ಬೆಂಗಳೂರು: ಕಾಂಗ್ರೆಸ್ ಪಕ್ಷ ಎಂದಿಗೂ ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ಭ್ರೂಣದಲ್ಲಿರುವ ಮಕ್ಕಳಿಗೆ ಒಂದು ಕಾರ್ಯಕ್ರಮ ಕೊಟ್ಟರೆ, ಹುಟ್ಟಿದ ನಂತರ ಮತ್ತೊಂದು ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಒಂದು ಕಾರ್ಯಕ್ರಮ ಸೇರಿದಂತೆ ಕಾಂಗ್ರೆಸ್ ಪಕ್ಷ ಸಾಮಾಜಿಕ ಬದ್ಧತೆ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ದೇಶದ ಪ್ರತಿ ಪ್ರಜೆಗೆ ರಕ್ಷಣೆ ನೀಡಿ ಅವರ ಕಷ್ಟ ಅರಿತು ನೆರವು ನೀಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದು ನರೇಗಾ ಕೂಲಿ ಕಾರ್ಮಿಕರು, ಅಂಗನನಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ರಸ್ತೆಗಳಲ್ಲಿ ಕಸ ಆಯುವ ವರ್ಗದ ಮಹಿಳೆಯರ ಜತೆ ರಾಹುಲ್ ಗಾಂಧಿ ಅವರು ಚರ್ಚೆ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ವರ್ಗದವರಿಗೆ ಅವರಿಗೆ ಆಗುತ್ತಿರುವ ತೊಂದರೆಗಳು, ಸರ್ಕಾರದಿಂದ ಅವರಿಗೆ ಅಗತ್ಯವಿರುವ ನೆರವಿನ ಬಗ್ಗೆ ಚರ್ಚೆ ಮಾಡಿದ್ದಾರೆ. ಲಕ್ಷ್ಮೀದೇವಿ ಎಂಬ ಹೆಣ್ಣುಮಗಳು ಕೈಗಳಿಲ್ಲದಿದ್ದರೂ ಕಾಲಲ್ಲೇ ಬರೆದು ಶಿಕ್ಷಕಿಯಾಗಿದ್ದು, ಅವರ ಜತೆಯೂ ರಾಹುಲ್ ಗಾಂಧಿ ಅವರ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದರು.
ಭಾರತ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮಕ್ಕಳ ಆಯೋಗದವರು ದೂರು ದಾಖಲಿಸಿದ್ದಾರೆ. ಈಗಾಗಲೇ ನಮ್ಮ ರಾಷ್ಟ್ರೀಯ ವಕ್ತಾರರು ಈ ವಿಚಾರವಾಗಿ 50 ಪುಟಗಳ ವರದಿ ನೀಡಿದ್ದಾರೆ. ಬಿಜೆಪಿ ಸ್ನೇಹಿತರು ಒಂದು ವಿಚಾರ ಅರ್ಥಮಾಡಿಕೊಳ್ಳಬೇಕು. ಭಾರತ ಐಕ್ಯತಾ ಯಾತ್ರೆ ಒಂದು ಚಳುವಳಿ. ಇದಕ್ಕೆ ಪಕ್ಷ, ವರ್ಗ ಯಾವುದೂ ಇಲ್ಲ. ಯಾರು ಬೇಕಾದರೂ ಈ ಯಾತ್ರೆಯಲ್ಲಿ ಭಾಗವಹಿಸಬಹುದು ಎಂದರು.
ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಇಂದಿರಾಗಾಂಧಿ ಅವರ ಮೊಮ್ಮಗ ಇಂದು ಇಷ್ಟು ದೂರ ಹೆಜ್ಜೆ ಹಾಕುತ್ತಿದ್ದಾರೆ ಎಂದು ಮಕ್ಕಳನ್ನು ಕರೆ ತಂದು ತೋರಿಸುತ್ತಿದ್ದಾರೆ. ಹೀಗಾಗಿ ಹಳ್ಳಿಗಳಿಂದ ಜನ ಬರುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಜತೆ ತಮ್ಮ ಕಷ್ಟ, ಸಂತೋಷ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಆಯೋಗದ ಮೂಲಕ ದೂರು ದಾಖಲಿಸಿದ್ದು, ಇದಕ್ಕೆ ಯಾವುದೇ ಆಧಾರವಿಲ್ಲ. ಜನ ಕಾಂಗ್ರೆಸ್ ಪಕ್ಷಕ್ಕೆ ತೋರಿಸುತ್ತಿರುವ ಪ್ರೀತಿ ವಿಶ್ವಾಸ ಅಭಿಮಾನ ಕಂಡು ಅಸೂಯೆಯಿಂದ ಈ ದೂರು ಕೊಡಿಸಿದೆ. ಇನ್ನು ಇಂದು ಕಾಡು ಗೊಲ್ಲರು ರಾಹುಲ್ ಗಾಂಧಿ ಅವರ ಜತೆ ಚರ್ಚಿಸಿ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ. ಮಾಜಿ ಸೈನಿಕರು ಕೂಡ ಭೇಟಿ ಮಾಡಿದ್ದಾರೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ನಿನ್ನೆ ನಮ್ಮ ಕಾರ್ಯಕರ್ತ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಬರುತ್ತಿರುವಾಗ ದುರ್ಘಟನೆಯಲ್ಲಿ ಮೃತಪಟ್ಟಿದ್ದಾನೆ. ಇಂದು ಆತನ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸುವ ಕೆಲಸವನ್ನು ಸ್ಥಳೀಯ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮುಂದೆ ನಾನು ಅವರ ಕುಟುಂಬವನ್ನು ಭೇಟಿ ಮಾಡುತ್ತೇನೆ. ಕೆಪಿಸಿಸಿ ವತಿಯಿಂದ ಆತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಘೋಷಣೆ ಮಾಡುತ್ತಿದ್ದೇನೆ. ನಾನೇ ಅವರ ಕುಟುಂಬವನ್ನು ಭೇಟಿ ಮಾಡಿ ಪರಿಹಾರ ನೀಡುತ್ತೇನೆ ಎಂದು ಗುಡುಗಿದರು.
ಇನ್ನು ಎಐಸಿಸಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಅ.17ರಂದು ಎಲ್ಲ ಪ್ರದೇಶ ಕಾಂಗ್ರೆಸ್ ಸದಸ್ಯರು, ಮತ ಚಲಾಯಿಸಲಿದ್ದಾರೆ. ಭಾರತ ಯಾತ್ರಿಗಳು ಎಲ್ಲಿ ಯಾತ್ರೆ ತಂಗಿರುತ್ತದೆಯೋ ಅಲ್ಲಿಂದಲೇ ಪ್ರತ್ಯೇಕ ಬೂತಿನಲ್ಲಿ ಮತ ಹಾಕಲಿದ್ದಾರೆ. ರಾಹುಲ್ ಗಾಂಧಿ ಅವರು ಸೇರಿದಂತೆ 40 ಜನ ಭಾರತ ಯಾತ್ರಿಗಳು ಅಲ್ಲಿಂದಲೇ ಮತ ಚಲಾಯಿಸಲಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಚುನಾವಣಾ ಅಧಿಕಾರಿಗಳ ಅನುಮತಿ ಪಡೆದಿದ್ದೇವೆ. ಉಳಿದಂತೆ ನಾವೆಲ್ಲರೂ ಕೆಪಿಸಿಸಿ ಕಚೇರಿಯಲ್ಲಿ ಹೋಗಿ ಮತ ಚಲಾಯಿಸುತ್ತೇವೆ. ರಾಜ್ಯದಲ್ಲಿ 479 ಮಂದಿ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಯಚೂರಿನಲ್ಲಿ ಸಿಎಂ ಭಾಷಣದಲ್ಲಿ ಮಾಡಿರುವ ಟೀಕೆ ಬಗ್ಗೆ ಕೇಳಿದಾಗ, ‘ಅವರ ಟೀಕೆಯನ್ನು ಸಂತೋಷದಿಂದ ಸ್ವೀಕರಿಸುತ್ತೇವೆ. ರಾಹುಲ್ ಗಾಂಧಿ ಹಾಗೂ ಅವರ ನಾಯಕತ್ವವನ್ನು ದೇಶದ ಜನ ಒಪ್ಪಿದ್ದಾರೆ. ಅವರಿಗೆ ಪ್ರಧಾನಿ ಆಗುವ ಅವಕಾಶ ಇದ್ದರೂ ಅದನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಅಧಿಕಾರವನ್ನು ತ್ಯಾಗ ಮಾಡಿ ಪಕ್ಷಕ್ಕಾಗಿ ಕಾರ್ಯಕರ್ತನಂತೆ ದುಡಿಯುತ್ತಿದ್ದಾರೆ. ಜನ ಸಂಘಟಿಸಿ, ಭಾರತ ಒಗ್ಗೂಡಿಸಲು, ಬೆಲೆ ಏಱಿಕೆ ನಿರುದ್ಯೋಗ ವಿಚಾರ, ರೈತರ ವಿಚಾರ, ಶಾಂತಿ ಹಾಗೂ ಐಕ್ಯತೆ ಸ್ಥಾಪಿಸಲು ಹೋರಾಟ ಮಾಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದೆ ಅವರು ಈ ರೀತಿ ಮಾತನಾಡುತ್ತಿದ್ದಾರೆ’ ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ನಾನು ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಚುನಾವಣೆ ಸಮೀಪಿಸುತ್ತಿದ್ದು, ಜನ ಯಾವ ರೀತಿ ಬೆಂಬಲ ನೀಡುತ್ತಿದ್ದಾರೆ ಎಂಬುದಕ್ಕೆ ಮಾಧ್ಯಮಗಳ ಕ್ಯಾಮೆರಾಗಳೇ ಸಾಕ್ಷಿ. ನಮಗೆ ನಾಯಕರಲ್ಲ ಜನರೇ ಅಲೆಯಾಗಿ ಪರಿವರ್ತನೆಯಾಗುತ್ತಿದ್ದಾರೆ. ಆಕಾಶದಿಂದ ಹನಿಹನಿಯಾಗಿ ಬಿದ್ದ ನೀರು ನದಿಯಾಗಿ ಸಮುದ್ರ ಸೇರುವಂತೆ ಇಂದು ಕಾಂಗ್ರೆಸ್ ಪಕ್ಷ ದೇಶದಲ್ಲಿ ಬದಲಾವಣೆ ತರಲು ಮುಂದಾಗಿದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಪ್ರತಿಯೊಬ್ಬರ ಬದುಕಲ್ಲಿ ಬದಲಾವಣೆ ತರಲಿದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಜೈರಾಮ್ ರಮೇಶ್, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಉಪಸ್ಥಿತರಿದ್ದರು.