ನವದೆಹಲಿ: ಕಾಂಗ್ರೆಸ್ ಪಕ್ಷದ ಮೂರು ದಿನಗಳ ಚಿಂತನ – ಮಂಥನ ಸಭೆಯಾದ ನವ ಸಂಕಲ್ಪ್ ಶಿವರ್ ಇಂದು ಪ್ರಾರಂಭವಾಗಲಿದೆ. ಎಲ್ಲಾ ಹಂತದಲ್ಲಿ 50 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ಶೇಕಡಾ 50 ರಷ್ಟು ಪ್ರಾತಿನಿಧ್ಯವನ್ನು ಒಳಗೊಂಡಂತೆ ಶೀಘ್ರದಲ್ಲೇ ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಪಕ್ಷ ಘೋಷಿಸಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೂ ಆದೇಶ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷವು ಒಂದು ಕುಟುಂಬ, ಒಂದು ಟಿಕೆಟ್ ಪ್ರಸ್ತಾವವನ್ನು ಈ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಪಕ್ಷದಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಕೆಲಸ ಮಾಡಿದವರು ಟಿಕೆಟ್ ಗೆ ಅರ್ಹರಾಗುತ್ತಾರೆ ಎಂದು ಹೇಳಲಾಗಿದೆ.
ಒಂದು ಕುಟುಂಬದಲ್ಲಿ ಒಂದು ಟಿಕೆಟ್ ಪ್ರಸ್ತಾವ ಅನುಮೋದನೆ ಆಗುವ ಸಾಧ್ಯತೆಯಿದೆ. ಟಿಕೆಟ್ ಬಯಸುತ್ತಿರುವ ಕುಟುಂಬದ ಇತರೆ ಸದಸ್ಯರು ಪಕ್ಷದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿರಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ತಿಳಿಸಿದ್ದಾರೆ.
ಈ ಅದೇಶದನ್ವಯ ಗಾಂಧಿ ಕುಟುಂಬದ ಮೂರು ಸದಸ್ಯರಾದ ಸೋನಿಯಾ, ರಾಹುಲ್ ಮತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಚ್ಛಿಸಿದರೆ ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜನವರಿ 2019 ರಲ್ಲಿ ಸಕ್ರಿಯ ರಾಜಕೀಯ ಪ್ರವೇಶ ಮಾಡಿದ್ದಾರೆ. ಐದು ವರ್ಷಗಳ ನಿಯಮವು ಮೂಲತಃ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ನೇರವಾಗಿ ರಾಜಕೀಯ ಪ್ರವೇಶಿಸಲು ಬಯಸುವ ಕುಟುಂಬದ ಸದಸ್ಯರಿಗೆ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಉದ್ಘಾಟನಾ ಭಾಷಣದೊಂದಿಗೆ ಶಿವರ್ ಮಧ್ಯಾಹ್ನ ಪ್ರಾರಂಭವಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿವೆ.
ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪಾಲ್ಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಅಶೋಕ್ ಗೆಹಲೊಟ್ ಮತ್ತಿತರರ ಮುಖಂಡರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತಿತರರು ಉಪಸ್ಥಿತರಿದ್ದಾರೆ.