Home ಟಾಪ್ ಸುದ್ದಿಗಳು ಕಾರ್ಯಕಲಾಪದ ವೇಳೆ ಸಚಿವರ ಉಪಸ್ಥಿತಿ ಖಚಿತಪಡಿಸಿ: ಮುಖ್ಯಮಂತ್ರಿಗಳು ಮತ್ತು ಸಂಸದೀಯ ವ್ಯವಹಾರ ಸಚಿವರಿಗೆ ಸ್ಪೀಕರ್ ಪತ್ರ

ಕಾರ್ಯಕಲಾಪದ ವೇಳೆ ಸಚಿವರ ಉಪಸ್ಥಿತಿ ಖಚಿತಪಡಿಸಿ: ಮುಖ್ಯಮಂತ್ರಿಗಳು ಮತ್ತು ಸಂಸದೀಯ ವ್ಯವಹಾರ ಸಚಿವರಿಗೆ ಸ್ಪೀಕರ್ ಪತ್ರ

ಬೆಂಗಳೂರು: ಶಾಸನ ಸಭೆಯ ಕಲಾಪಗಳು ನಡೆಯುವಾಗ ಸಚಿವರು ಸದನದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡುವಂತೆ ಮುಖ್ಯಮಂತ್ರಿಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಏಕರೂಪದ ಆದರೆ, ಪ್ರತ್ಯೇಕ ಪತ್ರ ಬರೆದಿರುವ ಸ್ಪೀಕರ್, ತಮ್ಮ ಕ್ಷೇತ್ರಕ್ಕೆ-ಸಂಬಂಧಿತ ಕಾರ್ಯಗಳ ಕಾರಣದ ಮೇಲೆ ಕೆಲವು ಸಚಿವರು ಸದನದ ಕಲಾಪದಿಂದ ಅನುಮತಿ/ವಿನಾಯಿತಿ ಕೋರಿರುವ ಕುರಿತಂತೆ ಇಬ್ಬರೂ ನಾಯಕರ ಗಮನ ಸೆಳೆದಿದ್ದಾರೆ.


“ಸದಸ್ಯರು ಸಾರ್ವಜನಿಕ ಮಹತ್ವದ ವಿಚಾರಗಳ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಸಂಬಂಧಿತ ಸಚಿವರು ಉತ್ತರ ನೀಡಬೇಕಾಗುತ್ತದೆ, ಹೀಗಾಗಿ ಸಚಿವರು ಚರ್ಚೆಯ ವೇಳೆ ಸದನದಲ್ಲಿ ಇಲ್ಲದೇ ಇರುವುದು ಸೂಕ್ತವೂ ಅಲ್ಲ ಮತ್ತು ಅಂಗೀಕಾರಾರ್ಹವೂ ಅಲ್ಲ ಎಂದು ಕಾಗೇರಿ ತಿಳಿಸಿದ್ದಾರೆ. ಸಚಿವರ ಅನುಪಸ್ಥಿತಿ, ಆಡಳಿತ ಪಕ್ಷದಿಂದ ಉತ್ತರ ಪಡೆಯುವ ಸದಸ್ಯರ ಅವಕಾಶವನ್ನು ವಂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಸಚಿವರು ಸದನದಲ್ಲಿ ಹಾಜರಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಾವು ಮುಖ್ಯಮಂತ್ರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಬ್ಬರಿಗೂ ಆಗ್ರಹಿಸುವುದಾಗಿ” ಪತ್ರದಲ್ಲಿ ಸ್ಪೀಕರ್ ತಿಳಿಸಿದ್ದಾರೆ.


ಇದೇ ಸ್ವರೂಪದ ಪತ್ರವನ್ನು ಎಲ್ಲ ಸಚಿವರಿಗೂ ವ್ಯಕ್ತಿಗತವಾಗಿ ಕಳುಹಿಸಿರುವ ಸಭಾಧ್ಯಕ್ಷರು, ಸದನದ ಕಾರ್ಯ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮತ್ತು ತಮ್ಮ ಕ್ಷೇತ್ರಗಳ ಅಧಿಕೃತ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಸದನ ಕಲಾಪದಿಂದ ವಿನಾಯಿತಿ ಕೋರದಂತೆ ತಿಳಿಸಿದ್ದಾರೆ.
ಅದೇ ರೀತಿ ಚರ್ಚೆಯ ವೇಳೆ ಅಧಿಕಾರಿಗಳು ಸಹ ಸದನದಲ್ಲಿ ಉಪಸ್ಥಿತರಿರುವಂತೆ ಸೂಚಿಸಲು ಮುಖ್ಯಕಾರ್ಯದರ್ಶಿಗಳಿಗೆ ಸ್ಪೀಕರ್ ನಿರ್ದೇಶಿಸಿದ್ದಾರೆ.

Join Whatsapp
Exit mobile version