ಸಂವಿಧಾನವನ್ನು ಓದುತ್ತೀರಾ ಎಂದು ಕೇಳುತ್ತೇವೆ ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವುದಾಗಿ ಹೇಳಿಕೊಂಡು ರಾಜಕೀಯದಲ್ಲಿ ಅಕ್ರಮ ಮಾರ್ಗಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಬಿಜೆಪಿಗೆ ಮಾರ್ಗದರ್ಶನ ಮಾಡುವ ಆರೆಸ್ಸೆಸ್ ಗೆ ತಾನೇ ರಾಜಕೀಯಕ್ಕೆ ಬರಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.