ನವದೆಹಲಿ: ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಪಕ್ಷದ ಕೆಲವು ನಾಯಕರು ತಾಳಿರುವ ಮೌನದಿಂದಾಗಿ ಅಲ್ಪಸಂಖ್ಯಾತರು ದೂರವಾಗುತ್ತಿದ್ದಾರೆ ಎಂಬ ಆತಂಕವನ್ನು ಕಾಂಗ್ರೆಸ್ ಹೈಕಮಾಂಡ್ ವ್ಯಕ್ತಪಡಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ ಮಂಗಳವಾರ ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಚುನಾವಣಾ ನೀತಿ ತಂತ್ರಜ್ಞ ಸುನೀಲ್ ಕನುಗೋಲು ಪಾಲ್ಗೊಂಡಿದ್ದರು. ಸುಮಾರು ಐದು ಗಂಟೆಗಳ ವರೆಗೆ ನಡೆದ ಸಭೆಯಲ್ಲಿ ಮುಸ್ಲಿಮರ ಮತಗಳು ತಪ್ಪುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿದೆ ಎನ್ನಲಾಗಿದೆ.
ಕರ್ನಾಟಕದ ರಾಜಕೀಯ ಸ್ಥಿತಿಗತಿ ಕುರಿತು ಎಐಸಿಸಿ ನಡೆಸಿದ ಸಮೀಕ್ಷೆ ಯಲ್ಲಿ , ಮುಸ್ಲಿಂ ಸಮುದಾಯ ಪಕ್ಷದಿಂದ ದೂರ ಸರಿಯುತ್ತಿರುವ ಬಗ್ಗೆ ಸಮೀಕ್ಷೆ ಉಲ್ಲೇಖಿಸಿದೆ. ಶೇ 20ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ ನ ಕೈ ತಪ್ಪಬಹುದು. ಹಿಜಾಬ್ ವಿವಾದ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದಂತಹ ವಿಚಾರದಲ್ಲಿ ಅಲ್ಪಸಂಖ್ಯಾತರ ಪರವಾಗಿ ಗಟ್ಟಿ ಧ್ವನಿ ಎತ್ತಲಿಲ್ಲ. ಇದರಿಂದಾಗಿ, ಮುಸ್ಲಿಂ ಸಮುದಾಯದ ಒಲವು ಎಸ್ಡಿಪಿಐ ಹಾಗೂ ಎಐಎಂಐಎ ಪರ ವ್ಯಕ್ತವಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ.
ಈ ವರದಿಯನ್ನು ಸುನೀಲ್ ಸಭೆಯಲ್ಲಿ ಪ್ರಸ್ತಾಪಿಸಿದ್ದು ಕಾಂಗ್ರೆಸ್ ಹೈ ಕಮಾಂಡ್ ಈಗ ಮುಸ್ಲಿಂ ಮತಗಳು ಕೈತಪ್ಪಿ ಹೋಗುವ ಆತಂಕದಲ್ಲಿದೆ.