ಹೊಸದಿಲ್ಲಿ: ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಬರಹಗಳನ್ನು ತಡೆಹಿಡಿದರೆ ಅದನ್ನು ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರಕ್ಕೂ ತಿಳಿಸಲು ಅವಕಾಶ ಲಭ್ಯವಾಗಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ನಿಗದಿತ ಜಾಲತಾಣದ ಕುಂದು ಕೊರತೆ ನಿವಾರಿಸುವ ಅಧಿಕಾರಿಗೆ ಅದರಲ್ಲಿ ಪೋಸ್ಟ್ ಮಾಡಿರುವ ಅಂಶದ ಬಗ್ಗೆ ದೂರು ಸಲ್ಲಿಕೆ ಮಾಡಿದರೂ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವ ಪ್ರಯತ್ನಗಳೂ ನಡೆಯುತ್ತಿರಲಿಲ್ಲ. ಈಗ ಅದನ್ನು ಕಡ್ಡಾಯವಾಗಿ ಕೈಗೆತ್ತಿಕೊಂಡು ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಜಾಲತಾಣಗಳು ಸ್ವಯಂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ ಈಗಲೂ ಪ್ರತಿಪಾದಿಸುತ್ತಿದೆ. ಅದರ ಜೊತೆಗೆ ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದುಹೇಳಿದರು.
ಮುಂದಿನ ತಿಂಗಳ ಒಳಗಾಗಿ ಸಂಬಂಧಪಟ್ಟ ಎಲ್ಲರ ಸಲಹೆ ಪಡೆದುಕೊಂಡು ಹೊಸ ನಿಯಮಗಳನ್ನು ಅಂತಿಮಗೊಳಿಸಲಾಗುತ್ತದೆ. ವ್ಯವಸ್ಥೆ ಉತ್ತಮ ಪಡಿಸಲು ಸಾಮಾಜಿಕ ಜಾಲತಾಣ ಕಂಪನಿಗಳು ನೀಡುವ ಸಲಹೆ ಸ್ವೀಕರಿಸಲು ಕೇಂದ್ರ ಸರಕಾರ ಸಿದ್ಧವಿದೆ. ಸದ್ಯ ಜಾಲತಾಣಗಳು ಹೊಂದಿರುವ ನಿಯಮ ಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಸಚಿವರು ಹೇಳಿದರು.
ಕೇಂದ್ರ ಸರಕಾರ ಪ್ರಕಟಿಸಿರುವ ಪರಿಷ್ಕೃತ ಮಾಹಿತಿ ತಂತ್ರಜ್ಞಾನ ನಿಯಮಗಳಲ್ಲಿ ಈ ಅಂಶವನ್ನು ಪ್ರಧಾನವಾಗಿ ಪ್ರಸ್ತಾಪಿಸಲಾಗಿದ್ದು, ಈ ಮೇಲ್ಮನವಿ ಪ್ರಾಧಿಕಾರ 30 ದಿನಗಳಲ್ಲಿ ನಿಗದಿತ ಪ್ರಕರಣವನ್ನು ಇತ್ಯರ್ಥ ಗೊಳಿಸಬೇಕು ಎಂದು ತಿಳಿಸಲಾಗಿದೆ. ಈ ನಿರ್ಧಾರ ಇತರ ಸಾಮಾಜಿಕ ಜಾಲತಾಣಗಳಿಗೂ ಕೂಡ ಅನ್ವಯವಾಗಬೇಕು ಎಂದು ಸೂಚಿಸಲಾಗಿದೆ. ಕೇಂದ್ರ ಸರಕಾರ ಜಾರಿಗೊಳಿಸಿರುವ ಹೊಸ ನಿಯಮಗಳಿಗೆ ಸಾರ್ವಜನಿಕರು 30 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.