Home ಜಾಲತಾಣದಿಂದ ರೈತ ಪರ ಸರ್ಕಾರ ನೀಡಲು ನಾವು ಬದ್ಧ ಎಂದ ಡಿ.ಕೆ. ಶಿವಕುಮಾರ್

ರೈತ ಪರ ಸರ್ಕಾರ ನೀಡಲು ನಾವು ಬದ್ಧ ಎಂದ ಡಿ.ಕೆ. ಶಿವಕುಮಾರ್

► ರೈತ ಮುಖಂಡರೊಡನೆ ರಾಜಕೀಯ ಪಕ್ಷಗಳ ಮುಖಾಮುಖಿ

► ರೈತರ ಹಕ್ಕೋತ್ತಾಯಗಳನ್ನೆಲ್ಲಾ ಜಾರಿ ಮಾಡುವುದಾಗಿ ಘೋಷಿಸಿ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿನಿಧಿಗಳು

ಬೆಂಗಳೂರು: ಇಲ್ಲಿನ ಗಾಂಧಿಭವನ ಇಂದು (ಬುಧವಾರ) ಬಹಳ ವಿಶಿಷ್ಟವಾದಂತಹ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಕರ್ನಾಟಕದ ಸಮಸ್ತ ರೈತ, ಕೃಷಿ ಕೂಲಿ ಕಾರ್ಮಿಕರ ಸಂಘಟನೆಗಳ ಬಣಗಳು ಒಟ್ಟುಗೂಡಿ ರಾಜಕೀಯ ಪಕ್ಷಗಳ ಮುಂದೆ ‘ರೈತ ಪ್ರಣಾಳಿಕೆ’ಯನ್ನು ಮಂಡಿಸಿದವು.

‘ರಾಜಕೀಯ ಪಕ್ಷಗಳೊಂದಿಗೆ ರೈತ ಸಂಘಟನೆಗಳ ಮುಖಾಮುಖಿ’ ಎಂಬ ವಿನೂತನ ಕಾರ್ಯಕ್ರಮವನ್ನು ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್‌ ಅಡಿಯಲ್ಲಿ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಬಂದಂತಹ ರೈತ ಸಂಘಟನೆಗಳ ಮುಖಂಡರು ಹಾಜರಿದ್ದರು. ದೆಹಲಿ ಮತ್ತು ಕರ್ನಾಟಕದಲ್ಲಿ ನಡೆದ ರೈತಾಂದೋಲನಗಳ ಚಿತ್ರಗಳಿಂದ ಸಭಾಂಗಣ ತುಂಬಿತ್ತು. ದೆಹಲಿ, ಕರ್ನಾಟಕದಲ್ಲಿ ಮಡಿದ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು.

ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ಹನಾನ್‌ ಮುಲ್ಲಾಹ್, ಪ್ರೊ.ಯೋಗೇಂದ್ರ ಯಾದವ್, ಅವಿಕ್ ಶಾಹಾ ಮುಂತಾದವರು ಪಾಲ್ಗೊಂಡಿದ್ದರು. ರೈತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ರೈತ ಮುಖಂಡರು ತಮ್ಮ ಹದಿನೈದು ಹಕ್ಕೋತ್ತಾಯಗಳನ್ನು ಸಭೆಯ ಮುಂದಿಟ್ಟರು. 

ರೈತ ವಿರೋಧಿ ಕಾಯ್ದೆಗಳಾದ ‘ಭೂ ಸುಧಾರಣಾ ತಿದ್ದುಪಡಿ ಕಾಯ್ದೆ’, ‘ಎಪಿಎಂಸಿ ತಿದ್ದುಪಡಿ ಕಾಯ್ದೆ’ ಮತ್ತು ‘ಜಾನುವಾರು ಹತ್ಯೆ ನಿಯಂತ್ರಣ ಕಾಯ್ದೆ’ಗಳನ್ನು ರದ್ದುಪಡಿಸಬೇಕು; ವಿದ್ಯುತ್ಛಕ್ತಿಯನ್ನು ಖಾಸಗೀಕರಣಗೊಳಿಸಬಾರದು, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕಾಯ್ದೆ ಜಾರಿಗೆ ತರಬೇಕು, ರೈತರನ್ನು ಋಣಮುಕ್ತಗೊಳಿಸಬೇಕು, ಸರ್ಕಾರಿ ಭೂಮಿಗಳನ್ನು ಬಗರ್‌ಹುಕುಂ ರೈತರಿಗೆ, ವಸತಿಹೀನರಿಗೆ ವಿತರಣೆ ಮಾಡಬೇಕು ಎಂಬುದು ಪ್ರಮುಖ ಹಕ್ಕೊತ್ತಾಯಗಳಾಗಿದ್ದವು. 

ರೈತರು ಕಳುಹಿಸಿಕೊಟ್ಟಿದ್ದ ಈ ಹಕ್ಕೊತ್ತಾಯಗಳಿಗೆ ಸ್ಪಂದಿಸಿ ಮಾತನಾಡಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌, ಎಐಸಿಸಿ ಸದಸ್ಯರಾದ ರಾಜೀವ್ ಶುಕ್ಲಾ, ಕಾಂಗ್ರೆಸ್ ಪ್ರಣಾಳಿಕೆ ಸಿದ್ಧತಾ ಸಮನ್ವಯಕರಾದ ಪ್ರೊ. ರಾಧಾಕೃಷ್ಣ ಆಗಮಿಸಿದ್ದರು. ಜೆಡಿಎಸ್‌ ಪಕ್ಷದ ಪರವಾಗಿ ಎಂಎಲ್‌ಸಿ ಹಾಗೂ ಪ್ರಣಾಳಿಕೆ ಸಿದ್ಧತಾ ಸಮಿತಿಯ ಸಮನ್ವಯಕರೂ ಆಗಿರುವ ತಿಪ್ಪೇಸ್ವಾಮಿ ಆಗಮಿಸಿದ್ದರು. ಬಿಜೆಪಿ ಪಕ್ಷಕ್ಕೂ ಆಹ್ವಾನ ನೀಡಲಾಗಿತ್ತಾದರೂ ಬಿಜೆಪಿಯ ಪ್ರತಿನಿಧಿಗಳ್ಯಾರೂ ಹಾಜರಿರಲಿಲ್ಲ. ಬಿಜೆಪಿ ಹೆಸರನ್ನು ಬರೆದಿದ್ದ ಖುರ್ಚಿಯನ್ನು ಹಾಗೆಯೇ ಖಾಲಿಬಿಡಲಾಗಿತ್ತು. 

ರೈತರು ಮುಂದಿಟ್ಟ ಹದಿನೈದು ಹಕ್ಕೋತ್ತಾಯಗಳನ್ನು ಬೇಷರತ್ತಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಪ್ಪಿಕೊಂಡವು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್‌, “ನಾವು ಭಿನ್ನವಾದ ಆಡಳಿತ ನಡೆಸಲು ಬಯಸುತ್ತೇವೆ. ರೈತರ ಋಣ ನಮ್ಮ ಮೇಲಿದೆ. ಬಿಜೆಪಿ ಸರ್ಕಾರ ರೈತರನ್ನು ನಾಶಮಾಡುವಂತಹ ಕಾಯ್ದೆಗಳನ್ನು ಜಾರಿಗೆ ತಂದಿದೆ. ನಾವು ಅಧಿಕಾರಕ್ಕೆ ಬಂದರೆ, ಬಿಜೆಪಿ ಜಾರಿಗೆ ತಂದಿರುವ ಎಲ್ಲಾ ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸುತ್ತೇವೆ. ವಿದ್ಯುತ್ ಕ್ಷೇತ್ರವನ್ನು ಯಾವುದೇ ರೀತಿಯಲ್ಲೂ ಖಾಸಗೀಕರಣಗೊಳಿಸುವುದಿಲ್ಲ. ಬೆಲೆ ನಿಗದಿ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರುತ್ತೇವೆ, ಸಾಲಮನ್ನಾದ ವಿಚಾರದಲ್ಲಿ ಗರಿಷ್ಠ ಸಾಧ್ಯವಿರುವುದನ್ನು ಮಾಡುತ್ತೇವೆ” ಎಂದು ತಮ್ಮ ನಿಲುವನ್ನು ದೃಢೀಕರಿಸಿದರು.

ಜೆಡಿಎಸ್‌ನ ತಿಪ್ಪೇಸ್ವಾಮಿಯವರು ಎಲ್ಲಾ ಹಕ್ಕೋತ್ತಾಯಗಳನ್ನು ಒಪ್ಪುವುದಾಗಿ ಹೇಳಿದರೂ ರೈತ ಮುಖಂಡರು ಕೇಳಿದ ಪ್ರಶ್ನೆಯೊಂದಕ್ಕೆ ಅವರ ಬಳಿ ಉತ್ತರವಿರಲಿಲ್ಲ. “ಬಿಜೆಪಿ ಸರ್ಕಾರ ಭೂಸುಧಾರಣಾ ತಿದ್ದುಪಡಿ ಮಸೂದೆಯನ್ನು ಮುಂದಿಟ್ಟಾಗ ಮೇಲ್ಮನೆಯಲ್ಲಿ ಜೆಡಿಎಸ್‌ ಸದಸ್ಯರು ಒಪ್ಪಿಕೊಂಡಿದ್ದರಿಂದಲೇ ಮಸೂದೆ ಅಂಗೀಕಾರವಾಯಿತು. ಈ ತಪ್ಪನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಲು ಸಿದ್ಧರಿದ್ದೀರಾ? ಎಲ್ಲಾ ಕಾಯ್ದೆಗಳನ್ನು ರದ್ದುಗೊಳಿಸಲು ಸಿದ್ಧರಿದ್ದೀರಾ?” ಎಂದು ರೈತರು ಮರುಸವಾಲು ಹಾಕಿದರು. ಈ ಮಸೂದೆಯನ್ನು ಜೆಡಿಎಸ್‌ ಯಾಕೆ ಬೆಂಬಲಿಸಿತು ಎಂಬ ಉತ್ತರ ತಿಪ್ಪೇಸ್ವಾಮಿಯವರ ಬಳಿ ಇಲ್ಲವಾದರೂ, “ನಾವು ಅಧಿಕಾರಕ್ಕೆ ಬಂದರೆ ಎಲ್ಲಾ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುತ್ತೇವೆ” ಎಂಬುದನ್ನು ಒತ್ತಿ ಹೇಳಿದರು.

“ಹದಿನೈದು ಷರತ್ತುಗಳನ್ನು ಒಪ್ಪುತ್ತೇವೆ ಮತ್ತು ಅಧಿಕಾರಕ್ಕೆ ಬಂದರೆ ಅವುಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತೇವೆ” ಎಂಬುದಾಗಿ ಸಿದ್ಧಪಡಿಸಲಾಗಿದ್ದ ಪ್ರಮಾಣಪತ್ರಕ್ಕೆ ಎರಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದಲೂ ಸಹಿಯನ್ನು ಪಡೆಯಲಾಯಿತು.

ಇದಾದ ನಂತರ ರಾಜಕೀಯ ಪಕ್ಷಗಳನ್ನು ಬೀಳ್ಕೊಟ್ಟ ರೈತ ಸಮುದಾಯ, “ರೈತ ವಿರೋಧಿ ದುರಾಡಳಿತ ನೀಡಿದ ಬಿಜೆಪಿ ಪಕ್ಷವನ್ನು ಸೋಲಿಸೋಣ; ರೈತ ಪ್ರಣಾಳಿಕೆ ಒಪ್ಪಿ ಪ್ರಮಾಣ ಮಾಡಿದವರಿಗೆ ನಮ್ಮ ಮತ ಹಾಕೋಣ” ಎಂದು ಒಕ್ಕೊರಲ ತೀರ್ಮಾನ ಮಾಡಿತು. ಪ್ರತಿ ತಾಲ್ಲೂಕು, ಹಳ್ಳಿಮಟ್ಟಕ್ಕೂ ಈ ಸಂದೇಶವನ್ನು ಕೊಂಡೊಯ್ಯುವ ನಿರ್ಧಾರ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಎಚ್.ಆರ್‌.ಬಸವರಾಜಪ್ಪ ವಹಿಸಿದ್ದರು. ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಬಯ್ಯಾರೆಡ್ಡಿ, ಪ್ರಕಾಶ್ ಕಮ್ಮರಡಿ, ಸಿದ್ಗೌಡ ಮೋದಗಿ, ಡಿ.ಎಚ್.ಪೂಜಾರ್‌, ವಿ.ಗಾಯತ್ರಿ ಮುಂತಾದವರು ಪಾಲ್ಗೊಂಡಿದ್ದರು. ಮುಖಂಡರಾದ ನೂರ್‌ ಶ್ರೀಧರ್‌ ಮತ್ತು ಕವಿತಾ ಕುರುಗುಂಟಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಬಿಜೆಪಿಯನ್ನು ಸೋಲಿಸಿ, ರೈತ ಸಮುದಾಯವನ್ನು ಕಾಪಾಡುವ ಸಂಕಲ್ಪದೊಂದಿಗೆ ಸಭೆ ಮುಕ್ತಾಯಗೊಂಡಿತು.

Join Whatsapp
Exit mobile version