ಹೈದರಾಬಾದ್: ತೆಲಂಗಾಣದ ಉರ್ದು ದಿನಪತ್ರಿಕೆಯೊಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಸರ್ಕಾರಿ ಜಾಹೀರಾತುಗಳನ್ನು ಸ್ಥಗಿತಗೊಳಿಸುವುದನ್ನು ವಿರೋಧಿಸಿ ಖಾಲಿ ಸಂಪಾದಕೀಯ ಪುಟಗಳನ್ನು ಪ್ರಕಟಿಸುವ ಮೂಲಕ ಪ್ರತಿಭಟನೆ ನಡೆಸಿದೆ.
ರೇವಂತ್ ರೆಡ್ಡಿ ಅವರ ಕಾಂಗ್ರೆಸ್ ಸರ್ಕಾರವು, ಸತ್ಯವನ್ನು ಹೇಳಿದ್ದಕ್ಕಾಗಿ ಉರ್ದು ದಿನಪತ್ರಿಕೆಯನ್ನು ಶಿಕ್ಷಿಸುತ್ತಿದೆ ಎಂದು ಮುನ್ಸಿಫ್ ದಿನಪತ್ರಿಕೆ ಹೇಳಿಕೊಂಡಿದೆ. ಈ ಸಂಬಂಧ ಖಾಲಿ ಸಂಪಾದಕೀಯದ ಜೊತೆಗೆ ವಿಶೇಷ ಲೇಖನವನ್ನು ಪ್ರಕಟಿಸಿದೆ.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಕೋಮು ಗಲಭೆಯ ಘಟನೆಗಳನ್ನು ಪತ್ರಿಕೆ ಬಹಿರಂಗಪಡಿಸಿದೆ. ಪೊಲೀಸರ ವೈಫಲ್ಯಗಳು ಮತ್ತು ರಾಜ್ಯದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸಿದೆ. ಚಿಲ್ಕೂರಿನಲ್ಲಿ ಅಜ್ಞಾತ ಮಸೀದಿಯನ್ನು ಕೆಡವಿದ್ದು, ಅಲ್ಪಸಂಖ್ಯಾತ ಶಾಲಾ ಬಾಲಕಿಯರ ಸಮವಸ್ತ್ರದಿಂದ ದುಪಟ್ಟಾ ತೆಗೆದಿದ್ದು ಮತ್ತು ವಕ್ಫ್ ಆಸ್ತಿಗಳನ್ನು ರಕ್ಷಿಸುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ಪತ್ರಿಕೆ ವರದಿ ಮಾಡಿದೆ. ಮುನ್ಸಿಫ್ ಇಮಾಮ್ ಗಳು ಮತ್ತು ಮುಅಜ್ಜಿನ್ ಗಳ ವಿಳಂಬಿತ ವೇತನ, ವಿಚ್ಛೇದಿತ ಮಹಿಳೆಯರಿಗೆ ಸ್ಟೈಫಂಡ್ ಪಾವತಿಸದಿರುವುದು ಮತ್ತು ಮೋದಿ ಸರ್ಕಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್, ತೆಲಂಗಾಣ ಸಚಿವ ಸಂಪುಟದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುವಲ್ಲಿ ವಿಫಲವಾಗಿರುವ ಬಗ್ಗೆ ಪತ್ರಿಕೆ ವರದಿ ಪ್ರಕಟಿಸಿತ್ತು’ಎಂದು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಥರ್ ಮೊಯಿನ್ ಅವರ ಹೇಳಿಕೆಯನ್ನು ಎನ್ ಡಿಟಿವಿ ವರದಿ ಮಾಡಿದೆ.
2023ರ ಡಿಸೆಂಬರ್ ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಅಪಾಯದಲ್ಲಿದೆ ಮತ್ತು ಜಗತ್ತು ಅದನ್ನು ನೋಡಬಹುದು ಎಂದು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿರುವ ಪತ್ರಿಕೆ, ಅವರ ಪಕ್ಷವೇ ತೆಲಂಗಾಣದಲ್ಲಿ ಪತ್ರಿಕೆಯ ಕತ್ತು ಹಿಸುಕುತ್ತಿದೆ ಎಂದು ಬರೆದಿದೆ.
‘ಬಹುಶಃ ಅಧಿಕಾರಿಶಾಹಿಗಳು ನಮ್ಮ ಆರ್ಥಿಕ ಮೂಲಕ್ಕೆ ಪೆಟ್ಟುಕೊಟ್ಟರೆ ಮುನ್ಸಿಫ್ ದಿನಪತ್ರಿಕೆಯು ತಮಗೆ ಶರಣಾಗುತ್ತದೆ ಎಂದು ಭಾವಿಸಿದ್ದರೆ ಅದು ತಪ್ಪು. ನಾವು ನಮ್ಮ ವರದಿಯನ್ನು ನಿಲ್ಲಿಸುವುದಿಲ್ಲ. ಈ ಅನ್ಯಾಯದ ವರ್ತನೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಇಂದಿನ ಸಂಪಾದಕೀಯವನ್ನು ಉದ್ದೇಶಪೂರ್ವಕವಾಗಿಯೇ ಖಾಲಿ ಬಿಡಲಾಗಿದೆ’ಎಂದು ಪತ್ರಿಕೆ ಹೇಳಿದೆ.