ಬೆಂಗಳೂರು: ‘ಉನ್ನತ ಶಿಕ್ಷಣ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಕೌಶಲ್ಯಾಭಿವೃದ್ಧಿ ಕೇಂದ್ರದ ಲ್ಯಾಬ್ ಉಪಕರಣ ಖರೀದಿಯಲ್ಲಿ ಇಲಾಖೆಯ ಅಧಿಕಾರಿಗಳು ಅಕ್ರಮ ಟೆಂಡರ್ ನಡೆಸಿದ್ದು, ಸುಮಾರು 34 ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ. ಇದೆಲ್ಲವೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಅವರ ಅನುಮತಿ ಮೇರೆಗೆ ನಡೆದಿದ್ದು, ಈ ವಿಚಾರವಾಗಿ ಸಿಬಿಐ ತನಿಖೆ ನಡೆಸಬೇಕು’ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ವಿ.ಎಸ್ ಉಗ್ರಪ್ಪ ಹಾಗೂ ಮಾಜಿ ಸಚಿವರಾದ ಹೆಚ್.ಎಂ ರೇವಣ್ಣ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಇಲಾಖೆಯಲ್ಲಿನ ಅಕ್ರಮ ಟೆಂಡರ್ ಗಳನ್ನು ಬಯಲು ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಂಚಾಲಕರಾದ ರಾಮಚಂದ್ರಪ್ಪ ಹಾಗೂ ಸಲೀಂ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ವಿ.ಎಸ್ ಉಗ್ರಪ್ಪ ಅವರು, ‘ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ನಾ ಖಾವೂಂಗಾ, ನಾ ಖಾನೇ ದೂಂಗಾ (ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ) ಎನ್ನುತ್ತಾ ನಾನು ಈ ದೇಶದ ಕಾವಲುಗಾರ ಎಂದು ಹೇಳಿಕೊಳ್ಳುತ್ತಾರೆ. ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಟೂಲ್ ರೂಮ್ ಅಂಡ್ ಟ್ರೇನಿಂಗ್ ಸೆಂಟರ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಐಆರ್ ಪಿಎಸ್ ಅಧಿಕಾರಿ ಹೆಚ್.ರಾಘವೇಂದ್ರ, ಆಡಳಿತ ವ್ಯವಸ್ಥಾಪಕರಾದ ಮುನೀರ್ ಅಹ್ಮದ್, ಖರೀದಿ ಅಧಿಕಾರಿಗಳಾದ ರಾಜಕುಮಾರ್ ಅವರು ಅಕ್ರಮ ಟೆಂಡರ್ ಮೂಲಕ ಲೂಟಿ ಮಾಡುತ್ತಿದ್ದಾರೆ’ ಎಂದರು.
‘ಐಆರ್ ಪಿಎಸ್ ಅಧಿಕಾರಿ ಕುಣಿಗಲ್ ಮೂಲದವರಾಗಿದ್ದು, ಅವರದೇ ಸಮಾಜದ ಸಂಬಧಿಕರಿರುವ ಮಂತ್ರಿಗಳ ಶಿಫಾರಸ್ಸಿನ ಮೇರೆಗೆ ಈ ಇಲಾಖೆಗೆ ಬಡ್ತಿ ಪಡೆದು ಬಂದಿದ್ದಾರೆ. ಬಹುತೇಕ ಇಲಾಖೆಗಳಲ್ಲಿ ಇಂತಹ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನೇಮಿಸುತ್ತಾರೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಈ ರೀತಿ ರೈಲ್ವೇ ಇಲಾಖೆಗೆ ಸೇರಿದ ಐಆರ್ ಪಿಎಸ್ ಅಧಿಕಾರಿಯನ್ನು ಇಲಾಖೆಗೆ ಈ ರೀತಿ ನೇಮಕ ಮಾಡಲಾಗಿದೆ. ಇವರ ಅವಧಿಯಲ್ಲಿ ಈ ತರಬೇತಿ ಕೇಂದ್ರದ ಲ್ಯಾಬ್ ಗಳಿಗೆ ತರಿಸಲಾಗಿರುವ ಉತ್ಪನ್ನಗಳನ್ನು ಯಾವ ಡಿಪ್ಲಮೋ ಅಥವಾ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಬಳಸುವುದಿಲ್ಲ. ಅವುಗಳ ಅವಶ್ಯಕತೆ ಇಲ್ಲದಿದ್ದರೂ ವಿನಾಕಾರಣ ಈ ಉತ್ಪನ್ನಗಳನ್ನು ಖರೀದಿಸಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆಗೆ ಕೇಂದ್ರ ಹಾಗೂ ರಾಜ್ಯದಿಂದ 200 ಕೋಟಿಯಷ್ಟು ಅನುದಾನ ನೀಡಲಾಗಿದೆ. ಇದು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ಇಲಾಖೆ ಮಂತ್ರಿಗಳು ಡಾ.ಅಶ್ವಥ್ ನಾರಾಯಣ್ ಅವರು. ರಾಜ್ಯದಲ್ಲಿ ಸುಮಾರು 25 ಕೌಶಲ್ಯ ತರಬೇತಿ ಕೇಂದ್ರಗಳಿದ್ದು, ಈಗ ಹೊಸದಾಗಿ ಅಶ್ವಥ್ ನಾರಾಯಣ್ ಅವರ ಹುಟ್ಟೂರಾಗಿರುವ ಚಿಕ್ಕಕಲ್ಯದಲ್ಲಿ ಹಾಗೂ ದೇವನಹಳ್ಳಿಯಲ್ಲಿ ಈ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಕೇಂದ್ರಗಳ ಪೈಕಿ ರಾಜಾಜಿನಗರ ಕೇಂದ್ರದಲ್ಲಿ 500 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಈ ಮೂರು ಅಧಿಕಾರಿಗಳು ಸಂಬಂಧಪಟ್ಟ ಮಂತ್ರಿಗಳ ಗಮನದಲ್ಲೇ 8 ಟೆಂಡರ್ ಕರೆದಿದ್ದಾರೆ. ಇದರ ಒಟ್ಟಾರೆ ಮೊತ್ತ 61.52,04,747 ರೂಪಾಯಿ. ಇನ್ನು 40 ಕೋಟಿ ಮೌಲ್ಯ. ಇನ್ನು 40 ಕೋಟಿ ಮೌಲ್ಯದ ಉಳಿದ ಎರಡು ಟೆಂಡರ್ ಪ್ರಕ್ರಿಯೆಯೂ ಮುಕ್ತಾಯ ಹಂತದಲ್ಲಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗ ಮಾಡುತ್ತೇವೆ.
ಈಗ ಕರೆದಿರುವ ಟೆಂಡರ್ ಪೈಕಿ ಮೊದಲನೇ ಟೆಂಡರ್ ನಲ್ಲಿ ಖರೀದಿ ಮೊತ್ತ, 9,47,98,000. ಆದರೆ ಇದರ ಮಾರುಕಟ್ಟೆ ಮೊತ್ತ 4.50 ಕೋಟಿ. ಎರಡನೇ ಟೆಂಡರ್ ನಲ್ಲಿ 9.20 ಕೋಟಿ ಖರೀದಿ ಮೊತ್ತವಿದ್ದು, ಅದರ ಮಾರುಕಟ್ಟೆ ಮೌಲ್ಯ 4 ಕೋಟಿ. ಮೂರನೇ ಬಿಡ್ ನಲ್ಲಿ 17.82 ಕೋಟಿ ಖರೀದಿ ಮೊತ್ತವಿದ್ದು, ಅವುಗಳ ಮಾರುಕಟ್ಟೆ ಮೊತ್ತ 8.50 ಕೋಟಿ. ನಾಲ್ಕನೇ ಬಿಡ್ ನಲ್ಲಿ 2.80 ಕೋಟಿ ಖರೀದಿ ಮೊತ್ತವಿದ್ದು, ಅದರ ಮಾರುಕಟ್ಟೆ ಮೌಲ್ಯ 1.25 ಕೋಟಿ ಮಾತ್ರ. ಐದನೇ ಬಿಡ್ ನಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಲ್ಯಾಬ್ ಗೆ 1.03 ಕೋಟಿ ಖರೀದಿ ಮೊತ್ತವಿದೆ. ಮಾರುಕಟ್ಟೆಯಲ್ಲಿ ಅದರ ಮೌಲ್ಯ 40 ಲಕ್ಷ. ಆರನೇ ಟೆಂಡರ್ ನಲ್ಲಿ 4.86 ಕೋಟಿ ಮೊತ್ತ ನಿಗದಿ ಮಾಡಿದ್ದು, ಮಾರುಕಟ್ಟೆ ಮೊತ್ತ 2 ಕೋಟಿ. ಏಳನೇ ಟೆಂಡರ್ ನಲ್ಲಿ 6.93 ಕೋಟಿ ನಿಗದಿ ಮಾಡಿದ್ದು, ಇದರ ಮಾರುಕಟ್ಟೆ ಮೊತ್ತ ಕೇವಲ 3 ಕೋಟಿ. ಎಂಟನೇ ಬಿಡ್ ನಲ್ಲಿ 9.83 ಕೋಟಿ ನಿಗದಿ ಮಾಡಲಾಗಿದ್ದು, ಇದರ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ 3.15 ಕೋಟಿ. ಒಟ್ಟಾರೆ ಈ ಎಲ್ಲ ಬಿಡ್ ಗಳಿಂದ ಸರ್ಕಾರ 61.52 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು, ಅದರ ಮಾರುಕಟ್ಟೆ ಮೊತ್ತ 27.15 ಕೋಟಿ ರೂಪಾಯಿ ಮಾತ್ರ. ಅವರಿಗೆ ಕಿಕ್ ಬ್ಯಾಕ್ ಹೋಗಿರುವುದು 34.37 ಕೋಟಿ. ಈ 8 ಟೆಂಡರ್ ಗಳಲ್ಲಿ ಬಹುತೇಕ ಬಿಡ್ ಗಳನ್ನು ಅಕ್ವಾ ಟೆಕ್ವಿಪ್ಮೆಂಟ್ಸ್ ಗೆ ನೀಡಲಾಗಿದೆ. ಬಿಡ್ ನಂ.7 ಅನ್ನು ರವಿತೇಜ ಎಲೆಕ್ಟೋಸಿಸ್ಟಮ್ಸ್ ಗೆ ನೀಡಲಾಗಿದ್ದು, ಇದು ಅಕ್ವಾ ಟೆಕ್ವಿಪ್ಮೆಂಟ್ಸ್ ನ ಸ್ನೇಹಿತರಾಗಿದ್ದಾರೆ. ಇನ್ನು ಮೊದಲ ಬಿಡ್ ಅನ್ನು ಲಾರೆನ್ಸ್ ಅಂಡ್ ಮೇಯೋ ಅವರಿಗೆ ನೀಡಿದ್ದಾರೆ. ಈ ಟೆಂಡರ್ ನಲ್ಲಿ ಭಾಗಿಯಾಗಿರುವವರು ಉತ್ಪನ್ನ ತಯಾರಕರಲ್ಲ. ಈ ಉತ್ಪನ್ನ ಸರಬರಾಜು ಮಾಡುವ ಏಜೆನ್ಸಿಗಳೂ ಅಲ್ಲ ಎಂದು ಹೇಳಿದರು.
ಈ ಟೆಂಡರ್ ಅನ್ನು ಇವರಿಗೆ ನೀಡಬೇಕು ಎಂಬ ಉದ್ದೇಶದಿಂದ ಟೆಂಡರ್ ಕರೆಯುವಾಗ ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಬೇರೆಯವರಿಗೆ ಟೆಂಡರ್ ನಲ್ಲಿ ಅವಕಾಶ ಸಿಗಬಾರದು ಎಂದು ಸಚಿವರ ರಕ್ಷಣೆಯಲ್ಲಿ ಈ ಮೂವರು ಅಧಿಕಾರಿಗಳು ಅಕ್ರಮ ಟೆಂಡರ್ ನಡೆಸಿದ್ದಾರೆ’ ಎಂದು ಆರೋಪಿಸಿದರು.
‘ಪಾರದರ್ಶಕ ಟೆಂಡರ್ ಕಾಯ್ದೆ ಪ್ರಕಾರ ಯಾವುದೇ ಟೆಂಡರ್ 1 ಕೋಟಿಗೂ ಹೆಚ್ಚು ಮೊತ್ತದ್ದಾಗಿದ್ದರೆ ಬಿಡ್ ಪೂರ್ವಭಾವಿ ಸಭೆ ಕರೆಯಬೇಕು. ಈ 8 ಟೆಂಡರ್ ಕರೆಯುವ ಸಂದರ್ಭದಲ್ಲಿ ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ. ಟೆಂಡರ್ ದಾಖಲೆಗಳಲ್ಲೂ ಈ ಸಭೆಯ ಬಗ್ಗೆ ಮಾಹಿತಿ ಇಲ್ಲ. ಇದರ ಜತೆಗೆ ಸಿಎಂಸಿ ಯಂತ್ರಗಳನ್ನು 2019ರಲ್ಲಿ 28.98 ಲಕ್ಷ ರೂಪಾಯಿಗೆ ಒಂದು ಯಂತ್ರ ಎಂಬಂತೆ ಒಟ್ಟು 5 ಯಂತ್ರಗಳನ್ನು ಖರೀದಿ ಮಾಡಲಾಗುತ್ತದೆ. 2021ರಲ್ಲಿ ಇದೇ ಯಂತ್ರಗಳನ್ನು 31.27 ಲಕ್ಷಮೊತ್ತದಂತೆ 6 ಯಂತ್ರಗಳನ್ನು ಖರೀದಿ ಮಾಡಲಾಗುತ್ತದೆ. ಅದೇ ಯಂತ್ರಗಳನ್ನು ಮಾರ್ಚ್ ನಲ್ಲಿ 99.12 ಲಕ್ಷದಂತೆ 4 ಯಂತ್ರಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿಗೆ ಒಂದು ಯಂತ್ರವನ್ನು ಮೂರುಪಟ್ಟು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಲಾಗಿದೆ’ ಎಂದು ವಿವರಿಸಿದರು.
‘ಪಾರದರ್ಶಕ ಕಾಯ್ದೆ ಪ್ರಕಾರ ಬಿಡ್ ನಲ್ಲಿ ಒಂದು ಅಥವಾ ಎರಡು ಕಂಪನಿಗಳು ಮಾತ್ರ ಭಾಗವಹಿಸಿದ್ದರೆ, ಆ ಟೆಂಡರ್ ರದ್ದುಗೊಳಿಸಿ ಮರುಟೆಂಡರ್ ಕರೆಯಬೇಕು ಎಂದು ಕಾನೂನು ಹೇಳುತ್ತದೆ. ದುರಾದೃಷ್ಟವಶಾತ್ 8 ಟೆಂಡರ್ ಗಳಲ್ಲಿ ಕೇವಲ 2 ಕಂಪನಿಗಳು ಮಾತ್ರ ಭಾಗವಹಿಸಿದ್ದು, ಇವುಗಳಲ್ಲಿ ಯಾವ ಟೆಂಡರ್ ಅನ್ನು ಮರುಟೆಂಡರ್ ಕರೆಯಲಿಲ್ಲ. ಈ ಎರಡು ಕಂಪನಿಗಳು ಮಾತ್ರ ಭಾಗವಹಿಸುವಂತೆ ನೋಡಿಕೊಳ್ಳುತ್ತಾರೆ. ಹೀಗೆ ಮೂವರು ಅಧಿಕಾರಿಗಳು ರಾಜ್ಯ ಸರ್ಕಾರದ ಬೆಕ್ಕಸವನ್ನು ಲೂಟಿ ಮಾಡಿದ್ದು, ಈ ತಿಮಿಂಗಲಗಳನ್ನು ಪೋಷಣೆ ಮಾಡುತ್ತಿರುವುದು ಸಚಿವರಾದ ಡಾ.ಅಶ್ವಥ್ ನಾರಾಯಣ್ ಅವರು. ಅಶ್ವಥ್ ನಾರಾಯಣ ಅವರೇ ನಿಮಗೂ ಈ ಅಧಿಕಾರಿ ರಘುನಾಥ್ ಅವರಿಗೂ ಇರುವ ಸಂಬಂಧ ಏನು? ಈ ಅವ್ಯವಹಾರದಲ್ಲಿ ನಿಮ್ಮ ಪಾಲೆಷ್ಟು? ಈ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ರಾಜ್ಯದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ಹೇಗೆಲ್ಲಾ ಲೂಟಿ ಮಾಡಲಾಗುತ್ತಿದೆ ಎಂಬುದಕ್ಕೆ ಇದು ಕೇವಲ ಸ್ಯಾಂಪಲ್ ಅಷ್ಟೇ. ಈ ಸರ್ಕಾರಕ್ಕೆ ನಿಜವಾಗಿಯೂ ಬದ್ಧತೆ ಇದ್ದರೆ, ಈ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು. ಇದರಲ್ಲಿ ಅಧಿಕಾರಿಗಳು, ಮಂತ್ರಿಗಳ ಪಾತ್ರ ಎನು? ಇದರಲ್ಲಿ ಎಷ್ಟು ಭ್ರಷ್ಟಾಚಾರ ನಡೆದಿದೆ’ ಎಂದು ತಿಳಿಸಿದರು.
ಹೆಚ್.ಎಂ ರೇವಣ್ಣ ಮಾತನಾಡಿ, ‘ಈ ರಾಜ್ಯದಲ್ಲಿ ಇಂತಹ ಅನೇಕ ಹಗರಣಗಳಿವೆ. ಮೊಟ್ಟೆ ಹಗರಣ ಮಾಡಿದ ಮಂತ್ರಿಯನ್ನು ಖಾತೆ ಬದಲಾಯಿಸಿ ಮತ್ತೆ ಬೇರೆ ಖಾತೆ ನೀಡಿದ್ದಾರೆ. ಇನ್ನು ಆರೋಗ್ಯ ಇಲಾಖೆಯಲ್ಲಿ ಮಾಸ್ಕ್ ನಿಂದ ಉಪಕರಣವರೆಗೆ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಎಂದವರು ಈ ಸರ್ಕಾರಕ್ಕೆ ಎಷ್ಟು ಪರ್ಸೆಂಟ್ ಸರ್ಕಾರ ಎಂದು ಕರೆಯುತ್ತಾರೋ ಗೊತ್ತಿಲ್ಲ. ಹಿಂದುಳಿದ ವರ್ಗಗಳ ಸಚಿವರಾದ ಪೂಜಾರಿ ಅವರೇ ಇದೇ ಸರ್ಕಾರದ ಹಿಂದಿನ ಮಂತ್ರಿಗಳ ಹಗರಣವನ್ನು ಬಯಲು ಮಾಡಿದ್ದಾರೆ ಎಂದರೆ ಈ ಸರ್ಕಾರ ಯಾವ ಮಟ್ಟಕ್ಕೆ ಭ್ರಷ್ಟಾಚಾರ ನಡೆಸುತ್ತಿದೆ ಎಂಬುದಕ್ಕೆ ಸಾಕ್ಷಿ. ಕೃಷಿ ಇಲಾಖೆ 210 ಕೋಟಿ, ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಅವ್ಯವಹಾರದ ಆರೋಪ, ಹೀಗೆ ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸರ್ಕಾರ ಇದಾಗಿದೆ. ಯಾರು ಹೆಚ್ಚು ಭ್ರಷ್ಟಾಚಾರ ನಡೆಸುತ್ತಾರೆ ಎಂಬ ಪೈಪೋಟಿಗೆ ಬಿದ್ದಿದ್ದಾರೆ. ಈ ಹಿಂದೆ ಎಸ್ಸಿ ಎಸ್ಟಿ ಮಕ್ಕಳಿಗಾಗಿ ಎಸಿಆರ್ ಕಂಪನಿಯಿಂದ 14,500 ರೂಪಾಯಿಗೆ ಒಂದು ಲ್ಯಾಪ್ ಟಾಪ್ ಎಂಬಂತೆ 28 ಸಾವಿರ ಲ್ಯಾಪ್ ಟಾಪ್ ಖರೀದಿ ಮಾಡಿದ್ದಕ್ಕೆ ಯಡಿಯೂರಪ್ಪನವರು ಹೋರಾಟ ಮಾಡಿ ಸಮಿತಿ ರಚಿಸಿದ್ದರು. ಆದರೆ ಬಿಜೆಪಿ ಸರ್ಕಾರದಲ್ಲಿ ಅಶ್ವಥ್ ನಾರಾಯಣ ಅವರು ಬಂದ ನಂತರ ಅದೇ ಎಸಿಆರ್ ಕಂಪನಿಯಿಂದ ಅದೇ ಲ್ಯಾಪ್ ಟಾಪ್ ಅನ್ನು 28 ಸಾವಿರಕ್ಕೆ ಒಂದು ಲ್ಯಾಪ್ ಟಾಪ್ ನಂತೆ 1.10 ಲಕ್ಷ ಲ್ಯಾಪ್ ಟಾಪ್ ಖರೀದಿಸಿದ್ದಾರೆ. ಹೀಗೆ ಈ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ’ ಎಂದರು.