Home ಟಾಪ್ ಸುದ್ದಿಗಳು ವಿ.ಡಿ.ಸಾವರ್ಕರ್ ವಿರುದ್ಧ ಮೃದುಧೋರಣೆಗೆ ಕಾಂಗ್ರೆಸ್ ಸಮ್ಮತಿ

ವಿ.ಡಿ.ಸಾವರ್ಕರ್ ವಿರುದ್ಧ ಮೃದುಧೋರಣೆಗೆ ಕಾಂಗ್ರೆಸ್ ಸಮ್ಮತಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿ.ಡಿ.ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಶಿವಸೇನೆ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಎನ್’ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸಾವರ್ಕರ್ ವಿಷಯದಲ್ಲಿ ಮೃದುಧೋರಣೆ ತಾಳುವಂತೆ ಕಾಂಗ್ರೆಸ್’ಗೆ ಸಲಹೆ ನೀಡಿದ್ದು, ಇದನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ.


ಸೋಮವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದ ವಿಪಕ್ಷ ನಾಯಕರ ಸಭೆಯಲ್ಲಿ ಪವಾರ್ ಈ ವಿಷಯ ಪ್ರಸ್ತಾಪಿಸಿ, ಮಹಾರಾಷ್ಟ್ರದ ಪೂಜ್ಯ ವ್ಯಕ್ತಿ ಸಾವರ್ಕರ್ ಅವರನ್ನು ಗುರಿಯಾಗಿಸುವುದರಿಂದ ರಾಜ್ಯದಲ್ಲಿ ವಿರೋಧ ಪಕ್ಷದ ಮೈತ್ರಿಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಸಾವರ್ಕರ್ ಎಂದಿಗೂ ಆರೆಸ್ಸೆಸ್ ಸದಸ್ಯರಾಗಿಲ್ಲ ಎಂದು ರಾಹುಲ್ ಗಾಂಧಿಗೆ ತಿಳಿಸಿದ ಪವಾರ್, ವಿರೋಧ ಪಕ್ಷಗಳ ನಿಜವಾದ ಹೋರಾಟ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯೊಂದಿಗೆ ಎಂದು ಒತ್ತಿ ಹೇಳಿದರು.


ವಿ ಡಿ ಸಾವರ್ಕರ್ ಕುರಿತಂತೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ವಿಪಕ್ಷಗಳ ಸಭೆಯಿಂದ ದೂರ ಉಳಿಯುವುದಾಗಿ ಹೇಳಿದ್ದರು. ಈ ವೇಳೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಈ ವಿಷಯದ ಬಗ್ಗೆ ಶಿವಸೇನೆಯ ಕಳವಳವನ್ನು ಕಾಂಗ್ರೆಸ್ ನಾಯಕತ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಸದ್ಯಕ್ಕೆ ಸಾವರ್ಕರ್ ವಿಷಯವನ್ನು ಪ್ರಸ್ತಾಪಿಸುವುದಿಲ್ಲ ಎಂದು ಕಾಂಗ್ರೆಸ್ ಕೂಡ ಭರವಸೆ ನೀಡಿದೆ.


ಮಹಾರಾಷ್ಟ್ರದಲ್ಲಿ ಶಿವಸೇನೆಯ ಅಸಮಾಧಾನಕ್ಕೆ ಕಾರಣವಾದ ಸಾವರ್ಕರ್ ವಿರುದ್ಧದ ಟೀಕೆಯನ್ನು ಕಡಿಮೆ ಮಾಡಿ, ಮೃದುಧೋರಣೆ ತಳೆಯುವ ಶರದ್ ಪವಾರ್ ಅವರ ಸಲಹೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರವಾಗಿ ಕ್ಷಮೆ ಕೇಳಲು ನಿರಾಕರಿಸಿದ್ದ ರಾಹುಲ್ ಗಾಂಧಿ, “ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಕ್ಷಮೆಯಾಚಿಸುವುದಿಲ್ಲ,” ಎಂದು ಹೇಳಿದ್ದರು.

Join Whatsapp
Exit mobile version