Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇಂದು ವರ್ಷ ಪೂರ್ಣಗೊಂಡ ಸಂಭ್ರಮ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇಂದು ವರ್ಷ ಪೂರ್ಣಗೊಂಡ ಸಂಭ್ರಮ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ (ಮೇ 20) ಒಂದು ವರ್ಷ ಪೂರ್ಣಗೊಳ್ಳಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವರ ತಂಡ ಸಂಭ್ರಮಾಚರಣೆಗೆ ಸಿದ್ಧತೆ ಕೈಗೊಂಡಿದ್ದರೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುಂದೂಡಲಾಗಿದೆ. ನೀತಿ ಸಂಹಿತೆ ಮುಗಿದ ನಂತರ ಸಂಭ್ರಮಾಚರಣೆ ನಡೆಸಲಾಗುವುದು ಎಂದು ಹೇಳಲಾಗಿದೆ.

ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಸರ್ಕಾರ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಗ್ಯಾರಂಟಿಗಳ ಪ್ರಭಾವ ತಿಳಿಯಲು ಕಾಯತೊಡಗಿದೆ.

2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್, ಕೃಷಿ ಭಾಗ್ಯ ಮೊದಲಾದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ಎರಡನೇ ಅವಧಿಯಲ್ಲಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಎಪಿಎಂಸಿ ಕಾಯ್ದೆ ರದ್ದು, ಕನ್ನಡ ನಾಮಫಲಕ ಕಡ್ಡಾಯ, ಫೇಕ್ ನ್ಯೂಸ್ ತಡೆಗೆ ಕ್ರಮ, ರಾಜ್ಯ ಶಿಕ್ಷಣ ನೀತಿ ಜಾರಿ, ಬ್ರಾಂಡ್ ಬೆಂಗಳೂರು, ಮೆಟ್ರೋ ಮೂರನೇ ಹಂತ, 7ನೇ ವೇತನ ಆಯೋಗ ವರದಿ ಸ್ವೀಕಾರ ಮೊದಲಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.

ಒಂದು ವರ್ಷದ ಅವಧಿ ಕಾಂಗ್ರೆಸ್‌ ಪಕ್ಷಕ್ಕೆ ಹಲವು ಸವಾಲುಗಳನ್ನು ತಂದೊಡ್ಡಿದೆ. ಮೊದಲಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತು ಯುವ ಶಕ್ತಿ ಯೋಜನೆಯ ಜಾರಿಯಲ್ಲಿ ಆದ ವಿಳಂಬ ಸರ್ಕಾರವನ್ನು ಭಾರೀ ಮುಜಗರಕ್ಕೀಡು ಮಾಡಿತು. ಅದಾದ ಬಳಿಕ ಅಕ್ಕಿ ಪೂರೈಸಲು ಸರ್ಕಾರ ಹೆಣಗಾಡಿ ಕೊನೆಗೆ ಅಕ್ಕಿ ಬದಲಾಗಿ ಹಣ ನೀಡಲು ಮುಂದಾಯಿತು.

ಇವೆಲ್ಲ ಮುಗಿಯುತ್ತಿದ್ದಂತೆಯೇ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದ ರಾಜ್ಯ ಬಳಲಿಹೋಯ್ತು. ಇವೆಲ್ಲವುಗಳ ನಡುವೆ ರಾಮೇಶ್ವರಂ ಕೆಫೆ ಸ್ಪೋಟ, ಹನುಮಾನ್‌ ಚಾಲೀಸಾ ಹಲ್ಲೆ ಪ್ರಕರಣ, ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಇವುಗಳನ್ನೇ ಪ್ರತಿಪಕ್ಷಗಳು ಗುರಿಯಾಗಿರಿಸಿಕೊಂಡು ಪ್ರತಿಭಟನೆ ನಡೆಸಿತು. ಈ ಹೈರಾಣದಿಂದ ಹೊರ ಬರುತ್ತಿದ್ದಂತೆಯೇ ಲೋಕಸಭಾ ಚುನಾವಣೆ ಪ್ರತಿಪಕ್ಷವನ್ನೂ ಸರ್ಕಾರವನ್ನೂ ಸಂಪೂರ್ಣ ಚುನಾವಣಾ ಪ್ರಚಾರದಲ್ಲಿ ತೊಡಗಿಸಿದೆ. ಈ ಅಸಂಖ್ಯಾತ ಮೇಲು ಕೆಳ ತೆರೆಗಳ ನಡುವೆ ಕಾಂಗ್ರೆಸ್‌ ಸರ್ಕಾರ ಒಂದು ವರ್ಷ ಪೂರೈಸಿದೆ.

Join Whatsapp
Exit mobile version