Home ಟಾಪ್ ಸುದ್ದಿಗಳು ಬೆಲೆ ಏರಿಕೆ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬೆಲೆ ಏರಿಕೆ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಬೆಲೆ ಏರಿಕೆ ಸೇರಿದಂತೆ ಕೇಂದ್ರದ ಎಲ್ಲಾ ಜನವಿರೋಧಿ ನೀತಿಯನ್ನು ಖಂಡಿಸಿ, ‘ಬೆಲೆ ಏರಿಕೆ ಮುಕ್ತ ಭಾರತ’ಕ್ಕೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು.
ಅಖಿಲ ಭಾರತ ಕಾಂಗ್ರೆಸ್ ಬೆಲೆ ಏರಿಕೆ ಖಂಡಿಸಿ ದೇಶಾದ್ಯಾಂತ ನಡೆಸಿದ ಆಂದೋಲದ ಭಾಗವಾಗಿ ರಾಜ್ಯ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಿತು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಚುನಾವಣೆ ಗೆದ್ದ ನಂತರ ಬಡವರ ಲೂಟಿಗೆ ಇಳಿದಿದೆ. ಪಂಚರಾಜ್ಯ ಚುನಾವಣೆ ನಂತರ ಪ್ರತಿ ನಿತ್ಯ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದರೆ ಆದಾಯ ಮಾತ್ರ ಪಾತಾಳಕ್ಕೆ ಹೋಗುತ್ತಿದೆ. ಮೋದಿ ಅವರು ಎಲ್ಲ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ನಾನು ಹೋದ ಕಡೆಯೆಲ್ಲಾ ಕೇಳುತ್ತಿದ್ದೇನೆ. ಎಲ್ಲರೂ ನಮ್ಮ ಆದಾಯ ಕುಸಿದಿದೆ ಎಂದು ಹೇಳುತ್ತಿದ್ದಾರೆಯೇ ಹೊರತು ಆದಾಯ ಹೆಚ್ಚಾಗಿದೆ ಎಂದು ಯಾರೂ ಹೇಳಿಲ್ಲ ಎಂದು ಹೇಳಿದರು.


ದೇಶದ 17 ಸಾವಿರ ಉದ್ದಿಮೆದಾರರು ಈ ಸರ್ಕಾರದ ಕಿರುಕುಳ ತಾಳಲಾರದೆ ದೇಶ ತೊರೆದು ಆಸ್ಟ್ರೇಲಿಯಾ, ಸೌದಿ, ಕೆನಡಾಕ್ಕೆ ಹೋಗುತ್ತಿದ್ದಾರೆ. ಪ್ರತಿ ವ್ಯಕ್ತಿಯೂ ಈ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿದ್ದಾನೆ. ಸಣ್ಣ ಬೈಕು, ಕಾರು ಇಟ್ಟುಕೊಂಡ ಕುಟುಂಬಕ್ಕೆ ದಿನಕ್ಕೆ 100 ರೂ, ವೆಚ್ಚ ಹೆಚ್ಚಾಗಿದೆ. ಅಡುಗೆ ಅನಿಲ 410 ರಿಂದ 1000 ಆಗಿದೆ, ಪೆಟ್ರೋಲ್ 68 ರಿಂದ 111 ಆಗಿದೆ, ಡೀಸಲ್ 57 ರಿಂದ 97 ರೂ. ಆಗಿದೆ. ಅಡುಗೆ ಎಣ್ಣೆ 90 ರಿಂದ 210 ಆಗಿದೆ. ಗೊಬ್ಬರ 150 ರೂ. ಹೆಚ್ಚಾಗಿದೆ. ಹಾಲು ಶೇ. 20 ರಷ್ಟು, ವಿದ್ಯುತ್ ಬೆಲೆ ಹೆಚ್ಚಾಗುತ್ತಿದೆ. ಬಟ್ಟೆ ಬೆಲೆ ಶೇ. 20 ರಷ್ಟು ಹೆಚ್ಚಳವಾಗಿದೆ. ನಾವು ಜನರ ಮಧ್ಯೆ ಹೋಗಿ ಅವರಿಗೆ ನೆನಪು ಮಾಡಿಕೊಡಬೇಕು. ಕಾಂಗ್ರೆಸ್ ಸರ್ಕಾರ ಇದ್ದಾಗ ನಾವು ಹೇಗೆ ಬೆಲೆ ನಿಯಂತ್ರಣ ಮಾಡುತ್ತಿದ್ದೆವು. ಕಚ್ಛಾತೈಲ ಬೆಲೆ ಎಷ್ಟಿತ್ತು, ಈಗ ಎಷ್ಟಿದೆ? ಕೇವಲ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮಾತ್ರ ಹೆಚ್ಚಾಗುತ್ತಿಲ್ಲ. ಕಬ್ಬಿಣ 36 ಸಾವಿರದಿಂದ 90 ಸಾವಿರ ಆಗಿದೆ, ಸೀಮೆಂಟ್ 180 ರಿಂದ 450 ರೂ. ಆಗಿದೆ. ಮನೆ ಕಟ್ಟುವವರು ಹೇಗೆ ಕಟ್ಟಬೇಕು? ದಿನ ಬೆಳಗಾದರೆ ಜನರಿಗೆ ಸರ್ಕಾರ ಬೆಲೆ ಏರಿಕೆ ಗಿಫ್ಟ್ ಕೊಡುತ್ತಿದೆ ಎಂದು ಡಿಕೆಶಿ ಹೇಳಿದರು.


ನೂತನವಾಗಿ ಸುಮಾರು 150 ಪದಾಧಿಕಾರಿಗಳು ನೇಮಕಗೊಂಡಿದ್ದು, ಇನ್ನು 200 ಮಂದಿ ನೇಮಕವಾಗಲಿದ್ದಾರೆ. ನೀವುಗಳು ಪ್ರತಿ ಕ್ಷೇತ್ರ, ಮನೆ ಮನೆಗೂ ಹೋಗಿ ಮಾತನಾಡಿಸಿ ಅವರಿಗೆ ನಮ್ಮ ಆಚಾರ ವಿಚಾರ ಪ್ರಚಾರ ಮಾಡಬೇಕು. ಈ ಸರ್ಕಾರ ಹೇಗೆ ಅನ್ಯಾಯ ಮಾಡಿದೆ, ಕೋವಿಡ್ ಸಮಯದಲ್ಲಿ ಹೇಗೆ ನಡೆದುಕೊಂಡಿದೆ ಎಂದು ಜನರಿಗೆ ತಿಳಿಸಬೇಕು. ಪಕ್ಕದ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಕೊಟ್ಟರೂ ಇಲ್ಲಿ ಯಾವುದೇ ನೆರವು ನೀಡಲಿಲ್ಲ.


ನಾವು ಚಾಲಕರು, ಸಂಪ್ರದಾಯಿಕ ವೃತ್ತಿಪರರಿಗೆ ನೆರವು ನೀಡಬೇಕು ಎಂದು ಪ್ರತಿಭಟನೆ ಮಾಡಿದರೂ ಸರ್ಕಾರ ನೀಡಲಿಲ್ಲ. ಕೋವಿಡ್ ನಿಂದ 4.5 ಲಕ್ಷ ಜನ ಸತ್ತರೂ 45 ಸಾವಿರ ಲೆಕ್ಕ ಕೊಡುತ್ತಿದ್ದಾರೆ. ಅವರಿಗೂ ಪರಿಹಾರ ಕೊಟ್ಟಿಲ್ಲ. ದೇಶದಲ್ಲಿ ಶೇ.40 ರಷ್ಟು ಕಮಿಷನ್ ಪಡೆಯುವ ಸರ್ಕಾರ ಇದ್ದರೆ ಅದು ರಾಜ್ಯ ಬಿಜೆಪಿ ಸರ್ಕಾರ. ಈ ಸರ್ಟಿಫಿಕೇಟ್ ಕೊಟ್ಟವರು ನಾವಲ್ಲ. ಇದನ್ನು ಕೊಟ್ಟವರು ನೋಂದಣಿಯಾಗಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷರು. ಈ ಬಗ್ಗೆ ಪ್ರಧಾನ ಮಂತ್ರಿ ಮೋದಿ ಅವರು ಮಾತನಾಡುತ್ತಿಲ್ಲ. ಬಿಜೆಪಿ ಸರ್ಕಾರ ಕೇವಲ ತೊಂದರೆ ಕೊಡುತ್ತಿದೆ. ನಮಗೆ ದಿನಬೆಳಗಾದರೆ ನೋಟೀಸ್ ನೀಡುತ್ತಿದೆ. ಎಲ್ಲ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ನ್ಯಾಯ ನೀತಿ, ಸತ್ಯ, ಧರ್ಮದಲ್ಲಿ ನಾವು ಕೆಲಸ ಮಾಡುತ್ತಿದ್ದು, ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದರು.


ಇಂದು ಪ್ರತಿ ವಸ್ತುವಿನ ಬೆಲೆ ಕಡಿಮೆ ಮಾಡಿಸಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರ ಬಗ್ಗೆ ಚಿಂತಿಸುತ್ತದೆ. ನಾನು ಆಗಾಗ್ಗೆ ದು ಮಾತು ಹೇಳುತ್ತಿರುತ್ತೇನೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ನಾವು 6 ತಿಂಗಳ ಮುಂಚಿತವಾಗಿ ಪ್ರಣಾಳಿಕೆ ಸಿದ್ಧಪಡಿಸುತ್ತೇವೆ. ಮಹಿಳೆಯರು, ಯುವಕರು, ಹೆಣ್ಣುಮಕ್ಕಳು, ಜನ ಸಾಮಾನ್ಯರ ಬದುಕಿನ ಬಗ್ಗೆ, ರೈತರ ಬಗ್ಗೆ ಆಲೋಚಿಸಿ ಪ್ರಣಾಳಿಕೆ ಮಾಡುತ್ತೇವೆ.
ಸಿದ್ದರಾಮಯ್ಯ ಅವರ ಸರ್ಕಾರ ಬರುವಾಗ 177 ಕಾರ್ಯಕ್ರಮ ಘೋಷಿಸಿದ್ದು, 165 ಕಾರ್ಯಕ್ರಮ ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ. ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆ ತೆಗೆದುಕೊಂಡು ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ ತೀರ್ಮಾನಿಸಲಿ. ಯಾರಿಗೂ ಸಮಾನತೆ ನೀಡಲು ಸಾಧ್ಯವಾಗಲಿಲ್ಲ.


ಮಹಾಭಾರತದಲ್ಲಿ ಹಸ್ತಿನಾಪುರದ ರಾಜಸಭೆಯಲ್ಲಿ ದ್ರೌಪದಿಗೆ ವಸ್ತ್ರಾಪಹರಣ ಆಗುತ್ತಿರುವ ಸಂದರ್ಭದಲ್ಲಿ ಭೀಷ್ಮ, ದ್ರೋಣಾಚಾರ್ಯರಂತಹ ಅತೀರಥರು ಉಪಸ್ಥಿತರಿದ್ದರು. ಆಗ ಅಲ್ಲಿ ಅಧರ್ಮ ನಡೆಯುತ್ತಿದ್ದರೂ ಅವರೆಲ್ಲರೂ ಮೌನವಾಗಿ ಕಣ್ಣುಮುಚ್ಚಿಕೊಂಡು ಕೂತಿದ್ದರು. ಅದೇ ರೀತಿ ಇಂದು ದೇಶದಲ್ಲಿ ಅಶಾಂತಿ, ಗಲಭೆಗಳು, ಅಧರ್ಮ ಹೆಚ್ಚುತ್ತಿದ್ದು, ಇದನ್ನು ನೋಡಿಕೊಂಡು ಸ್ವಾಮೀಜಿಗಳು, ಮಠಾಧೀಶರು ಕೂರಬಾರದು. ಈ ದೇಶದಲ್ಲಿ ಧರ್ಮ, ನ್ಯಾಯ, ಶಾಂತಿಗಾಗಿ, ಎಲ್ಲರೂ ಒಂದಾಗಿ ಸಾಗಲು ನಿಮ್ಮ ಧ್ವನಿ ಎತ್ತಬೇಕು. ನಮ್ಮ ಪ್ರಜಾಪ್ರಭುತ್ವಕ್ಕೆ ಸಮಾನತೆಯೇ ಅಡಿಪಾಯವಾಗಿದ್ದು, ನೀವು ಸಮಾನತೆಗಾಗಿ ಬಡವರು, ಅಲ್ಪಸಂಖ್ಯಾತರ ಬಗ್ಗೆ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

ನಾವು ಎಲ್ಲ ಧರ್ಮವನ್ನು ರಕ್ಷಣೆ ಮಾಡಬೇಕು. ನಾನು ಈ ಹಿಂದೆ ಹೇಳಿರುವಂತೆ ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಹುಟ್ಟುವಾಗ ಯಾರೂ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಲಿಲ್ಲ. ನಮಗೆ ಭಾರತದಲ್ಲಿ ಸಿಕ್ಕಿರುವುದು ಮಾನವ ಧರ್ಮ, ಮಾನವೀಯತೆ. ಕಾಂಗ್ರೆಸ್ ಪಕ್ಷದ ಈ ಧ್ವಜ ಎಲ್ಲ ಧರ್ಮಗಳ ಸಂಕೇತ. ಇಂದು ಕಾಂಗ್ರೆಸ್ ಧ್ವಜ, ರಾಷ್ಟ್ರ ಧ್ವಜ ಆಗಿದೆ. ಸಂವಿಧಾನ ಉಳಿಸಿಕೊಂಡು, ಎಲ್ಲರಿಗೆ ನ್ಯಾಯ ಒದಗಿಸಿ ಎಲ್ಲ ವರ್ಗದವರ ರಕ್ಷಣೆ ಮಾಡುವುದು ಕಾಂಗ್ರೆಸ್ ಪಕ್ಷದ ಬದ್ಧತೆ. ನಾವೆಲ್ಲರೂ ಸೇರಿ ಈ ಸರ್ಕಾರ ಕಿತ್ತೊಗೆಯುವಂತೆ ಮಾಡೋಣ, ಪ್ರತಿ ಬೂತ್, ಮನೆ ಮನೆಗೂ ಹೋಗಿ ಅವರ ಸಮಸ್ಯೆ ಆಲಿಸಿ ನಾವು ಅವರೊಂದಿಗೆ ಇದ್ದೇವೆ ಎಂದು ಧೈರ್ಯ ತುಂಬೋಣ. ಈ ನಿಟ್ಟಿನಲ್ಲಿ ನಾವು ಹೋರಾಟ ಮಾಡೋಣ ಎಂದು ಡಿಕೆಶಿ ಕರೆ ನೀಡಿದರು.

ಪ್ರತಿಭಟನೆಯಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ರಮಿಂದರ್ ಸಿಂಗ್ ಅವ್ಲಾ,ಷ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಸಭೆ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಧೃವನಾರಾಯಣ, ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಕೃಷ್ಣ ಭೈರೇಗೌಡ, ಕೆ.ಜೆ ಜಾರ್ಜ್ ಹಾಗೂ ಮತ್ತಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Join Whatsapp
Exit mobile version