Home ಟಾಪ್ ಸುದ್ದಿಗಳು ಬಿಜೆಪಿಯಿಂದ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನ: ಕಾಂಗ್ರೆಸ್ ಟೀಕೆ

ಬಿಜೆಪಿಯಿಂದ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನ: ಕಾಂಗ್ರೆಸ್ ಟೀಕೆ

ಬೆಂಗಳೂರು: ಸೈಲೆಂಟ್ ಸುನಿಲ್, ಫೈಟರ್ ರವಿ ಹಾಗೂ ಬೆತ್ತನಗೆರೆ ಶಂಕರ ಬಿಜೆಪಿ ಸೇರ್ಪಡೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.


ಇತ್ತೀಚೆಗೆ ಕಂದಾಯ ಸಚಿವ ಆರ್ ಅಶೋಕ್ ಅವರು ಕಾಂಗ್ರೆಸ್ ಅನ್ನು ರೌಡಿಗಳ ಕಾರ್ಖಾನೆ ಎಂದು ಅವಹೇಳನ ಮಾಡಿದ್ದರು. ಇದೀಗ ಬಿಜೆಪಿ ನಾಯಕರು ರೌಡಿ ಶೀಟರ್’ಗಳೊಂದಿಗೆ ಕಾಣಿಸಿಕೊಂಡಿರುವುದು ಕಾಂಗ್ರೆಸ್ ನ ಕೆಂಗಣ್ಣಿಗೆ ಕಾರಣವಾಗಿದೆ.


‘ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ರೌಡಿಗಳನ್ನು ಬಿಜೆಪಿ ಸೇರಿಸಿಕೊಳ್ಳುವುದಿಲ್ಲ ಎನ್ನುತ್ತಿರುವ ಬಿಜೆಪಿ ನಾಯಕರು ಮತ್ತೊಂದೆಡೆ ರೌಡಿಗಳ ಪಕ್ಷ ಸೇರ್ಪಡೆ ಅಭಿಯಾನವನ್ನೇ ನಡೆಸುತ್ತಿದೆ. ಸಂಸದ ಪ್ರತಾಪ ಸಿಂಹ ಅವರು ಬೆತ್ತನಗೆರೆ ಶಂಕರ ಎಂಬ ರೌಡಿ ಶೀಟರ್’ನನ್ನು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿ’ ಎಂದು ಹೇಳಿದೆ.


‘ಸಿಎಂ ಬೊಮ್ಮಾಯಿಯವರು ದಮ್ಮು, ತಾಕತ್ತು ಇದ್ರೆ ಬನ್ನಿ ಎಂದು ರೌಡಿಸಂ ಭಾಷೆಯಲ್ಲಿ ಸವಾಲು ಹಾಕಿದ್ದರ ಹಿಂದೆ ನೈಜ ರೌಡಿಸಂ ಇದೆ ಎಂದು ಈಗ ಬೆಳಕಿಗೆ ಬರುತ್ತಿದೆ. ಬೊಮ್ಮಾಯಿ ಅವರೇ, ರೌಡಿ ಮೋರ್ಚಾ ಕಟ್ಟಿಕೊಂಡು ಈ ಸವಾಲು ಹಾಕಿದ್ದೀರಾ? ಬಿಜೆಪಿ ಕಚೇರಿ ಈಗ ರೌಡಿಗಳ ಅಡ್ಡೆಯಾಗಿದೆ, ಬೊಮ್ಮಾಯಿಯವರು ರೌಡಿಗಳಿಗೆ ಮಹಾಗುರುವಿನಂತೆ ಆಗಿದ್ದಾರೆ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ರೌಡಿರಾಜ್ಯ ಕಟ್ಟಲು ಹೊರಟಿದ್ದೀರಾ? ಇದೇನಾ ನಿಮ್ಮ ಸಂಸ್ಕೃತಿ’ ಎಂದು ಕಾಂಗ್ರೆಸ್ ಗುಡುಗಿದೆ.

Join Whatsapp
Exit mobile version