Home ಕರಾವಳಿ ಪುತ್ತೂರು: ಕಾಂಗ್ರೆಸ್ ನಾಯಕಿ ಶೈಲಜಾ ಅಮರನಾಥ್ ಮನೆಗೆ ದುಷ್ಕರ್ಮಿಗಳ ತಂಡದಿಂದ ದಾಳಿ

ಪುತ್ತೂರು: ಕಾಂಗ್ರೆಸ್ ನಾಯಕಿ ಶೈಲಜಾ ಅಮರನಾಥ್ ಮನೆಗೆ ದುಷ್ಕರ್ಮಿಗಳ ತಂಡದಿಂದ ದಾಳಿ

ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀರಾಮ, ಸೀತೆ ಮತ್ತು ಹನುಮಂತನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಂಘಪರಿವಾರ ಸಂಘಟನೆಗಳಾದ ವಿ.ಎಚ್.ಪಿ, ಬಜರಂಗದಳ ಮತ್ತು ಹಿಂಜಾವೆಯ ಮುಖಂಡರು ಪುತ್ತೂರು ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡೆ, ನ್ಯಾಯವಾದಿ ಶೈಲಜಾ ಅಮರನಾಥ್ ಅವರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಐಟಿ ಸೆಲ್’ನ ಕಾರ್ಯದರ್ಶಿ ಆಗಿರುವ ನ್ಯಾಯವಾದಿ ಶೈಲಜಾ ಅಮರನಾಥ್ ಅವರ ಪುತ್ತೂರು ಬಪ್ಪಳಿಕೆ ಮನೆಗೆ ದಾಳಿ ನಡೆಸಿದೆ.

ನ್ಯಾಯವಾದಿ ಶೈಲಜಾ ಅವರ ನಿವಾಸಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳ ತಂಡ ಕಿಟಕಿ ಗಾಜುಗಳನ್ನು ಪುಡಿಗೈದು, ಮಸಿ ಬಳಿದು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಮಹಿಳಾ ಕಾಂಗ್ರೆಸ್’ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ಶೈಲಜಾ ಅಮರನಾಥ ಅವರು ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.

ಸದ್ಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.

ನ್ಯಾಯವಾದಿ ಶೈಲಜಾ ಅಮರನಾಥರ ಮನೆ ಮೇಲಿನ ದಾಳಿಗೆ NWF ಖಂಡನೆ

ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾಯದರ್ಶಿಯಾಗಿರುವ ನ್ಯಾಯವಾದಿ ಶೈಲಜಾ ಅಮರನಾಥ ಮನೆಗೆ ದುಷ್ಕರ್ಮಿಗಳು ದಾಳಿ ನಡೆಸಿದ ಹೀನ ಕೃತ್ಯವನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ಪುತ್ತೂರು ಅಧ್ಯಕ್ಷೆ ಶಹನಾಝ್ ಮಿತ್ತೂರು ತೀವ್ರವಾಗಿ ಖಂಡಿಸಿದ್ದಾರೆ.

ಕ್ಲಬ್ ಹೌಸ್ ನಲ್ಲಿ ನಡೆಸಿದ ಚರ್ಚಾಕೂಟದಲ್ಲಿ ಧರ್ಮ ನಿಂದನೆ ನಡೆದಿದೆ ಎಂದು ಸಂಘಪರಿವಾರ ಪೊಲೀಸ್ ದೂರು ನೀಡಿದ ನಂತರ ಈ ಘಟನೆ ನಡೆದಿದ್ದು, ಹಾಗಾಗಿ ಮೇಲ್ನೋಟಕ್ಕೆ ಈ ದುಷ್ಕೃತ್ಯದ ಹಿಂದೆ ಸಂಘಪರಿವಾರದ ಕೈವಾಡವೆಂದು ಸ್ಪಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸೈದ್ದಾಂತಿಕವಾಗಿ ಎದುರಿಸಲು ಸಾಧ್ಯ ಇಲ್ಲದವರು ಮಾತ್ರ ಈ ರೀತಿಯ ಕೃತ್ಯ ನಡೆಸಲು ಸಾಧ್ಯ, ಮಹಿಳೆಯ ಮನೆಯ ಮೇಲೆ ದಾಳಿ ನಡೆಸಿ ಸಂಘಪರಿವಾರವು ತನ್ನ ಸಂಸ್ಕೃತಿಯನ್ನು ತೋರ್ಪಡಿಸಿದೆ ಎಂದು ಅವರು ಕಿಡಿಕಾರಿದ್ದಾರೆ.

ತಕ್ಷಣ ಈ ಕುರಿತಾಗಿ ಪೋಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕು ಇಲ್ಲದಿದ್ದಲ್ಲಿ ಹೋರಾಟವನ್ನು ಎದುರಿಸಬೇಕಾದಿತು ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

Join Whatsapp
Exit mobile version