ಹನೂರು ಪಟ್ಟಣ ಪಂಚಾಯತಿ | ಅಧಿಕಾರಕ್ಕಾಗಿ ಬಿಜೆಪಿ-ಕಾಂಗ್ರೆಸ್ ಮೈತ್ರಿ!

Prasthutha|

ಚಾಮರಾಜ ನಗರ : ಇಲ್ಲಿನ ಹನೂರು ಪಟ್ಟಣ ಪಂಚಾಯತಿಯಲ್ಲಿ ಕುತೂಹಲಕಾರಿ ಮೈತ್ರಿಯೊಂದು ನಡೆದಿದೆ. ರಾಜ್ಯ ಹಾಗೂ ದೇಶದಲ್ಲಿ ಸೈದ್ಧಾಂತಿಕತೆ ಭಿನ್ನತೆ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಹನೂರು ಪಟ್ಟಣ ಪಂಚಾಯತಿಯಲ್ಲಿ ಮಾತ್ರ ಜೆಡಿಎಸ್ ಅನ್ನು ಹೊರಗಿಡಲು ಮೈತ್ರಿ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

13 ಸದಸ್ಯ ಬಲದ ಪಟ್ಟಣ ಪಂಚಾಯತಿಯಲ್ಲಿ ಅಧ್ಯಕ್ಷೆಯಾಗಿ ಬಿಜೆಪಿಯ ಚಂದ್ರಮ್ಮ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಹರೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ನರೇಂದ್ರ ಅವರು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದರೆ, ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ನ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಬೆಂಬಲಿಸಿದರು ಎಂದು ವರದಿಯಾಗಿದೆ.

- Advertisement -

13 ಸದಸ್ಯ ಬಲದ ಪಟ್ಟಣ ಪಂಚಾಯತಿಯಲ್ಲಿ ಬಹುಮತಕ್ಕೆ ಏಳು ಸದಸ್ಯರ ಅಗತ್ಯವಿತ್ತು. ಇತ್ತಿಚೆಗೆ ಒಬ್ಬ ಸದಸ್ಯ ನಿಧನರಾಗಿದ್ದುದರಿಂದ ಪಂಚಾಯತಿ ಸದಸ್ಯ ಬಲ 12ಕ್ಕೆ ಇಳಿಕೆಯಾಗಿತ್ತು. ಜೆಡಿಎಸ್ ಆರು ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತವಿರಲಿಲ್ಲ. ಕಾಂಗ್ರೆಸ್ ನಾಲ್ಕು, ಬಿಜೆಪಿ ಮೂರು ಸೀಟುಗಳನ್ನು ಗೆದ್ದಿತ್ತು.

ಜೆಡಿಎಸ್ ಅನ್ನು ಹೊರಗಿಡಲು ಕಾಂಗ್ರೆಸ್-ಬಿಜೆಪಿ ಒಂದಾಗಿದ್ದು, ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಜೆಡಿಎಸ್ ನಿಂದ ಮಮ್ತಾಜ್ ಬಾನು, ಉಪಾಧ್ಯಕ್ಷ ಸ್ಥಾನಕ್ಕೆ ಆನಂದ ಕುಮಾರ್ ಸ್ಪರ್ಧಿಸಿದ್ದರು.

ಸೈದ್ಧಾಂತಿಕ ವಿರೋಧಿ ಪಕ್ಷಗಳು ಅಧಿಕಾರದ ದುರಾಸೆಯಿಂದ ಒಟ್ಟಾಗಿವೆ ಎಂದು ಜೆಡಿಎಸ್ ಮುಖಂಡ ಮಂಜುನಾಥ್ ಆರೋಪಿಸಿದ್ದಾರೆ.

- Advertisement -