Home ಟಾಪ್ ಸುದ್ದಿಗಳು ಸಿ.ಟಿ.ರವಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ

ಸಿ.ಟಿ.ರವಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ

ಬೆಂಗಳೂರು: ಪ್ರಚಾರ ಪಡೆಯುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಶುಕ್ರವಾರ ವಿನೂತನ ಪ್ರತಿಭಟನೆ ನಡೆಸಿದರು.


ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಮುಖಂಡ ಎಸ್. ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಎಸ್. ಮನೋಹರ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಸಿ.ಟಿ. ರವಿ ಒಬ್ಬ ಅರೆಹುಚ್ಚ ಎಂಬುದು ಎಲ್ಲರಿಗೂ ತಿಳಿದಿದೆ. ಮೇಕೆದಾಟು ಕುಡಿಯುವ ನೀರಿನ ಯೋಜನೆ ಕರ್ನಾಟಕದ ಹಕ್ಕು ಎಂಬುದನ್ನು ಅರಿತಿದ್ದರೂ ತಮಿಳುನಾಡಿಗೆ ಬೆಂಬಲ ವ್ಯಕ್ತಪಡಿಸಿದ ಕರ್ನಾಟಕದ ದ್ರೋಹಿ ಸಿ.ಟಿ.ರವಿ. ಇಂತಹ ದ್ರೋಹಿಯಿಂದ ರಾಜ್ಯದ ಜನತೆ ಅಥವಾ ಕಾಂಗ್ರೆಸ್ ಪಕ್ಷ ಕಲಿಯುವುದು ಏನೂ ಇಲ್ಲ. ಆದರೆ ರವಿ ವರ್ತನೆ ಮತ್ತು ಹೇಳಿಕೆಯು ಬಿಜೆಪಿಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.


ಪಂಡಿತ್ ಜವಾಹರಲಾಲ್ ನೆಹರೂರವರು ಇಂದಿರಾ ಗಾಂಧಿ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಇಂದಿಗೂ ದೇಶದ ಜನ ನೆನೆಯುತ್ತಾರೆ. ಆದರೆ ಬಿಜೆಪಿ ನೀಡಿದ ದರಯೇರಿಕೆಯಿಂದ ಇಡೀ ದೇಶವೇ ಕಂಗಾಲಾಗಿದೆ. ಅದನ್ನು ಮರೆಮಾಚಲು ಬಿಜೆಪಿ ಇಂತಹ ಕೀಳುಮಟ್ಟದ ನಾಟಕ ಆಡುತ್ತಿದೆ. ಬಿಜೆಪಿ ಜೀವಂತವಾಗಿರುವ ಪಕ್ಷವಾಗಿದ್ದರೆ ನರೇಂದ್ರ ಮೋದಿ ಹೆಸರನ್ನು ಏತಕ್ಕಾಗಿ ಕ್ರೀಡಾಂಗಣಕ್ಕೆ ನಾಮಕರಣ ಮಾಡುತ್ತಿದ್ದರು ಎಂಬುದನ್ನು ಸಿ.ಟಿ.ರವಿ ಉತ್ತರಿಸ ಬೇಕು ಎಂದು ಪ್ರಶ್ನಿಸಿದರು.


ಸಚಿವನಾಗಿದ್ದಾಗ ಕ್ಯಾಸಿನೋಗೆ ಅನುಮತಿ ನೀಡಲು ಮುಂದಾಗಿ ಈಗ ಹುಕ್ಕಾ ಬಾರ್ ಮದ್ಯಪಾನದ ಬಗ್ಗೆ ಗಮನ ನೀಡುತ್ತಿರುವ ಸಿ.ಟಿ.ರವಿ, ಇಂತಹ ಹೇಳಿಕೆಯಲ್ಲದೆ ಇನ್ನೇನು ಬರಲು ಸಾಧ್ಯ. ನಿರುದ್ಯೋಗಿಯಾಗಿರುವ ಸಿ.ಟಿ.ರವಿಗೆ ಸರ್ಕಾರ ಮದ್ಯಪಾನದ ಅಂಗಡಿ ತೆರೆದು ಉದ್ಯೋಗ ನೀಡಲಿ. ಮುಖ್ಯಮಂತ್ರಿಗಳು ಕೂಡಲೇ ಇದರ ಬಗ್ಗೆ ಸೂಕ್ತ ಗಮನ ಹರಿಸಿ ಸಿಟಿ ರವಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ವ್ಯಂಗ್ಯವಾಡಿದರು.


ಸಮಿತಿಯ ಮುಖಂಡರಾದ ಜಿ.ಜನಾರ್ದನ್, ಎಂ.ಎ.ಸಲೀಮ್, ಎ.ಆನಂದ್, ಎಲ್.ಜಯಸಿಂಹ, ಮಹೇಶ್, ಪ್ರಕಾಶ್, ಪುಟ್ಟರಾಜು, ಚಂದ್ರಶೇಖರ, ತೇಜಸ್ ಕುಮಾರ್, ಉಮೇಶ್ ಮತ್ತಿತರರು ಭಾಗವಹಿಸಿದ್ದರು.

Join Whatsapp
Exit mobile version