Home ಟಾಪ್ ಸುದ್ದಿಗಳು ರೈತರ ಹತ್ಯೆ ಖಂಡಿಸಿ ಕಾಂಗ್ರೆಸ್ ನಿಂದ ಪಂಜಿನ ಮೆರವಣಿಗೆ

ರೈತರ ಹತ್ಯೆ ಖಂಡಿಸಿ ಕಾಂಗ್ರೆಸ್ ನಿಂದ ಪಂಜಿನ ಮೆರವಣಿಗೆ

ಬೆಂಗಳೂರು: ಉತ್ತರ ಪ್ರದೇಶದಲ್ಲಿ ರೈತರ ಹತ್ಯೆ ಹಾಗೂ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬಂಧನ ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಬಾಳೆಕುಂದ್ರಿ ವೃತ್ತದವರೆಗೆ ಸೋಮವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಧೃವನಾರಾಯಣ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ರಿಜ್ವಾನ್ ಅರ್ಷದ್, ಪ್ರಸಾದ್ ಅಬ್ಬಯ್ಯ, ಎಂಎಲ್ಸಿಗಳಾದ ಬಿ.ಕೆ. ಹರಿಪ್ರಸಾದ್, ನಾರಾಯಣಸ್ವಾಮಿ, ಯು.ಬಿ. ವೆಂಕಟೇಶ್, ಉತ್ತರ ನಗರ ಜಿಲ್ಲಾಧ್ಯಕ್ಷ ರಾಜಕುಮಾರ್ ಮತ್ತಿತರರು ಭಾಗವಹಿಸಿದ್ದರು.
ನಂತರ ಬಾಳೆಕುಂದ್ರಿ ವೃತ್ತದಿಂದ ರಾಜಭವನಕ್ಕೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮತ್ತಿತರರನ್ನು ಒಳಗೊಂಡ ನಿಯೋಗವು ಬಸ್ ನಲ್ಲಿ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಬಳಿಕ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ನಿಯೋಗ ರಾಜಭವನಕ್ಕೆ ತೆರಳಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಸಚಿವರಾಗಿರುವ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿರುಸುವಂತೆ ಮನವಿ ಸಲ್ಲಿಸಿತು.
ಕ್ರಾಂತಿಯ ಸಂಕೇತವಾದ ಪಂಜು ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಮೊಳಗಿಸಿದರು. ರೈತರ ಮೇಲೆ ಕಾರು ಹರಿಸಿ ಅವರ ಸಾವಿಗೆ ಕಾರಣವಾದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ವಿರುದ್ಧ ಕಠಿಣ ಕ್ರಮಗಳಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರದೇಶದಲ್ಲಿ ರಾಕ್ಷಸಿ ಪ್ರವೃತ್ತಿಯ ಆಡಳಿತ ನಡೆಯುತ್ತಿದ್ದು, ಇದು ಅಕ್ಷರಶಃ ಜಂಗಲ್ ರಾಜ್ ಆಗಿ ಪರಿವರ್ತನೆಯಾಗಿದೆ. ಅಲ್ಪ ಸಂಖ್ಯಾತರು, ದಲಿತರು, ಶೋಷಿತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇದೀಗ ರೈತರ ನರಮೇಧವೂ ಸಹ ಆರಂಭವಾಗಿದೆ. ರಾಷ್ಟ್ರಪತಿ ಅವರು ಕೂಡಲೇ ಮಧ್ಯಪ್ರವೇಶಿಸಿ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಡಿ.ಕೆ. ಶಿವಕುಮಾರ್ ಮಾತನಾಡಿ, ಯಾವುದೇ ನೋಟಿಸ್ ಇಲ್ಲದೇ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ. ರೈತರನ್ನು ಕೊಲೆ ಮಾಡಿದವರನ್ನು ಬಂಧಿಸಿಲ್ಲ. ಸಾಂತ್ವಾನ ಹೇಳಲು ಹೊರಟಿದ್ದ ನಮ್ಮ ನಾಯಕಿಯನ್ನು ಬಂಧಿಸಿದ್ದು ಖಂಡನೀಯ. ದೇಶದ ಅಖಂಡ ರೈತರ ಪರವಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಯುವ ಕಾಂಗ್ರೆಸ್ ಹೋರಾಟ ನಡೆಸಿದ್ದು, ಈ ಹೋರಾಟವನ್ನು ತಾರ್ಕಿತ ಅಂತ್ಯಕ್ಕೆ ಕರೆದೊಯ್ಯುತ್ತೇವೆ. ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ. 1980 ರಲ್ಲಿ ಇಂದಿರಾ ಗಾಂಧಿ ಅವರನ್ನು ಸಹ ಇದೇ ರೀತಿಯಲ್ಲಿ ಬಂಧಿಸಲಾಗಿತ್ತು. ಇದೀಗ ಇತಿಹಾಸ ಮರುಕಳಿಸಿದೆ. ಬಿಜೆಪಿಯ ಕಪ್ಪು ಕಾನೂನುಗಳ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ ಎಂದು ಹೇಳಿದರು.

Join Whatsapp
Exit mobile version