ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರತಿಭಟನೆ : ಕಾಂಗ್ರೆಸ್ ವಕ್ತಾರ ಡಾ.ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಬಂಧನ

Prasthutha|

►ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯನಾ ಎಂದು ಹೇಳಿದ್ದ ಸಂಸದ ತೇಜಸ್ವಿ ಸೂರ್ಯ ಮನೆಗೆ ಪೊಲೀಸ್ ಸರ್ಪಗಾವಲು

- Advertisement -

ಬೆಂಗಳೂರು: ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ “ ಕಾಂಗ್ರೆಸ್ ಸರ್ಕಾರ ಇದ್ದಿದ್ದರೇ ಕಲ್ಲು ಹೊಡೆಯಬಹುದಾಗಿತ್ತು” ಎಂಬ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದ ಕೆಪಿಸಿಸಿ ವಕ್ತಾರ ಡಾ.ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಮತ್ತು ಇತರ ಕೈ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.  

ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ಸಂಸದ ತೇಜಸ್ವಿ ಸೂರ್ಯ ಮಾತನಾಡುತ್ತಾ, “ ಕಾಂಗ್ರೆಸ್ ಸರ್ಕಾರ ಇದ್ದಿದ್ದರೇ ಕಲ್ಲು ಹೊಡೆಯಬಹುದಾಗಿತ್ತು” ಎಂದು ಹೇಳಿಕೆ ನೀಡಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಸಂಸದರು ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದನ್ನ ಖಂಡಿಸಿ ತೇಜಸ್ವಿ ಸೂರ್ಯ ಅವರ ಗೃಹ ಕಚೇರಿಗೆ ಹೋಗಿ ಕಲ್ಲುಗಳನ್ನು ಉಡುಗೊರೆ ಮತ್ತು ಹೂಗಳನ್ನು ನೀಡುವ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿತ್ತು. ಇದರ ನೇತೃತ್ವ ವಹಿಸಿದ್ದ ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ಅವರನ್ನ ದಾರಿಯ ಮಧ್ಯೆಯೇ ಪೊಲೀಸರು ಬಂಧಿಸಿದ್ದಾರೆ.

- Advertisement -

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ತೇಜಸ್ವಿ ಸೂರ್ಯ ಅವರು  ಬೇಜವಾಬ್ದಾರಿಯುತ ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡುವಂತೆ ಪ್ರಚೋದನೆ ನೀಡಿದ್ದಾರೆ. ಇದನ್ನು ಪ್ರಶ್ನೆ ಮಾಡಿ, ಶಾಂತಿಯುತ ಪ್ರತಿಭಟನೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು  ಶಾಂತಿಯುತ ಪ್ರತಿಭಟನೆಗೂ ಅವಕಾಶ ನೀಡಲಿಲ್ಲ. ಇದು ಯಾವ ನ್ಯಾಯ ? ಬೇಜವಾಬ್ದಾರಿಯುತ ಹೇಳಿಕೆಯನ್ನು ಪ್ರಶ್ನೆ ಮಾಡುವ ಅಧಿಕಾರವೂ ನಮಗಿಲ್ವಾ ? ಇದೇ ರೀತಿಯ ಎಚ್ಚರಿಕೆಯನ್ನು ನೀವು ಅಲ್ಲಿ ( ಮಂಗಳೂರು ) ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಆದ್ರೂ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಡಾ. ಶಂಕರ ಗುಹಾ ದ್ವಾರಕನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ ಎಂದು ಹೇಳಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಇಂದು ತನ್ನ ಮತ್ತು ಶಾಸಕ ರವಿ ಸುಬ್ರಮಣ್ಯ ಅವರ  ಗೃಹ ಕಚೇರಿ ಮುಂದೆ ಪೊಲೀಸ್ ಸರ್ಪಗಾವಲು ಹಾಕಿಕೊಂಡು ರಕ್ಷಣೆ ಪಡೆದುಕೊಂಡಿರುವುದು ಯಾಕೆ ? ಇಷ್ಟೊಂದು ಭಯನಾ ನಿಮಗೆ ? ನಿಮಗೆ ಮಾತ್ರ ರಕ್ಷಣೆ ಬೇಕು. ಜನ ಸಾಮಾನ್ಯರಿಗೆ ಮಾತ್ರ ರಕ್ಷಣೆ ಬೇಡ್ವಾ ? ಓರ್ವ ಜನಪ್ರತಿನಿಧಿಯಾಗಿ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು ಅನ್ನೋ ಸಾಮಾನ್ಯ ಜ್ಞಾನವೂ ನಿಮಗಿಲ್ವಾ ಎಂದು ಅವರು  ತೇಜಸ್ವಿ ಸೂರ್ಯ ವಿರುದ್ಧ ಗುಡುಗಿದ್ದಾರೆ.

ಇನ್ನೊಂದೆಡೆ ಬೆಂಗಳೂರಿನ ಗಿರಿನಗರದಲ್ಲಿ ಶಾಂತಿಯುತ  ಪ್ರತಿಭಟನೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತೊಂದು ಕಡೆ ಪತ್ರಕರ್ತೆ ಹೆಸರಲ್ಲಿ ಸಂಸದರ ಮನೆಗೆ ತೆರಳಿ ಹೂಗಳನ್ನ ನೀಡಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನ ಸ್ಥಳದಲ್ಲಿಯೇ  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

Join Whatsapp