ಬೆಂಗಳೂರು: ಎತ್ತಿನ ಗಾಡಿ, ಸೈಕಲ್ ಏರಿ ವಿಧಾನ ಸೌಧಕ್ಕೆ ಜಾಥಾ ನಡೆಸಿದ್ದ ಕಾಂಗ್ರೆಸ್ ಇಂದು ವಿನೂತನ ಶೈಲಿಯೊಂದಿಗೆ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ವಿಧಾನಮಂಡಲ ಅಧಿವೇಶನಕ್ಕೆ ಟಾಂಗಾ ಜಾಥಾ ನಡೆಸಿದ ಕಾಂಗ್ರೆಸ್ ರಾಜ್ಯ ಸರಕಾರಕ್ಕೆ ಟಾಂಗ್ ನೀಡಿದೆ.
ಬೆಲೆ ಏರಿಕೆಗೆ ವಿಭಿನ್ನ ಶೈಲಿಯ ಪ್ರತಿಭಟನೆ ನಡೆಸಿ ಗಮನ ಸೆಳೆಯುತ್ತಿರುವ ಕಾಂಗ್ರೆಸ್ ಅಧಿವೇಶನ ಆರಂಭದ ದಿನ ಎತ್ತಿನ ಗಾಡಿ ಜಾಥಾ ನಡೆಸಿತ್ತು, ಕಳೆದ ಸೋಮವಾರ ಸೈಕಲ್ ಏರಿ ಅಧಿವೇಶನಕ್ಕೆ ತರೆಳಿ ಪ್ರತಿಭಟಿಸಿತ್ತು. ಇದೀಗ ಟಾಂಗಾ ಜಾಥಾ ನಡೆಸಿ ಬೆಲೆ ಏರಿಕೆಯ ವಿರುದ್ಧ ಗುಡುಗಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಆರಂಭಗೊಂಡ ಜಾಥಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತಿತರರು ಭಾಗವಹಿಸಿದ್ದರು.