Home ಟಾಪ್ ಸುದ್ದಿಗಳು “ಸಿದ್ದು ನಿಜ ಕನಸುಗಳು’ ಕೃತಿ ಬಿಡುಗಡೆ ಕಾರ್ಯಕ್ರಮದ ಆಯೋಜಕರ ವಿರುದ್ಧ ದೂರು

“ಸಿದ್ದು ನಿಜ ಕನಸುಗಳು’ ಕೃತಿ ಬಿಡುಗಡೆ ಕಾರ್ಯಕ್ರಮದ ಆಯೋಜಕರ ವಿರುದ್ಧ ದೂರು

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕುರಿತಾಗಿ “ಸಿದ್ದು ನಿಜ ಕನಸುಗಳು” ಪುಸ್ತಕ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಯೋಜಕರ ವಿರುದ್ಧ ಕಾಂಗ್ರೆಸ್ ವಕ್ತಾರ ಹಾಗೂ ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಎಲ್ ಅವರು ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಅಡ್ದಂಡ ಕಾರ್ಯಪ್ಪ ಬರೆದಿರುವ ಟಿಪ್ಪು ನಿಜ ಕನಸುಗಳ ಮಾದರಿಯಲ್ಲೇ ಸಿದ್ದು ನಿಜ ಕನಸುಗಳು ಪುಸ್ತಕದ ಮುಖಪುಟ ವಿನ್ಯಾಸ ಮಾಡಲಾಗಿದ್ದು, ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನವಾಗಿ ಈ ಕೃತಿ ಹೊರತರಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಸಚಿವ ಡಾ. ಅಶ್ವತ್ಥ ನಾರಾಯಣ ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.


ಪುಸ್ತಕದ ಮುಖಪುಟದಲ್ಲಿ ಸಿದ್ದರಾಮಯ್ಯ ಅವರ ವಿರೂಪಗೊಳಿಸಿದ ಭಾವಚಿತ್ರವನ್ನು ಬಳಸಲಾಗಿದೆ ಹಾಗೂ ಅವಹೇಳನಕಾರಿಯಾಗಿ ಕಪೋಲಕಲ್ಪಿತ ಹಾಗೂ ಪ್ರಚೋದನಾಕಾರಿ ಲೇಖನಗಳನ್ನು ಒಳಗೊಂಡಿದೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.

Join Whatsapp
Exit mobile version