ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕಾಂಗ್ರೆಸ್ ಒತ್ತಾಯ: ರಾಜ್ಯಪಾಲರಿಗೆ ಮನವಿ

Prasthutha|

ಬೆಂಗಳೂರು:  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಭ್ರಷ್ಟಚಾರ ಮಿತಿಮೀರಿದೆ. ಹೀಗಾಗಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಕಾಂಗ್ರೆಸ್ ಪಕ್ಷದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರಿ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಸುಮಾರು 40% ಅನ್ನು ಸರ್ಕಾರದ ಸಚಿವರು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಕಮಿಷನ್ ರೂಪದಲ್ಲಿ ನೀಡಬೇಕು ಎಂದು ಗುತ್ತಿದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಹಾಗೂ ಸಂಘದ ಲಕ್ಷಕ್ಕೂ ಅಧಿಕ ಸದಸ್ಯರು ಪ್ರಧಾನಿಗಳಿಗೆ ಪತ್ರ ಬರೆದಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ರಾಜ್ಯಪಾಲರಿಗೆ ನೀಡಲಾಗಿರುವ ಮನವಿಯಲ್ಲಿ ಗಮನಕ್ಕೆ ತರಲಾಗಿದೆ. ಕೆಂಪಣ್ಣನವರು ಬರೆದಿರುವ ಪತ್ರವನ್ನೇ ನೀಡಿದ್ದೇವೆ, ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ್ನೂ ನೀಡಿದ್ದೇವೆ. ರಾಜ್ಯದ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರಲಿಲ್ಲ.

ಪ್ರಧಾನಿಗೆ ಬರೆದ ಪತ್ರದಲ್ಲಿ ನಿರ್ದಿಷ್ಟ ಹೆಸರನ್ನು ಉಲ್ಲೇಖ ಮಾಡದಿದ್ದರು ಸಚಿವರು, ಸಂಸದರು, ಇಲಾಖೆಯ ಮುಖ್ಯ ಅಧಿಕಾರಿಗಳು ಎಂದು ಹೇಳಲಾಗಿದೆ. ಇಷ್ಟು ಸಾಕಾಗಲ್ವ? ಲೋಕೋಪಯೋಗಿ ಇಲಾಖೆ, ಸಣ್ಣ ಹಾಗೂ ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಬಿಬಿಎಂಪಿ ಇಲಾಖೆಯನ್ನು ಹೆಸರಿಸಿದ್ದಾರೆ. ಇನ್ನೇನು ಹೇಳ್ಬೇಕು?

- Advertisement -

ಹೀಗಾಗಿ ರಾಜ್ಯ ಸರ್ಕಾರಕ್ಕೆ ಸಂವಿಧಾನಾತ್ಮಕವಾಗಿ ಆಡಳಿತ ನಡೆಸುವ ಯಾವ ನೈತಿಕ ಹಕ್ಕಿಲ್ಲ, ರಾಜ್ಯದಲ್ಲಿ 356ನೇ ವಿಧಿಯನ್ನು ಜಾರಿಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ.  ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂಬುದು ನಮ್ಮ ಮನವಿ. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ರಚಿಸಿ, ಅದರ ಮೂಲಕ ತನಿಖೆಯಾಗಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,  ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದ ಅತ್ಯಂತ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕು. ಸಂವಿಧಾನದ 356 ನೇ ಪರಿಚ್ಛೇದದ ಪ್ರಕಾರ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದರು

ಸರಕಾರದ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಹಂತ-ಹಂತವಾಗಿ ಹೋರಾಟ ರೂಪಿಸುತ್ತೇವೆ. ಪಕ್ಷದ ನಾಯಕರ ಜತೆ ಚರ್ಚಿಸಿ, ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಪ್ರಧಾನಿಗಳಿಗೆ ಹೋಗಿರುವ ದೂರಿನ ಪ್ರತಿಯನ್ನು ಪತ್ರ ಸಮೇತ ರಾಜ್ಯಪಾಲರಿಗೆ ನೀಡಿದ್ದೇವೆ.

ಇದರ ಜತೆಗೆ ನಾನಾ ಇಲಾಖೆಯ ಕಾಮಗಾರಿಗಳ ಅಂದಾಜು ವೆಚ್ಚ ಡಬಲ್ ಆಗುತ್ತಿದೆ. 100 ಕೋಟಿ ರುಪಾಯಿ ಕಾಮಗಾರಿಗೆ 200 ಕೋಟಿ ರುಪಾಯಿ ತೋರಿಸಲಾಗುತ್ತಿದೆ. ಅದರ ಬಗ್ಗೆಯೂ ನಮ್ಮ ಬಳಿ ದಾಖಲೆಗಳು ಇವೆ. ಒಂದೆರಡು ದಿನದಲ್ಲೇ ಅವುಗಳನ್ನು ಬಿಡುಗಡೆ ಮಾಡುತ್ತೇವೆ ಎಂದರು.

Join Whatsapp