Home ಟಾಪ್ ಸುದ್ದಿಗಳು ಬಿಜೆಪಿ ಸೇರಲು ಮುಂದಾಗಿರುವ ರೌಡಿ ಶೀಟರ್’ಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಬಿಜೆಪಿ ಸೇರಲು ಮುಂದಾಗಿರುವ ರೌಡಿ ಶೀಟರ್’ಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

►ಈಗಾಗಲೇ 36 ರೌಡಿ ಶೀಟರ್’ಗಳು ಬಿಜೆಪಿ ಸೇರ್ಪಡೆ

►ಬಿಜೆಪಿ ಸೇರುವ ರೌಡಿಗಳ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗೆದುಹಾಕಲು ಗೃಹ ಸಚಿವರಿಂದ ಮೌಖಿಕ ಆದೇಶ

ಬೆಂಗಳೂರು: ಬಿಜೆಪಿ ಸೇರಲು ಮುಂದಾಗಿರುವ ರೌಡಿ ಶೀಟರ್ ಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಕಳೆದ ವಾರ ಹೇಳಿದ್ದೆವು. ಅದರಂತೆ ಇಂದು ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಹೇಳಿದರು.

2018ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿ ಮುಕ್ತಾಯವಾದ ನಂತರ ಪೊಲೀಸ್ ಇಲಾಖೆ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 23 ಸಾವಿರ ರೌಡಿಗಳಿದ್ದರು. 2022 ಜೂನ್ ವೇಳೆಗೆ ಹಾಲಿ ರೌಡಿಗಳ ಸಂಖ್ಯೆ 33 ಸಾವಿರ ಆಗಿದೆ. 2018ರಲ್ಲಿ ಬೆಂಗಳೂರಿನಲ್ಲಿ 3 ಸಾವಿರ ರೌಡಿಗಳಿದ್ದರು. ಈಗ ಆ ಸಂಖ್ಯೆ 6620ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಟ್ಟು 188 ಠಾಣೆಗಳ 6620 ರೌಡಿಗಳಿದ್ದಾರೆ. ಇನ್ನು ಆಕ್ಟಿವ್ ರೌಡಿ ಸಂಖ್ಯೆ ಬೆಂಗಳೂರಿನಲ್ಲಿ 1 ಸಾವಿರ ರಾಜ್ಯದಲ್ಲಿ 8 ಸಾವಿರ ಇದೆ ಎಂದು ಅವರು ಹೇಳಿದರು.

ಬಿಜೆಪಿ ಈಗ ರೌಡಿ ಮೋರ್ಚಾ ಆರಂಭಿಸಿದ್ದು, ಪ್ರಮುಖ 60 ರೌಡಿಗಳು ಈ ಮೋರ್ಚಾಗೆ ಸೇರಲು ಮುಂದಾಗಿದ್ದಾರೆ. ಅದರ ಮೊದಲ ಹಂತದಲ್ಲಿ ಈಗಾಗಲೇ 36 ರೌಡಿ ಶೀಟರ್ ಗಳು ಬಿಜೆಪಿ ಸೇರ್ಪಡೆ ಆಗಿದ್ದಾರೆ. 24 ರೌಡಿಗಳ ಸೇರ್ಪಡೆ ಬಾಕಿ ಇದೆ. ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನು ಸೇರಿಸಿಕೊಳ್ಳಲು ಬಿಜೆಪಿಯವರು ಪಟ್ಟಿ ಮಾಡಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.

36 ರೌಡಿಗಳ ಪೈಕಿ ಸೈಲೆಂಟ್ ಸುನೀಲ್ ಹಾಗೂ 9 ಇತರರು. ವಿಲ್ಸನ್ ಗಾರ್ಡನ್ ನಾಗ ಹಾಗೂ 6 ಇತರರು, ನಾಗಮಂಗಲದ ಫೈಟರ್ ರವಿ ಹಾಗೂ 5 ಇತರರು, ಬೆತ್ತನಗೆರೆ ಶಂಕರ ಹಾಗೂ 8 ಇತರರು, ಈತ ಹೆಸರು ಬದಲಾವಣೆ ಮಾಡಿಕೊಂಡು ನಲ್ಲೂರು ಶಂಕರೇಗೌಡ ಎಂದು ಪಕ್ಷ ಸೇರ್ಪಡೆ ಆಗಿದ್ದಾನೆ. ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಸಿದ್ದರಾಜು ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾನೆ. ಒಂಟೆ ರೋಹಿತ್ ಹಾಗೂ ಇತರರು, ಕುಣಿಗಲ್ ಗಿರಿ ಈತ ಜೈಲಿನಲ್ಲಿದ್ದು, ಅಲ್ಲಿಂದಲೇ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮಂಜುನಾಥ್ ಅಲಿಯಾಸ್ ಉಪ್ಪಿ, ಸೈತಾನ್ ರವಿ (ಸಿ.ಟಿ ರವಿ), ಈತ ಹಾಲಿ ಶಾಸಕರು, ಇನ್ನು ಪ್ರತಾಪ್ ಸಿಂಹ, ಇವರನ್ನು ಸುಮಲತಾ ಅವರು ಪೇಟೆ ರೌಡಿ ಎಂದು ಕರೆದಿದ್ದಾರೆ. ಕೊನೆಯದಾಗಿ ಕಿರಣ್ ಗೌಡ, ಈತ ಯುವ ದಸರಾಗೆ ಅಧ್ಯಕ್ಷರಾಗಿದ್ದು, ಪ್ರತಾಪ್ ಸಿಂಹ ಅವರ ಹಿಂಬಾಲಕ. ಮುಂದಿನ ಹಂತದಲ್ಲಿ ಉಳಿದ 24 ರೌಡಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಣ್ ವಿವರಿಸಿದರು.

ಬಿಜೆಪಿ ಸ್ನೇಹಿತರ ಬಳಿ ಈ ಬಗ್ಗೆ ಚರ್ಚೆ ಮಾಡಿದಾಗ, ನಮಗೆ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಕಡೆಯಿಂದ ನಿರ್ದೇಶನವಿದೆ. ಈ ವಿಚಾರವಾಗಿ ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಪ್ರಯೋಗ ಮಾಡಿದ್ದಾರೆ. ಎಲ್ಲಿ ಮತ ಸಿಗುವುದಿಲ್ಲವೋ ಅಲ್ಲಿ ರೌಡಿಗಳನ್ನು ಕಳಿಸಿ ಪ್ರಚಾರ ಮಾಡಿಸಿ ಯಶಸ್ವಿಯಾಗಿದ್ದೇವೆ. ಈಗ ಅದನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ ಹಾಗೂ ಅಶೋಕ್ ಅವರು ಹೇಳಿದ್ದು, ಇದು ಕೇವಲ ವಿವಾದ ತಣ್ಣಗೆ ಮಾಡುವ ಪ್ರಯತ್ನ. ಸಿ.ಟಿ ರವಿ ಹತಾಶರಾಗಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೌಡಿಗಳ ಪೈಕಿ 10 ಮಂದಿಗೆ ವಿಧಾನಸಭೆ ಚುನಾವಣೆ ಟಿಕೆಟ್, 26 ಜನರಿಗೆ ಬಿಬಿಎಂಪಿ ಚುನಾವಣೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ರೌಡಿಗಳಿಂದ ರೌಡಿಗಳಿಗಾಗಿ, ರೌಡಿಗಳಿಗೋಸ್ಕರ ಇದು ಬಿಜೆಪಿ ರೌಡಿ ಮೋರ್ಚಾದ ಘೋಷವಾಕ್ಯವಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ಇವರನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಕಟೀಲ್ ಅವರು ಹೇಳಿರುವುದು ಸುಳ್ಳು. ರೌಡಿಶೀಟರ್ ಗಳೆಲ್ಲಾ ರೌಡಿಗಳಲ್ಲ ಎಂದು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ರೌಡಿ ಎಂದರೆ ಕೊಲೆಗಡುಕರು, ರೇಪ್ ಮಾಡಲು ಸಂಚು ರೂಪಿಸುವವರು, ಡಕಾಯತಿ, ಹಫ್ತಾ ವಸೂಲಿ, ಬೆದರಿಸುವವರಾಗಿದ್ದಾರೆ. ಬಿಜೆಪಿ ಸೇರುವ ರೌಡಿಗಳ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ಹೊರತೆಗೆಯಲು ಗೃಹ ಸಚಿವರಿಂದ ಪೊಲೀಸ್ ಇಲಾಖೆಗೆ ಮೌಖಿಕ ಆದೇಶ ನೀಡಲಾಗಿದೆ ಎಂದು ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ಸಿ.ಟಿ ರವಿ ಅವರು ನನ್ನ ಮೇಲೂ ರೌಡಿ ಶೀಟರ್ ಇತ್ತು ಎಂದು ಒಪ್ಪಿಕೊಂಡಿದ್ದಾರೆ. ಸಿ.ಟಿ ರವಿ ಅವರ ಮೇಲೆ 8 ಜೂನ್ 2012ರಲ್ಲಿ ಐಟಿ ರೈಡ್ ಆಗಿತ್ತು. ಆರ್ ಟಿಐ ಕಾರ್ಯಕರ್ತ ಎ.ಸಿ ಕುಮಾರ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿ, 2004ರಲ್ಲಿ ಚುನಾವಣಾ ಆಯೋಗಕ್ಕೆ ರವಿ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಒಟ್ಟು ಆಸ್ತಿ 10.1 ಲಕ್ಷ ಹಾಗೂ 1.2 ಲಕ್ಷ ವಾರ್ಷಿಕ ಆದಾಯ ಎಂದು ನಮೂದಿಸಲಾಗಿತ್ತು. ಆದರೆ 2012ರ ಅಫಿಡವಿಟ್ ನಲ್ಲಿ ಇವರ ಆದಾಯ 50 ಕೋಟಿ ಘೋಷಣೆ ಮಾಡಿದ್ದಾರೆ ಎಂದು ದೂರು ನೀಡಿದ್ದಾಗ ಐಟಿ ದಾಳಿ ಆಗಿತ್ತು. ಈಗ ನಮ್ಮ ಪ್ರಕಾರ ಸಿ.ಟಿ ರವಿ ಅವರು ಬೇನಾಮಿ ಹೇಸರಲ್ಲಿ 3 ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇವರು ಮಾತೆತ್ತಿದರೆ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುತ್ತಾರೆ. ಶಿವಕುಮಾರ್ ಅವರು ಉದ್ಯಮಿಗಳು, ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಅವರು ತಮ್ಮ ಆದಾಯ ಎಲ್ಲವನ್ನು ಐಟಿಗೆ ಸಲ್ಲಿಕೆ ಮಾಡಿದ್ದಾರೆ. ಆದರೆ ಸತ್ಯ ಹರಿಶ್ಚಂದ್ರರಂತೆ ಬಿಂಬಿಸಿಕೊಳ್ಳುವ ಸೈತಾನ್ ರವಿ ಅವರೇ, ನಿಮ್ಮ ಆದಾಯದ ಮೂಲವೇನು? ಎಂದು ಅವರು ಪ್ರಶ್ನಿಸಿದರು.

ಇವರು ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಎಂದು ಕರೆಯತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದವರು ಬೇಸರ ಮಾಡಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಎಲ್ಲ ವರ್ಗದ ಜನ ಇಷ್ಟಪಡುವ ವ್ಯಕ್ತಿ. ನೀವು ಯಾವುದೇ ಹಂತಕ್ಕೆ ಬೇಕಾದರೂ ಇಳಿದು ಮಾತನಾಡಿ. ನೀವು ರಾಜ್ಯದಲ್ಲಿ ಕೋಮು ಬೆಂಕಿ ಹಚ್ಚುವುದರಲ್ಲಿ ಮೊದಲಿಗರು. ಬೊಮ್ಮಾಯಿ ಅವರು ಕಳೆದ 16 ತಿಂಗಳಿಂದ 9 ಖಾತೆ ಖಾಲಿ ಇದ್ದು, ಇದನ್ನು ನಿಮ್ಮ ಬಳಿ ಇಟ್ಟುಕೊಂಡು ಲೂಟಿ ಮಾಡುತ್ತಿದ್ದೀರಿ ನಿಮಗೆ ನಾಚಿಕೆ ಆಗಬೇಕು ಎಂದು ಬಿಜೆಪಿ ವಿರುದ್ಧ ಲಕ್ಷ್ಮಣ್ ಹರಿಹಾಯ್ದರು.

ಇನ್ನು ಇಂದು ಪತ್ರಿಕೆಗಳಲ್ಲಿ ಸರ್ಕಾರ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಎಂದು ಜಾಹೀರಾತು ನೀಡಿದೆ. ಇದರಲ್ಲಿ ಎಸ್ ಸಿಪಿ ಹಾಗೂ ಟಿಎಸ್ ಪಿ ಯೋಜನೆಗೆ 29 ಸಾವಿರ ಕೋಟಿ ನೀಡಿರುವುದಾಗಿ ಜಾಹೀರಾತಿನಲ್ಲಿ ಹೇಳಿದ್ದೀರಿ.

2018ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಆಗಿನ ರಾಜ್ಯದ ಬಜೆಟ್ ಮೊತ್ತ 2.07 ಲಕ್ಷ ಕೋಟಿ ಆಗಿತ್ತು. ಆಗ ಪರಿಶಿಷ್ಟರ ಕಲ್ಯಾಣಕ್ಕಾಗಿ ಈ ಕಾಯ್ದೆ ಪ್ರಕಾರ 33 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಈಗ 2022ರಲ್ಲಿ ನಿಮ್ಮ ಬಜೆಟ್ ಮೊತ್ತ 2.72 ಲಕ್ಷ ಕೋಟಿ, ನೀವು ಪರಿಶಿಷ್ಟರಿಗೆ ನೀಡಿರುವ ಅನುದಾನ 29 ಸಾವಿರ ಕೋಟಿ. ಆಮೂಲಕ ರಾಜ್ಯ ಸರ್ಕಾರ 12 ಸಾವಿರ ಕೋಟಿ ಅನುದಾನ ಕಡಿಮೆ ಮಾಡಿದ್ದೀರಿ. ನಿಮಗೆ ಯೋಗ್ಯತೆ, ಧಮ್ಮು ತಾಕತ್ತು ಇದ್ದರೆ ಈ ಅನುದಾನದಲ್ಲಿ ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂದು ಹೇಳಬೇಕು. ಈ ಆರ್ಥಿಕ ವರ್ಷದಲ್ಲಿ 9 ತಿಂಗಳು ಕಳೆದಿದ್ದು ಕೇವಲ 3 ತಿಗಳು ಬಾಕಿ ಇದೆ ಎಂದು ಹೇಳಿದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಮಾತನಾಡಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ 14 ಪರಿಷತ್ ಸದಸ್ಯರು, ಆಗಿನ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿಸಿಕೊಂಡು ಸತತವಾಗಿ 2 ದಿನಗಳ ಕಾಲ 7 ಗಂಟೆ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಸಭೆ ಮಾಡಿದ್ದರು. ಆ ಮೂಲಕ ಪ್ರಾಥಮಿಕ, ಪ್ರೌಢ, ಪಿಯು ಉಪನ್ಯಾಸಕರು, ಪದವಿ ಕಾಲೇಜು ಸಮಸ್ಯೆ, ಖಾಸಗಿ ಶಾಲೆಗಳ ಅನುದಾನ, ವೇತನ, ನೇಮಕಾತಿ, ಅಥಿತಿ ಉಪನ್ಯಾಸಕರ ಸಮಸ್ಯೆ ಸೇರಿದಂತೆ 36 ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದರು. ಈ ಸಭೆಯನ್ನು ಪಕ್ಷಾತೀತವಾಗಿ ಎಲ್ಲ ಪರಿಷತ್ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈಗ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಬದ್ಧತೆ ಇಲ್ಲವಾಗಿದೆ. ನಿತ್ಯ ಯೂಟರ್ನ್ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಿದ್ದಾರೆ. ಸಚಿವ ಬಿ.ಸಿ ನಾಗೇಶ ಅವರು ತಮ್ಮ ಹಿಡನ್ ಅಜೆಂಡಾಕ್ಕಾಗಿ ರಾಜ್ಯ ಶಿಕ್ಷಣ ವ್ಯವಸ್ಥೆಯನ್ನು ಮಾಲಿನ್ಯ ಮಾಡಬಾರದು ಎಂದು ಹೇಳಿದರು.

ಮೈಸೂರಿನಲ್ಲಿ ಬೆತ್ತನಗೆರೆ ಶಂಕರ್ ಸೇರ್ಪಡೆ ಆಗಿ ಆರು ತಿಂಗಳಾಗಿದೆ ಎಂದು ಕೇಳಿದ ಪ್ರಶ್ನೆಗೆ, ‘ಹೆಸರು ಬದಲಾಯಿಸಿಕೊಂಡು ವೇಷ ಬದಲಿಸಿಕೊಂಡು ಪಕ್ಷ ಸೇರ್ಪಡೆಯಾದರೆ ಪೊಲೀಸರಿಗೆ ಗೊತ್ತಾಗಿಲ್ಲ. ಇನ್ನು ನಮಗೆ ಹೇಗೆ ಗೊತ್ತಾಗುತ್ತದೆ. ಇನ್ನು ಪ್ರತಾಪ್ ಸಿಂಹ ಅವರಿಗೆ ಗೊತ್ತಿದ್ದರೂ ಕುಂಡಲಿ ನೋಡಿಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವೇ ಎಂದು ಹೇಳುತ್ತಾರೆ. ಆರ್ ಎಸ್ಎಸ್ ನಿರ್ದೇಶನದ ಮೇರೆಗೆ ರೌಡಿಗಳನ್ನು ಪಕ್ಷಕ್ಕೇ ಸೇರಿಸಿಕೊಳ್ಳುತ್ತಿದ್ದಾರೆ’  ಎಂದು ಹೇಳಿದರು.

ಸಿಟಿ ರವಿ ಅವರದು 3000 ಕೋಟಿ ಎಂದು ಹೇಳಿದ ಬಗ್ಗೆ ಯಾವುದಾದರೂ ದಾಖಲೆ ಇದೆಯಾ ಎಂದು ಕೇಳಿದಾಗ, ‘ಅವರು ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ದಾಖಲೆ ಕಲೆಹಾಕುತ್ತಿದ್ದೇವೆ. ನಮ್ಮ ಬಳಿ 800 ಕೋಟಿಯಷ್ಟು ಬೇನಾಮಿ ಆಸ್ತಿ ದಾಖಲೆ ಇವೆ. ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ. ಅವರು ಕ್ರಿಮಿನಲ್ ವ್ಯಕ್ತಿಯಾಗಿದ್ದಾರೆ. ಇವರು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರನ್ನು ಬೈಯದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಶ್ರೀರಾಮುಲು ಅವರ ಕುರಿತು ದಾಖಲೆ ಕಲೆಹಾಕುತ್ತಿದ್ದೇವೆ.

ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಸಂಯೋಜಕರಾದ ಜಿ.ಸಿ ರಾಜು ಹಾಗೂ ಕಾನೂನು ವಿಭಾಗದ ಉಪಾಧ್ಯಕ್ಷರಾದ ದಿವಾಕರ್  ಉಪಸ್ಥಿತರಿದ್ದರು

Join Whatsapp
Exit mobile version