ಕಾಂಗ್ರೆಸ್‌ ಪಕ್ಷ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ, ಹೀಗಾಗಿ ಕಾಂಗ್ರೆಸ್‌ ಗೆ ಬಹುಮತ ನೀಡಿ: ಸಿದ್ದರಾಮಯ್ಯ

Prasthutha|

ಮೈಸೂರು: ಕಾಂಗ್ರೆಸ್‌ ಪಕ್ಷ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ, ಹೀಗಾಗಿ ಕಾಂಗ್ರೆಸ್‌ ಗೆ ಬಹುಮತ ನೀಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಮೈಸೂರಿನಲ್ಲಿ ನಡೆದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2008ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆದಾಗ ಬಿಜೆಪಿಯವರು ಆಗ ಗೆದ್ದಿದ್ದ ಸ್ವತಂತ್ರ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಸರ್ಕಾರ ಮಾಡಿದರು. ಆ ಸರ್ಕಾರದಲ್ಲಿ 3 ಜನ ಮುಖ್ಯಮಂತ್ರಿಗಳಾದರು, ಕೆಲವು ಸ್ವತಂತ್ರ ಅಭ್ಯರ್ಥಿಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದರು. 2018ರಲ್ಲಿ ಕೂಡ ಬಿಜೆಪಿ ಹೆಚ್ಚು ಸ್ಥಾನ ಪಡೆದ ಪಕ್ಷವಾಯಿತೇ ಹೊರತು ಬಹುಮತ ಸಾಬೀತು ಮಾಡಲು ಬೇಕಾಗುವಷ್ಟು ಸ್ಥಾನಗಳು ಬರಲಿಲ್ಲ. ಮತ್ತೆ ಯಡಿಯೂರಪ್ಪ ಅವರು ಮೂರೇ ದಿನಕ್ಕೆ ರಾಜೀನಾಮೆ ನೀಡಬೇಕಾಯಿತು, ನಂತರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನ ಸಮ್ಮಿಶ್ರ ಸರ್ಕಾರ ಬಂದಿತು. ಕುಮಾರಸ್ವಾಮಿ ಅವರು ಒಂದು ವರ್ಷ ಎರಡು ತಿಂಗಳು ಮಾತ್ರ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ರು. ಆಮೇಲೆ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸರ್ಕಾರ ಬಂತು. ಈ ಆಪರೇಷನ್‌ ಕಮಲ ಎಂಬುದು ಪರಿಚಯವಾದದ್ದೇ ಕರ್ನಾಟಕ ಬಿಜೆಪಿಯಿಂದ. ಶಾಸಕರಿಗೆ ಹಣ ಕೊಟ್ಟು ಖರೀದಿಸಿ, ಅವರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಗೆಲ್ಲಿಸುವುದು ಆಪರೇಷನ್‌ ಕಮಲ. ಇಂಥ ದ್ವಂದ್ವ ನಿಲುವು ಇರುವಂತವರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡಿದರೆ ಯಾವ ಸರ್ಕಾರ ಕೂಡ ಜನಪರವಾಗಿರಲು ಸಾಧ್ಯವಿಲ್ಲ ಎಂದರು.

ಬಿಜೆಪಿ ವಿರುದ್ಧ ಜನ ಇಂದು ಬೇಸತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ಭ್ರಷ್ಟಾಚಾರ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ 40% ಕಮಿಷನ್‌ ಸರ್ಕಾರ ಎಂದು ದೂರಿದ್ದಾರೆ. ಪ್ರಧಾನಿ ಮೋದಿ ಅವರು ದೇಶದ ಜನರಿಗೆ ‘ನ ಖಾವೂಂಗ ನ ಖಾನೇದೂಂಗ’ ಎಂದಿದ್ದರು, ಆದರೆ ಪತ್ರ ಬರೆದು ಇಷ್ಟು ಕಾಲ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ಅವರ ಈ ಭರವಸೆ ಕೇವಲ ಪ್ರಚಾರಕ್ಕಾಗಿ ನೀಡಿದ್ದ ಹೇಳಿಕೆ ಮಾತ್ರ. ರುಪ್ಸಾ (ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ) ದವರು ಪ್ರಧಾನಿಗಳಿಗೆ ಪತ್ರ ಬರೆದು ಈ ಸರ್ಕಾರ 40% ಕಮಿಷನ್‌ ಕೇಳುತ್ತಿದ್ದೆ ಎಂದರು. ಬೊಮ್ಮಾಯಿ ಅವರು ತಮ್ಮ ಭ್ರಷ್ಟಾಚಾರಗಳಿಗೆ ದಾಖಲೆ ಕೇಳುತ್ತಾರೆ, ಈ ಪತ್ರಗಳು ದಾಖಲಾತಿಗಳಲ್ವಾ ಎಂದು ಪ್ರಶ್ನಿಸಿದ್ದಾರೆ.

- Advertisement -

ಪಿಎಸ್‌ ಐ ನೇಮಕಾತಿಯಲ್ಲಿ ಎಡಿಜಿಪಿ ಸಹಿತವಾಗಿ ಸುಮಾರು 70 ಜನ ಜೈಲಿಗೆ ಹೋದರು, ಇದು ಸಾಕ್ಷಿ ಅಲ್ಲವಾ? ಸಂತೋಷ್‌ ಪಾಟೀಲ್‌ ಎಂಬ ಬಿಜೆಪಿ ಕಾರ್ಯಕರ್ತ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಗುತ್ತಿಗೆ ಕೆಲಸಗಳನ್ನು ಮಾಡಿ, ಲಂಚ ಕೊಡದ ಕಾರಣಕ್ಕೆ ಬಿಲ್‌ ಹಣ ನೀಡಲಿಲ್ಲ ಎಂದು ಉಡುಪಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಡೆತ್‌ ನೋಟ್‌ ಬರೆದಿಟ್ಟಿದ್ದರು. ಇದು ಸಾಕ್ಷಿ ಅಲ್ಲವಾ? ನಾವು  ಸದನದ ಒಳಗೆ ಮತ್ತು ಹೊರಗೆ ಹಗಲು ರಾತ್ರಿ ಹೋರಾಟವನ್ನು ಮಾಡಿದ್ದೆವು, ಧರಣಿ ಮಾಡಿದ್ದೆವು. ಇದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು. ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಅವರು ಸೋಪ್‌ ಮತ್ತು ಡಿಟರ್ಜೆಂಟ್‌ ನಿಗಮದ ಅಧ್ಯಕ್ಷರಾಗಿದ್ದವರು. ಅವರ ಮಗ ಅಪ್ಪನ ಪರವಾಗಿ ಲಂಚ ಪಡೆಯಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಮನೆಯನ್ನು ಶೋಧ ಮಾಡಿದಾಗ ಸುಮಾರು 8 ಕೋಟಿ ಭ್ರಷ್ಟ ಹಣ ಸಿಗುತ್ತದೆ. ಈ ರೀತಿ ರೆಡ್‌ ಹ್ಯಾಂಡಾಗಿ ಸಿಕ್ಕಿಬೀಳುವುದು ದಾಖಲೆಗಳಿಗಿಂತ ಪ್ರಬಲ ಸಾಕ್ಷಿಗಳು. ಈ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸಾಬೀತಾಗಲು ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು ಎಂದರು.

ಇವೆಲ್ಲವೂ ಈ ಸರ್ಕಾರ 40% ಕಮಿಷನ್‌ ಸರ್ಕಾರ ಎಂಬುದನ್ನು ತೋರಿಸುತ್ತದೆ. ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ನೇಮಕಾತಿ, ವರ್ಗಾವಣೆ, ಯೋಜನೆಗೆ ಅನುಮೋದನೆ ನೀಡುವಾಗ, ಎನ್‌,ಒ,ಸಿ ನೀಡುವಾಗ ಲಂಚದಿಂದ ತುಂಬಿಹೋಗಿದೆ. ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ಯಾವಾಗಲೂ ನಡೆದಿರಲಿಲ್ಲ. ಬಿಜೆಪಿಯವರು ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿತ್ತು ಎನ್ನುತ್ತಾರೆ. ಹಾಗಾದರೆ ಹಿಂದೆ 5 ವರ್ಷ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಯಾವತ್ತಾದರೂ ಆರೋಪ ಮಾಡಿತ್ತಾ? ಕಳೆದ 3 ವರ್ಷ 10 ತಿಂಗಳಿಂದ ಬಿಜೆಪಿ ಅಧಿಕಾರದಲ್ಲಿದೆ, ಸರ್ಕಾರದ ಬಳಿ ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಬಹುದಾಗಿತ್ತು ಅಲ್ವಾ? ಈಗ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದರೆ ಯಾರಾದರೂ ನಂಬುತ್ತಾರ ಎಂದರು.

ಇದರ ಜೊತೆಗೆ ಬಿಜೆಪಿ ಸರ್ಕಾರ ಅಭಿವೃದ್ಧಿಯನ್ನೂ ಮಾಡಿಲ್ಲ. ಕೋಮುವಾದವನ್ನು ಬೆಳೆಸಿದೆ. ಹಿಜಾಬ್‌, ಹಲಾಲ್‌, ಆಜಾನ್‌, ಜಾತ್ರೆಗಳಲ್ಲಿ ಯಾವ ಧರ್ಮದವರು ವ್ಯಾಪಾರ ಮಾಡುತ್ತಾರೆ ಎನ್ನುವುದು ಸಮಸ್ಯೆಗಳೇ ಅಲ್ಲ, ಇವುಗಳನ್ನು ಅನಗತ್ಯವಾಗಿ ಸಮಸ್ಯೆಯ ರೀತಿ ಬಿಂಬಿಸಿದ್ರು. ಇದರಿಂದ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇವೆಲ್ಲ ಜನರಿಗೆ ಬೇಕಿದೆಯಾ? ನಾನು ಮುಖ್ಯಮಂತ್ರಿಯಾಗಿ ಬಡವರಿಗೆ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. ಈ ಸರ್ಕಾರ ಬಂದ ನಂತರ ಹೊಸದಾಗಿ ಒಂದೇ ಒಂದು ಮನೆ ಕಟ್ಟಿಕೊಟ್ಟಿರುವ ದಾಖಲೆ ಇದ್ದರೆ ಕೊಡಲಿ. ನಾವು ನೀಡಿದ್ದ ಮನೆಗಳಿಗೆ ಕೆಲವಕ್ಕೆ ಬಾಕಿ ಹಣವನ್ನು ನೀಡಿಲ್ಲ. ನಾವು ಬಡವರಿಗೆ 7 ಕೆ.ಜಿ ಅಕ್ಕಿ ಕೊಡುತ್ತಿದ್ದೆವು, ಅದನ್ನು 5 ಕೆ.ಜಿ ಗೆ ಇಳಿಸಿದ್ದು ಯಾಕೆ? ಇದು ಜನರ ಹಣದಲ್ಲಿ ಕೊಡುವುದು, ಯಾಕೆ ಕಡಿತ ಮಾಡಿದ್ದು. ನಾವು 2013ರಲ್ಲಿ ಜನರಿಗೆ 165 ಭರವಸೆಗಳನ್ನು ನೀಡಿದ್ದೆವು, 5 ವರ್ಷದಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಇದರ ಜೊತೆಗೆ 20ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ನೀಡಿದ್ದೆವು. ಇಂದಿರಾ ಕ್ಯಾಂಟೀನ್‌, ಸಾಲಮನ್ನಾ, ಶೂಭಾಗ್ಯ, ಅನುಗ್ರಹ ಈ ಯಾವ ಕಾರ್ಯಕ್ರಮಗಳು ನಮ್ಮ ಪ್ರಣಾಳಿಕೆಯಲ್ಲಿ ಇರಲಿಲ್ಲ ಎಂದರು.

ಬಿಜೆಪಿಯವರು 2018ರಲ್ಲಿ 600 ಭರವಸೆಗಳನ್ನು ನೀಡಿದ್ದರು, ಅದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆಂದು ಹೇಳಲಿ ನೋಡೋಣ. ಮೋದಿ ಅವರು ಕಾಂಗ್ರೆಸ್‌ ನ ವಾರೆಂಟಿಯೇ ಮುಗಿದಿದೆ, ಇನ್ನು ಗ್ಯಾರೆಂಟಿಗಳನ್ನು ಈಡೇರಿಸುತ್ತಾರ ಎಂದು ಲಘುವಾಗಿ ಮಾತನಾಡುತ್ತಾರಲ್ವಾ ಅವರೇ ಈ ಪ್ರಶ್ನೆಗೆ ಉತ್ತರ ನೀಡಲಿ. ಅನೇಕ ಬಾರಿ ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಕರೆದಿದ್ದೆ. ಆದರೆ ಬೊಮ್ಮಾಯಿ ಅವರು ಸಮ್ಮತಿಸಲಿಲ್ಲ. ಒಂದು ಕಡೆ ದ್ವೇಷದ ರಾಜಕಾರಣ, ಇನ್ನೊಂದು ಕಡೆ ಮಿತಿಮೀರಿದ ಭ್ರಷ್ಟಾಚಾರ, ಜನವಿರೋಧಿ ಆಡಳಿತ, ನಿಷ್ಕ್ರಿಯತೆ ಇದೆ. ಈ ಸರ್ಕಾರದ ಒಂದೇ ಒಂದು ಸಾಧನೆ ಇದ್ದರೆ ಹೇಳಲಿ.

ಯಡಿಯೂರಪ್ಪ ಅವರು ಕಳೆದ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದ ಕೂಡಲೇ ಮಹದಾಯಿ ಯೋಜನೆ ಪೂರ್ಣ ಮಾಡುತ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಮಾಡಿದ್ರಾ? ಗೋವಾ, ಮಹಾರಾಷ್ಟ್ರ, ಕರ್ನಾಟಕ ಎಲ್ಲಾ ಕಡೆ ಬಿಜೆಪಿ ಸರ್ಕಾರ ಇದೆ. ಯಾಕೆ ಮಹದಾಯಿ ಯೋಜನೆ ಮೂಲೆಯಲ್ಲಿದೆ? ಇವತ್ತಿನ ವರೆಗೆ ಮೇಕೆದಾಟು ಯೋಜನೆಗೆ ಅನುಮೋದನೆ ಕೊಟ್ಟಿಲ್ಲ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಸರ್ಕಾರದ ಅಧಿಸೂಚನೆ ಪ್ರಕಟಿಸಿಲ್ಲ. ಈ ಸರ್ಕಾರ ಯಾವುದನ್ನು ಮಾಡಿದೆ ಎಂದರು.

ಈ ಬಾರಿ ಜನ ಅತಂತ್ರ ವಿಧಾನಸಭೆ ನಿರ್ಮಾಣ ಮಾಡಬಾರದು, ಇದರಿಂದ ಸುಭದ್ರ ಸರ್ಕಾರ ನೀಡಲು ಆಗಲ್ಲ, ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆದ ಪಕ್ಷ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ, ಹೀಗಾಗಿ ಕಾಂಗ್ರೆಸ್‌ ಗೆ ಬಹುಮತ ನೀಡುವ ತೀರ್ಮಾನ ಮಾಡಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಆನ್‌ ಲೈನ್‌ ಭಾಷಣ ಮಾಡುವಾಗ, ಕರ್ನಾಟಕದಲ್ಲಿ ಕಾಂಗ್ರೆಸ್‌ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸಲು ಆಗಲ್ಲ, ಒಂದು ವೇಳೆ ಈಡೇರಿಸಿದರೂ ಕರ್ನಾಟಕ ಸಾಲಗಾರ ರಾಜ್ಯವಾಗಿ ದಿವಾಳಿಯಾಗುತ್ತದೆ ಎಂದು ಹೇಳಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಇಡೀ ದೇಶಕ್ಕೆ ಅವರು ಪ್ರಧಾನ ಮಂತ್ರಿಗಳು, ಅವರು ಬೇರೆ ರಾಜ್ಯಗಳ ಬಗ್ಗೆ ಮಾತನಾಡುವಾಗ ದೇಶದ ಸ್ಥಿತಿ ಏನಾಗಿದೆ ಎಂದು ನೋಡಿಕೊಳ್ಳಬೇಕಿತ್ತು ಎಂದರು.

ಸ್ವಾತಂತ್ರ್ಯ ನಂತರದಿಂದ ಮನಮೋಹನ್‌ ಸಿಂಗ್‌ ಅವರ ಸರ್ಕಾರದ ಕೊನೆಯವರೆಗೆ ಈ ದೇಶದ ಮೇಲಿದ್ದ ಒಟ್ಟು ಸಾಲ 53 ಲಕ್ಷದ 11 ಸಾವಿರ ಕೋಟಿ. ಇಂದು ದೇಶದ ಮೇಲಿರುವ ಸಾಲ 155 ಲಕ್ಷ ಕೋಟಿ ಆಗಿದೆ. ಮೋದಿ ಅವರು 9 ವರ್ಷದಲ್ಲಿ ಸುಮಾರು 102 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ನಂತರದಿಂದ 2018ರ ಮಾರ್ಚ್‌ ವರೆಗೆ ಇದ್ದ ಸಾಲ 2 ಲಕ್ಷದ 42 ಸಾವಿರ ಕೋಟಿ. ಇಂದು ರಾಜ್ಯದ ಮೇಲೆ 5 ಲಕ್ಷದ 64 ಸಾವಿರ ಕೋಟಿ ಸಾಲ ಇದೆ. ಅಂದರೆ 5 ವರ್ಷದಲ್ಲಿ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದ್ದಾರೆ. ರಾಜ್ಯವನ್ನು ಮತ್ತು ಕೇಂದ್ರವನ್ನು ದಿವಾಳಿ ಮಾಡಿದ್ದು ಯಾರು? ಈ ವರ್ಷ ಅಸಲು ಮತ್ತು ಬಡ್ಡಿ ರೂಪದಲ್ಲಿ 56 ಸಾವಿರ ಕೋಟಿ ಹಣವನ್ನು ಸಾಲದ ಮರುಪಾವತಿ ಮಾಡಬೇಕು. ನಾನು ಮುಖ್ಯಮಂತ್ರಿಯಾಗಿರುವಾಗ ಪ್ರತೀ ವರ್ಷ ಅಂದಾಜು 20,000 ಕೋಟಿ ಸಾಲ ಮಾಡುತ್ತಿದೆ, 5 ವರ್ಷದಲ್ಲಿ 1 ಲಕ್ಷದ 16 ಸಾವಿರ ಕೋಟಿ ಸಾಲ ಆಗಿತ್ತು. ಇದು ವಿತ್ತೀಯ ಹೊಣೆಗಾರಿಕೆ ನೀತಿಯ ಮಾನದಂಡಗಳ ಒಳಗಿತ್ತು. ಈಗ ಸರ್ಕಾರದ ಸಾಲ ಮಾನದಂಡಗಳ ಪ್ರಕಾರ ಇದೆಯಾ? ಬಿಜೆಪಿ ಬಂದ ಮೇಲೆ ಈ ಎಲ್ಲಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಇದಕ್ಕೆ ಕೊರೊನಾ ರೋಗ ಬಂದಿದ್ದು ಕಾರಣ ಎನ್ನುತ್ತಾರೆ. ಕೊರೊನಾ ನಿರ್ವಹಣೆಗೆ 2 ವರ್ಷದಲ್ಲಿ 15,000 ಕೋಟಿ ಖರ್ಚು ಮಾಡಿದ್ದಾರೆ. ಈ ವೇಳೆ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹಾಗಾಗಿ ಇದು ಕಾರಣ ಆಗುವುದಿಲ್ಲ. ಈ ವರ್ಷ 78,000 ಕೋಟಿ ಸಾಲ ಮಾಡುತ್ತಿದ್ದಾರೆ ಎಂದರು.

ರಾಜ್ಯದ ಜನ ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಮೋದಿ ಅವರು ಹೇಳಿದ್ದ ಅಚ್ಚೇದಿನ್‌ ಬಂದಿದೆಯಾ? ಅಡುಗೆ ಅನಿಲ, ಗೊಬ್ಬರ, ಕಬ್ಬಿಣ, ಸಿಮೆಂಟ್‌, ಅಡುಗೆ ಎಣ್ಣೆ ಇವುಗಳ ಬೆಲೆ ಎಷ್ಟಾಗಿದೆ? ಹಣದುಬ್ಬರದ 5 ರಿಂದ 6% ಜಾಸ್ತಿಯಾಗುತ್ತದೆ. ಆದರೆ ಈಗ 100 ರಿಂದ 200% ಬೆಲೆ ಹೆಚ್ಚಾಗಿದೆ. ಇದಕ್ಕೆ ಯಾರು ಕಾರಣ? ರಾಜ್ಯದಲ್ಲಿರುವುದು ಅತ್ಯಂತ ಭ್ರಷ್ಟ ಮತ್ತು ಆಡಳಿತದಲ್ಲಿ ಸಂಪೂರ್ಣ ವಿಫಲ ಆಗಿರುವ ಸರ್ಕಾರ. ಜನರ ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ನಮ್ಮ ಪ್ರಣಾಳಿಕೆಯ ಮೂಲಕ ಜನರಿಗೆ 5 ಪ್ರಮುಖ ಗ್ಯಾರೆಂಟಿಗಳನ್ನು ನೀಡಿದ್ದೇವೆ. ಅದರಲ್ಲಿ ಮೊದಲನೆಯದು ಎಲ್ಲಾ ಕುಟುಂಬಗಳಿಗೆ 200ಯುನಿಟ್‌ ಉಚಿತ್‌ ವಿದ್ಯುತ್‌, ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ಸಹಾಯಧನ, ಬಡಕುಟುಂಬದ ಪ್ರತೀ ಸದಸ್ಯನಿಗೆ ತಲಾ 10 ಕೆ.ಜಿ ಉಚಿತ ಅಕ್ಕಿ, ನಿರುದ್ಯೋಗಿ ಪದವೀಧರ ಯುವಜನರಿಗೆ ತಿಂಗಳಿಗೆ 3000 ರೂಪಾಯಿ ಮತ್ತು ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ 1500 ರೂಪಾಯಿ ನಿರುದ್ಯೋಗ ಭತ್ಯೆ ಮತ್ತು ಜನಸಂಖ್ಯೆಯ ಶೇ.50 ರಷ್ಟು ಇರುವ ಹೆಣ್ಣುಮಕ್ಕಳಿಗೆ ಎಲ್ಲಾ ಸರ್ಕಾರಿ ಬಸ್‌ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುತ್ತೇವೆ. ಇದರಿಂದ ಕೆಎಸ್‌ಆರ್‌ಟಿಸಿ ಗೆ ಆಗುವ ನಷ್ಟದ ಹಣವನ್ನು ಸರ್ಕಾರ ತುಂಬಿಕೊಡುತ್ತದೆ.

ಹಳೆ ಪಿಂಚಣಿ ಪದ್ದತಿಯನ್ನು ಮರುಜಾರಿ ಮಾಡಬೇಕು ಎಂದು ಸರ್ಕಾರಿ ನೌಕರರು ಒತ್ತಾಯ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಪದ್ದತಿಯನ್ನು ಮರುಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಕೆ,ಎಸ್‌,ಆರ್‌,ಟಿ,ಸಿ ನೌಕರರಿಗೆ ಸರ್ಕಾರಿ ನೌಕರರಿಗೆ ಸಿಗುವ ಸವಲತ್ತು ನೀಡುತ್ತೇವೆ ಎಂದು ಹೇಳಿದ್ದೇವೆ. ಹೀಗೆ ನಾವು ಬರೀ ಬಿಜೆಪಿ ಸರ್ಕಾರವನ್ನು ಟೀಕೆ ಮಾಡದೆ ನಾವೇನು ಮಾಡುತ್ತೇವೆ ಎಂಬ ಧನಾತ್ಮಕ ವಿಚಾರವನ್ನು ಜನರ ಮುಂದಿಟ್ಟಿದ್ದೇವೆ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ.

ಮಹಿಳೆಯರಿಗೆ 10 ಸಾವಿರ ರೂಪಾಯಿ ಕೊಡುತ್ತೇವೆ ಎಂದು ಬೊಮ್ಮಾಯಿ ಅವರು ಹೇಳಿದ್ದರು, ಈಗ ಯಾಕೆ ಈ ವಿಚಾರ ಹೇಳುವುದನ್ನು ಬಿಟ್ಟಿದ್ದಾರೆ. ಈ ಯೋಜನೆ ಜಾರಿಯಾಗಿದ್ದರೆ ಹಣ ಎಲ್ಲಿಂದ ತರುತ್ತಿದ್ದರು? ನಾವು ಮನೆ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ನೀಡುತ್ತೇವೆ ಎಂದ ಮೇಲೆ ದೀಪಾವಳಿ, ಯುಗಾದಿ, ಗೌರಿ ಗಣೇಶ ಹಬ್ಬಕ್ಕೆ ಸಿಲಿಂಡರ್‌ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಹಣ ಎಲ್ಲಿಂದ ತರುತ್ತಾರಂತೆ? ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಆರ್ಥಿಕ ಸ್ಥಿತಿಯ ಬಗ್ಗೆ ಗೊತ್ತಿಲ್ಲ ಅನ್ನಿಸುತ್ತೆ, ಸಾಲ, ಅನಗತ್ಯ ಖರ್ಚು ಕಡಿಮೆ ಮಾಡಿ ಸಾಲ ಮರುಪಾವತಿಯನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋದರೆ ಇವೆಲ್ಲವನ್ನೂ ಕೊಡಲು ಆಗುತ್ತೆ. ಇದರಿಂದ ಜನ ಇಂದು ಕಾಂಗ್ರೆಸ್‌ ಗೆ ಇನ್ನೊಂದು ಅವಕಾಶ ನೀಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಮೇ 13 ರಂದು ಮತಎಣಿಕೆ ಆದ ಮೇಲೆ ಕಾಂಗ್ರೆಸ್‌ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬಂದೇ ಬರುತ್ತದೆ. ಇದು ನಾಡಿನ ಜನರ ನಾಡಿಮಿಡಿತ ನೋಡಿ ಹೇಳುತ್ತಿರುವುದು.

ನಾನು ಈ ಬಾರಿ ವರುಣಾದಿಂದ ಸ್ಪರ್ಧೆ ಮಾಡಿದ್ದೇನೆ. ಬಾದಾಮಿ ದೂರ ಆಗುತ್ತದೆ, ಪ್ರತೀ ವಾರ ಹೋಗಿ ಜನರ ಕಷ್ಟ ಕೇಳಲು ಆಗಲ್ಲ ಎಂಬ ಕಾರಣಕ್ಕೆ ಬಾದಾಮಿಯಿಂದ ನಿಲ್ಲಬಾರದು ಎಂದು ತೀರ್ಮಾನ ಮಾಡಿ ಹೈಕಮಾಂಡ್‌ ಗೆ ಹೇಳಿದ್ದೆ. ಅವರು ವರುಣಾದಿಂದ ಸ್ಪರ್ಧಿಸಿ ಎಂದು ಅವಕಾಶ ನೀಡಿದ್ದಾರೆ. ಜನರೂ ಇದನ್ನೇ ಹೇಳುತ್ತಿದ್ದರು, ನಮ್ಮ ಯತೀಂದ್ರ ಕೂಡ ಇಲ್ಲಿಂದಲೇ ಸ್ಪರ್ಧಿಸಿ ಎಂದು ಹೇಳುತ್ತಿದ್ದರು, ನನ್ನ ಕೊನೆ ಚುನಾವಣೆಯನ್ನು ನನ್ನ ಹುಟ್ಟೂರಿನಿಂದಲೇ ನಿಂತು ಚುನಾವಣಾ ರಾಜಕಾರಣವನ್ನು ಕೊನೆಗೊಳಿಸೋಣ ಎಂದು ನಿರ್ಧರಿಸಿ ವರುಣಾದಿಂದ ಸ್ಪರ್ಧೆ ಮಾಡಿದ್ದೇನೆ. ವರುಣಾದ ಜನ ಜಾತಿವಾದಿಗಳಲ್ಲ, ಇದರಿಂದಲೇ ನನ್ನ ಪುತ್ರ ಯತೀಂದ್ರಗೆ 59,000 ಮತಗಳ ಲೀಡ್‌ ಬಂದಿದ್ದು. 2008ರಲ್ಲಿ 28,000, 2013ರಲ್ಲಿ 31,000 ಲೀಡ್‌ ಬರಲು ಸಾಧ್ಯವಾಗುತ್ತಿತ್ತಾ? ಈ ಬಿಜೆಪಿಯವರು ಜಾತಿ ಜಾತಿಗಳ ಮಧ್ಯೆ ವಿಷ ಹಾಕಲು ಆರಂಭಿಸಿದ್ದಾರೆ. ಆದರೆ ಜನ ಅವರ ಈ ಷಡ್ಯಂತ್ರವನ್ನು ಮೆಟ್ಟಿ ನೂರಕ್ಕೆ ನೂರು ಹಿಂದಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಮೂಡಿದೆ. 

ಸ್ಥಳೀಯ ಬಿಜೆಪಿಯವರು ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ, ಇದರಿಂದ ಮೋದಿ ಅವರನ್ನು ಹೆಚ್ಚು ಬಾರಿ ಕರೆದುಕೊಂಡು ಬಂದರೆ ನಮಗೆ ಲಾಭವಾಗಬಹುದು ಎಂಬ ಭ್ರಮೆಯಲ್ಲಿದ್ದಾರೆ. ಇದು ರಾಜ್ಯಕ್ಕೆ ನಡೆಯುತ್ತಿರುವ ಚುನಾವಣೆ, ದೇಶಕ್ಕೆ ನಡೆಯುತ್ತಿರುವ ಚುನಾವಣೆಯಲ್ಲ. ಈಗ ಜನ ಚರ್ಚೆ ಮಾಡುತ್ತಿರುವುದು ರಾಜ್ಯದ ಮತ್ತು ಸ್ಥಳೀಯ ಸಮಸ್ಯೆಗಳನ್ನು ಮಾತ್ರ. ಜನರಿಗೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ, ಇದರಿಂದ ಮೋದಿ ಅವರು ಎಷ್ಟು ಬಾರಿ ಬಂದರೂ ಮತದಾರರ ಮೇಲೆ ಪರಿಣಾಮ ಬೀರಲ್ಲ.

ಬಿಜೆಪಿ ಪಕ್ಷದ ಧೋರಣೆ ಮತ್ತು ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ಸುಮಾರು 50,000 ಜನರು ನೀಟ್‌ ಪರೀಕ್ಷೆ ಬರೆಯುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಲಕ್ಷಕ್ಕೂ ಹೆಚ್ಚು ಜನ ಬರೆಯುತ್ತಿದ್ದಾರೆ. ಮೋದಿ ಅವರ ರೋಡ್‌ ಶೋ ನಿಂದಾಗ ಕೆಲವು ರಸ್ತೆಗಳಿಗೆ ನಿರ್ಬಂಧ ಹಾಕಿದ್ದಾರೆ. ಮೋದಿ ಅವರು ಹೊಸಪೇಟೆಗೆ ಹೋಗುತ್ತಿದ್ದರು, ನಾನು ಗಂಗಾವತಿಗೆ ಹೊರಟಿದ್ದೆ, ಆದರೆ ಮೋದಿ ಅವರು ಹೋಗುತ್ತಿರುವ ಕಾರಣಕ್ಕೆ ನನಗೆ ಅನುಮತಿಯನ್ನೇ ನೀಡಿಲ್ಲ. ವಿಧವಿಧವಾಗಿ ನಾನು ಮನವಿ ಮಾಡಿದೆ, ಆದರೂ ಅನುಮತಿ ಕೊಡಲಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕನಿಗೆ ಹೀಗಾದರೆ ಸಾಮಾನ್ಯ ಜನರ ಗತಿಯೇನು? ಮೋದಿ ಅವರು ಪ್ರಚಾರ ಮಾಡಲಿ ನಮ್ಮ ತಕರಾರು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ? ಒಂದಿನ ಮುಂಚಿತವಾಗಿ ಹೋಗಿ ಉಳಿದುಕೊಳ್ಳಿ ಎಂದು ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ, ಬಡ ವಿದ್ಯಾರ್ಥಿಗಳಿಗೆ ಇದು ಆಗುತ್ತಾ? ಶೋಭಾ ಕರಂದ್ಲಾಜೆ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ.

ಮೋದಿ ಅವರ ರೋಡ್ ಶೋವನ್ನು ಒಂದಿನ ಮುಂದಕ್ಕೆ ಹಾಕಬಹುದಲ್ವ? ವಿದ್ಯಾರ್ಥಿಗಳು ಪರೀಕ್ಷೆ ನಾಳೆ ಬರೆಯುತ್ತೇನೆ ಎಂದರೆ ಆಗುತ್ತಾ? ಸರ್ಕಾರದ ಮತ್ತು ಮೋದಿ ಅವರ ಈ ನಡೆ ಖಂಡನೀಯ.

ನನ್ನ ಮೊಮ್ಮಗನಿಗೆ ಇನ್ನು 17 ವರ್ಷ. ಅವನು ಒಂದು ವೇಳೆ ರಾಜಕೀಯಕ್ಕೆ ಬರಲು ಮನಸು ಮಾಡಿದರು ಅದಕ್ಕೆ ಇನ್ನು 8 ರಿಂದ 10 ವರ್ಷ ಬೇಕು. ಮೊಮ್ಮಗನನ್ನು ನನ್ನ ಉತ್ತರಾಧಿಕಾರಿ ಎಂದು ಹೇಳಿಯೇ ಇಲ್ಲ. ರಾಜಕೀಯಕ್ಕೆ ಅವನು ಬರಬಹುದು ಇಲ್ಲ ಬರದೇ ಇರಬಹುದು. ಅದು ಅವನ ವೈಯಕ್ತಿಕ ಇಷ್ಟ ಎಂದರು.