ಬೆಂಗಳೂರು: ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ 2500 ಕೋಟಿ ಹಣ ನೀಡಿದರೆ ಮುಖ್ಯಮಂತ್ರಿ ಸ್ಥಾನ ದೊರಕುತ್ತದೆ ಎಂದು ಅಘಾತಕಾರಿ ಅಂಶವನ್ನು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಬಸನಗೌಡ ಪಾಟೀಲ್ ಯತ್ನಾಳ್ ನನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಇಂದು ಕಾಂಗ್ರೆಸ್ ವಿನೂತನವಾಗಿ ಪ್ರತಿಭಟನೆ ನಡೆಸಿದೆ.
ಇದರೊಂದಿಗೆ ಕರ್ನಾಟಕದಲ್ಲಿ ಎಲ್ಲಾ ಸರ್ಕಾರಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆಯುತ್ತಿರುವುದು ಬಹಿರಂಗವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಇದೀಗ ಮಂತ್ರಿ ಸ್ಥಾನ ಪಡೆಯಲು ಕೂಡ ವ್ಯಾಪಾರ ಪ್ರಾರಂಭವಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಇದರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಪಡಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಹರಾಜಿಗೆ ಇದೆಯೇ ದೇಶದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿ ಪ್ರತಿಭಟಬೆ ಹಮ್ಮಿಕೊಂಡಿದೆ.
ಬಿಜೆಪಿ ಸರ್ಕಾರದಲ್ಲಿ ಕೋಟಿಗಳಿಗೆ ಬೆಲೆಯೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹೇಗೆ ಜನತೆಗೆ ಕೋಟಿಗಟ್ಟಲೆ ಸಾಲದ ಸುಳಿಯಲ್ಲಿ ಸಿಲುಕಿಸಿ ಹೊರೆ ನೀಡಿದ್ದಾರೆ. ಅದೇ ರೀತಿ ಭ್ರಷ್ಟ ಬಿಜೆಪಿ ಸರ್ಕಾರ ಕೋಟಿಗಟ್ಟಲೆ ಹಣವನ್ನು ದಿನನಿತ್ಯವೂ ಲೂಟಿ ಮಾಡುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಜನಸಾಮಾನ್ಯರು ಈ ಭ್ರಷ್ಟ ಹಾಗೂ ಸರ್ವಾಧಿಕಾರಿ ಆಡಳಿತದಲ್ಲಿ ಬದುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ರಾಜ್ಯ ಹಾಗೂ ರಾಷ್ಟ್ರದಲ್ಲಿ ಬಿಜೆಪಿ ತೊಲಗದೆ ಹೋದರೆ ಭ್ರಷ್ಟಾಚಾರ ಹಗಲು ಲೂಟಿ ಹೆಚ್ಚುತ್ತದೆ ಎಂದು ಕಿಡಿಕಾರಿದೆ.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಹಸಿವಿನಿಂದ ಜನ ಕಂಗಾಲಾಗಿದ್ದಾರೆ. ಇದರ ಬಗ್ಗೆ ಗಮನ ಹರಿಸದ ಬಿಜೆಪಿ ಕೇವಲ ಸ್ವಾರ್ಥಕೋಸ್ಕರ ದೇಶವನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕರೇ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೂ ಸಹ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ರವರು ಮುಂದಾಗುವುದಿಲ್ಲ ಮತ್ತು ಉತ್ತರ ನೀಡುವುದಿಲ್ಲ. ಭ್ರಷ್ಟಾಚಾರದ ಹಣದಲ್ಲಿ ಅವರ ಪಾಲು ಇದೆಯೇ ಎಂಬುದನ್ನು ಬಹಿರಂಗಪಡಿಸಬೇಕು. ಇಲ್ಲದೆ ಹೋದರೆ ಭ್ರಷ್ಟಾಚಾರದ ಹಣದಲ್ಲಿ ಇವರಿಗೂ ಸಹ ಪಾಲು ಇದೆ ಎಂದು ನಂಬಬೇಕಾಗುತ್ತದೆ ಕಾಂಗ್ರೆಸ್ ಆರೋಪ ಹೊರಿಸಿದೆ.
ಪ್ರಧಾನಿ ಮೋದಿ, ಅಮಿತ್ ಶಾ ,ಜೆ.ಪಿ.ನಡ್ಡಾ ಅವರು ದೇಶದ ಜನತೆಗೆ ತಿಳಿಸಬೇಕು. ನಮ್ಮದು ಭ್ರಷ್ಟಾಚಾರದ ಹಣದಿಂದ ಅಧಿಕಾರ ಪಡೆದ ಪಕ್ಷ ಎಂಬುದನ್ನು ಜನತೆಗೆ ತಿಳಿಸಿ ರಾಜೀನಾಮೆ ಕೊಟ್ಟು ತೊಲಗಬೇಕೆಂದು ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ವಿನೂತನವಾಗಿ ಪ್ರತಿಭಟನೆಯನ್ನು ನಡೆಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್, ಪ್ರಚಾರ ಸಮಿತಿಯ ಅಧ್ಯಕ್ಷರುಗಳಾದ ಜಿ. ಜನಾರ್ಧನ್, ಎ.ಆನಂದ್,ಹಾಗೂ ಆದಿತ್ಯ, ಪ್ರಕಾಶ್,ಹೇಮರಾಜ್, ವೆಂಕಟೇಶ್,ನವೀನ್, ಪುಟ್ಟರಾಜು,ಮಂಜುನಾಥ್, ಅನಿಲ್,ಸುಪ್ರಜ್, ಶ್ರೀಮತಿ ಶೀಲಮ್ಮ ಹಾಗೂ ಪಕ್ಷದ ಕಾರ್ಯಕರ್ತರು ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು.