ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಕೆ.ವೆಂಕಟೇಶ್ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವ ಮೂಲಕ ಚುನಾವಣಾಧಿಕಾರಿ ಕುಸುಮ ಕುಮಾರಿ ಯವರಿಗೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ತಮ್ಮ ಪತ್ನಿ ಭಾರತಿ ವೆಂಕಟೇಶ್ ಹಾಗೂ ಸಹಸ್ರಾರು ಬೆಂಬಲಿಗರೊಂದಿಗೆ ಪಟ್ಟಣದ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದೇವಾಲಯಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಮಾವಣೆಗೊಂಡ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರೊಡನೆ ಬಿ.ಎಂ.ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತಾಲ್ಲೂಕು ಆಡಳಿತದ ವರೆಗೆ ಸಾಗಿ ಬಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೇರಳದ ಚೆಂಡೆ ಮದ್ದಳೆ, ವೀರಗಾಸೆ ಕುಣಿತ ಸೇರಿದಂತೆ ಅನೇಕ ಕಲಾ ತಂಡಗಳು ಮೆರುಗು ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿಸಿದವು.
ಈ ಸಂದರ್ಭದಲ್ಲಿ ಮಾಜಿ ಶಾಸಕರ ಪುತ್ರ ನಿತಿನ್ ವೆಂಕಟೇಶ್ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಜೈಕಾರ ಹಾಕುತ್ತಾ ಕುಣಿದು ಕುಪ್ಪಳಿಸಿದರು. ನಂತರ ಮಧ್ಯಾಹ್ನ 1.30ಕ್ಕೆ ತಾಲ್ಲೂಕಿನ ಆಡಳಿತ ಭವನದಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಕುಸುಮ ಕುಮಾರಿ ಯವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಕಟೇಶ್, ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡರಾದ ಹೆಚ್.ಡಿ.ಗಣೇಶ್, ಹೊಲದಪ್ಪ, ಬಿ.ಜೆ.ಬಸವರಾಜ್, ಬಿ.ವಿ.ಜವರೇಗೌಡ ಸೇರಿದಂತೆ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.