Home ಕರಾವಳಿ ಜೈಲು ಸೇರಿದ್ದ ಆರೋಪಿಯ ಸ್ಥಿತಿ ಗಂಭೀರ: ಮೂಡಬಿದಿರೆ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ

ಜೈಲು ಸೇರಿದ್ದ ಆರೋಪಿಯ ಸ್ಥಿತಿ ಗಂಭೀರ: ಮೂಡಬಿದಿರೆ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ

ಮಂಗಳೂರು: ಜೈಲು ಸೇರಿದ್ದ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮೂಡಬಿದಿರೆಯ ತೋಡಾರಿನ ಮುಹಮ್ಮದ್ ಫೈಝಲ್ (33) ಎಂಬಾತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಫೈಝಲ್ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರಿಂದ ಆತನ ಕಿಡ್ನಿಗೆ ಹಾನಿಯಾಗಿ ಆರೋಗ್ಯ ಹದಗೆಟ್ಟಿದೆ ಎಂದು ಫೈಝಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಫೈಝಲ್ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಫೈಝಲ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೋರ್ಟ್ ವಾರಂಟ್ ಹಿನ್ನೆಲೆಯಲ್ಲಿ ಇದೇ ತಿಂಗಳ 12 ತಾರೀಖಿನಂದು ಮೂಡಬಿದಿರೆ ಪೊಲೀಸರು ಮನೆಗೆ ದಾಳಿ ಮಾಡಿ ಮನೆಯಿಂದಲೇ ಬಂಧಿಸಿದ್ದರು. ಆಗಸ್ಟ್ 13ರಂದು ಕೋರ್ಟ್ ಗೆ ಹಾಜರುಪಡಿಸಿದ್ದರು. ಬಳಿಕ ಜೈಲು ಸೇರಿದ್ದ ಫೈಝಲ್, ಆಗಸ್ಟ್  14 ಮತ್ತು 15ರಂದು ಜೈಲಿನಲ್ಲಿ ಸತತವಾಗಿ ವಾಂತಿ ಮಾಡಿದ್ದರಿಂದ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆತಂದು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಫೈಝಲ್ ಕುಟುಂಬಸ್ಥರು ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ, ಪೊಲೀಸರು ತನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವುದಾಗಿ ಫೈಝಲ್ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಪ್ರಸ್ತುತ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

 ಆಗಸ್ಟ್ 12ರಂದು ಮನೆಯಿಂದ ಬಂಧಿಸಿ ಕರೆದುಕೊಂಡು ಹೋಗಿದ್ದ ಪೊಲೀಸರು ಗೌಪ್ಯ ಸ್ಥಳದಲ್ಲಿ ಹಲ್ಲೆ ನಡೆಸಿ, ರಾಡ್ ನಿಂದ ಹೊಡೆದು, ಬೂಟುಗಾಲಿನಲ್ಲಿ ಒದ್ದಿದ್ದಾರೆ ಎಂದು ಫೈಝಲ್ ತಿಳಿಸಿರುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. 

ವೆನ್ಲಾಕ್ ಆಸ್ಪತ್ರೆಯ ಐಸಿಯುವಿನಲ್ಲಿ ಒಂದು ವಾರಗಳ ಕಾಲ ಚಿಕಿತ್ಸೆ ನೀಡಿದ್ದರೂ ಫೈಝಲ್ ಆರೋಗ್ಯ ಸುಧಾರಿಸಿರಲಿಲ್ಲ. ಫೈಝಲ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಕುಟುಂಬಸ್ಥರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಮಾನ್ಯ ಮಾಡಿದ ನ್ಯಾಯಾಧೀಶರು, ಆರೋಪಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಅನುಮತಿ ನೀಡಿದ್ದರು.

ಅದರಂತೆ ಫೈಝಲ್ ಅವರನ್ನು ವೆನ್ಲಾಕ್ ಆಸ್ಪತ್ರೆಯಿಂದ ಯೆನಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಮಧ್ಯೆ ಫೈಝಲ್ ಆರೋಗ್ಯ ಸ್ಥಿತಿ ಬಗ್ಗೆ ಆಸ್ಪತ್ರೆಯವರು ಮತ್ತು ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ ಎಂದು ಫೈಝಲ್ ಕುಟುಂಬಸ್ಥರು ಆರೋಪಿಸಿದ್ದಾರೆ.

 ಯೆನಪೋಯ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಆಗಸ್ಟ್ 22ರ ಸೋಮವಾರ ಫೈಝಲ್ ಅವರನ್ನು ಮತ್ತೆ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಿ, ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಗಸ್ಟ್ 24ರ ಬುಧವಾರ ಫೈಝಲ್ ಕುಟುಂಬಸ್ಥರು ಊಟ ತೆಗೆದುಕೊಂಡು ಆಸ್ಪತ್ರೆಗೆ ಹೋದಾಗ ಫೈಝಲ್ ಜನರಲ್ ವಾರ್ಡ್ ನಲ್ಲಿ ಇರಲಿಲ್ಲ. ಆತನನ್ನು ಮತ್ತೆ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

 “ಜನರಲ್ ವಾರ್ಡ್ ನಲ್ಲಿದ್ದ ಫೈಝಲ್ ಏನೋ ಮಾಡಿಕೊಂಡಿದ್ದರಿಂದ ಆರೋಗ್ಯ ಹದಗೆಟ್ಟಿದೆ” ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಆದರೆ ಏನು ಮಾಡಿಕೊಂಡಿದ್ದಾನೆ ಎಂಬ ಬಗ್ಗೆ ಆಸ್ಪತ್ರೆಯವರು ಮಾಹಿತಿ ನೀಡುತ್ತಿಲ್ಲ, ಆತನ ಭೇಟಿಗೂ ಅವಕಾಶ ನೀಡುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಫೈಝಲ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ಈ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

Join Whatsapp
Exit mobile version