Home ಟಾಪ್ ಸುದ್ದಿಗಳು ಗೋವಿನ ಹೆಸರಿನ ಭಯೋತ್ಪಾದನೆಗೆ ಕಾಂಗ್ರೆಸ್ ಸರ್ಕಾರದ ಬೆಂಬಲ: ದೊಡ್ಡಬಳ್ಳಾಪುರದ ಹಿಂಸೆ ಪೊಲೀಸರ ಉಪಸ್ಥಿತಿಯಲ್ಲಿ ನಡೆದಿರುವುದೇ ಇದಕ್ಕೆ...

ಗೋವಿನ ಹೆಸರಿನ ಭಯೋತ್ಪಾದನೆಗೆ ಕಾಂಗ್ರೆಸ್ ಸರ್ಕಾರದ ಬೆಂಬಲ: ದೊಡ್ಡಬಳ್ಳಾಪುರದ ಹಿಂಸೆ ಪೊಲೀಸರ ಉಪಸ್ಥಿತಿಯಲ್ಲಿ ನಡೆದಿರುವುದೇ ಇದಕ್ಕೆ ಸಾಕ್ಷಿ: ಅಬ್ದುಲ್ ಮಜೀದ್

ಬೆಂಗಳೂರು: ಗೋವಿನ ಹೆಸರಿನಲ್ಲಿ ಭಯೋತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದು ಈಗ ರಾಜ್ಯದ ರಾಜಧಾನಿ ಬೆಂಗಳೂರಿನ ಹೊಸ್ತಿಲಿಗೂ ತಲುಪಿರುವುದು ದೊಡ್ಡಬಳ್ಳಾಪುರದಲ್ಲಿ ನಡೆದ ನೆನ್ನೆಯ ಘಟನೆಯಿಂದ ಸ್ಪಷ್ಟವಾಗುತ್ತದೆ. ಇಂತಹ ಚಟುವಟಿಕೆಗಳನ್ನು ಹತೋಟಿಗೆ ತರುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗೋ ಭಯೋತ್ಪಾದನೆಯ ಕೃತ್ಯಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತದೆ ಎಂಬುದಕ್ಕೆ ಪೊಲೀಸರ ಉಪಸ್ಥಿತಿಯಲ್ಲಿ ದೊಡ್ಡಬಳ್ಳಾಪುರದ ಹಿಂಸೆ ನಡೆದಿರುವುದೇ ಸಾಕ್ಷಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರ ವಿಧಿಸಿರುವ ಷರತ್ತುಗಳನ್ನು ಪಾಲಿಸಿ ಗೋ ವಧೆ ಮಾಡುವುದಕ್ಕೆ, ಗೋ ಮಾಂಸ ಮಾರಾಟ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೂ ಕೂಡ ಕಾನೂನು ಬದ್ಧವಾಗಿ ಗೋಮಾಂಸ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಜನರನ್ನು ಧರ್ಮರಕ್ಷಣೆ ಹೆಸರಿನಲ್ಲಿ , ಗೋ ರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಉಗ್ರ ಮನಸ್ಥಿತಿಯ ಸಂಘಟನೆಗಳು ನಿರಂತರವಾಗಿ ಹಿಂಸಿಸುತ್ತಾ ಬಂದಿವೆ. ಅದಕ್ಕೆ ತಾಜಾ ಉದಾಹರಣೆ, ನಿನ್ನೆ ದೊಡ್ಡಬಳ್ಳಾಪುರದಲ್ಲಿ ಕಾನೂನನ್ನು ಕೈಗೆತ್ತಿಕೊಂಡು, ಗೋ ಮಾಂಸ ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ಹಲ್ಲೇ ನಡೆಸಿ, ಅವರ ವಾಹನಕ್ಕೆ ಬೆಂಕಿ ಹಾಕಿರುವುದೇ ಸಾಕ್ಷಿ ಎಂದು ಮಜೀದ್ ಕಿಡಿ ಕಾರಿದರು.

ಭಾರತ ಗೋ ಮಾಂಸ ರಫ್ತಿನಲ್ಲಿ ಜಗತ್ತಿನಲ್ಲಿಯೇ 2 ನೇ ಸ್ಥಾನದಲ್ಲಿದ್ದು, ಮೊದಲನೇ ಸ್ಥಾನ ಸಮೀಪದಲ್ಲಿದೆ. ಅದರ ಬಗ್ಗೆ ಯಾರಿಗೂ ಯಾವ ತಕರಾರು ಇಲ್ಲ. ಜೀವನ ನಿರ್ವಹಣೆಗೆ ಸಣ್ಣ ಪ್ರಮಾಣದಲ್ಲಿ ಕಾನೂನಿನ ಷರತ್ತುಗಳನ್ನು ಪಾಲಿಸಿ ವ್ಯಾಪಾರ ನಡೆಸುವವರು ಮಾತ್ರ ಇವರ ಟಾರ್ಗೆಟ್. ಏಕೆಂದರೆ ಇವರು ಬಹುತೇಕ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಗೋ ಮಾಂಸ ರಫ್ತು ಮಾಡುವವರಲ್ಲಿ ಹೆಚ್ಚಿನವರು ಮೇಲ್ವರ್ಗದ  ಹಿಂದೂಗಳು, ಅದರಲ್ಲೂ  ಮೇಲ್ಜಾತಿ ಎಂದು ಕರೆಸಿಕೊಳ್ಳುವ ಜನರಾಗಿದ್ದಾರೆ. ಆದಕಾರಣ ಅವರ ವಿರುದ್ಧ ಯಾವ ಆಕ್ರೋಶ, ಕ್ರಮ ಜರುಗುವುದಿಲ್ಲ. ಇದು ನೇರವಾಗಿ ಕೋಮುದ್ವೇಷವಲ್ಲದೆ ಮತ್ತೇನು ಅಲ್ಲ ಎಂದು ಮಜೀದ್ ಅವರು ತಮ್ಮ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

 ಕಾನೂನನ್ನು ಕೈಗೆತ್ತಿಕೊಂಡು ಅಲ್ಪಸಂಖ್ಯಾತರ ಮೇಲೆ ದಲಿತರ ಮೇಲೆ ಹಲ್ಲೇ ಹಿಂಸೆ ನಿರಂತರವಾಗಿ ನಡೆಯುತ್ತಿದ್ದು, ಇವರನ್ನು ಹದ್ದುಬಸ್ತಿನಲ್ಲಿ ಇಡುವುದಕ್ಕೆ ಸರ್ಕಾರ ವಿಫಲವಾಗಿದೆ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Join Whatsapp
Exit mobile version