ಬಂಟ್ವಾಳ | ಜಿ.ಪಂ. ಸದಸ್ಯೆ ಮಂಜುಳಾ ಮಾವೆ, ತಾ.ಪಂ. ಸದಸ್ಯ ಕುಮಾರ್ ಭಟ್, ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

Prasthutha|

ಬಂಟ್ವಾಳ: ದ.ಕ. ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಹಾಗೂ ಅವರ ಪತಿ, ಕಾಂಗ್ರೆಸ್ ಮುಖಂಡ ಮಾಧವ ಮಾವೆ ಅವರು ಬಿಜೆಪಿ  ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಇಲ್ಲಿನ ತಾಲೂಕು ಪಂಚಾಯತ್ ಕನ್ಯಾನ ಕ್ಷೇತ್ರದ ಸದಸ್ಯ ಕುಮಾರ್ ಭಟ್ ಕೂಡ ಇದೇ ವೇಳೆ ಬಿಜೆಪಿ ಸೇರ್ಪಡೆಗೊಂಡರು.

ಮಾಧವ ಮಾವೆ ಅವರು ಕಾಂಗ್ರೆಸ್ ನ ಕೆಲ ನಾಯಕರಿಂದ ಅಸಮಾಧಾನಗೊಂಡು ಬಿಜೆಪಿ ಸೇರುವುದಾಗಿ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಅದರಂತೆ ಬಿಜೆಪಿ ಮಂಗಳೂರು ಕಚೇರಿಯಲ್ಲಿ ಇಂದು ಪಕ್ಷ ಸೇರ್ಪಡೆಗೊಂಡರು.

- Advertisement -

ತಾಲೂಕು ಪಂಚಾಯತ್ ಕಾಂಗ್ರೆಸ್ ಸದಸ್ಯ ಕುಮಾರ್ ಭಟ್ ಕೂಡ ಇತ್ತೀಚೆಗೆ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಅವರು ಕೂಡ ಇಂದು ಬಿಜೆಪಿ ಸೇರ್ಪಡೆಗೊಂಡರು.

ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಹನೀಫ್ ಪಾಜಪಳ್ಳ ಹಾಗೂ ಅವರ ಬೆಂಬಲಿಗರೂ ಬಿಜೆಪಿ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳೇಪಾಡಿ, ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ಜಗದೀಶ್ ಶೇಣವ, ರವಿಶಂಕರ್ ಮಿಜಾರ್, ರಾಜೇಶ್ ಕಾವೇರಿ, ಸುಧೀರ್ ಶೆಟ್ಟಿ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.

- Advertisement -