ಮಂಗಳೂರು: ಹಿಜಾಬ್ ತೀರ್ಪಿನ ವಿರುದ್ಧವಾಗಿ ಸ್ವಯಂಪ್ರೇರಿತ ಬಂದ್ ನಡೆಸಿದ್ದಕ್ಕಾಗಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಾಯಿತು ಅನ್ನೋದು ಸಂಪೂರ್ಣ ಸುಳ್ಳು ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇಂಧನ, ರಸಗೊಬ್ಬರ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದನ್ನು ಮರೆಮಾಚಲು ಬಿಜೆಪಿ ದ್ವೇಷ ರಾಜಕಾರಣಕ್ಕೆ ಇಳಿದಿದೆ. ಕೋಮುದ್ವೇಷದ ವಾತಾವರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅತಿರೇಕಕ್ಕೆ ತಲುಪಿದೆ. ಬುದ್ಧಿವಂತರ ಜಿಲ್ಲೆಯನ್ನು ಕೋಮುವಾದದ ಪ್ರಯೋಗಾಲಯ ಮಾಡಲಾಗುತ್ತಿದೆ ಎಂದರು.
ದೇವಸ್ಥಾನದ ಕಾರ್ಯಕ್ರಮಗಳನ್ನೂ ಕೋಮುವಾದಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ, ಅಲ್ಲೂ ತನ್ನ ರಾಜಕೀಯ ಮಾಡುತ್ತಿದೆ. ಹಲಾಲ್ ಬಹಿಷ್ಕಾರದ ಮೂಲಕ ಕೋಮು ಧ್ರುವೀಕರಣ ನಡೆಸಿ, ದೇಶದಲ್ಲಿ ಜನಾಂಗೀಯ ದ್ವೇಷಕ್ಕೆ ಇದು ಕಾರಣವಾಗಲಿದೆ. ಹೀಗಾಗಿ ತಕ್ಷಣವೇ ಬಿಜೆಪಿ ದ್ವೇಷ ರಾಜಕಾರಣ ಕೈಬಿಡಬೇಕೆಂದು ರೈ ಆಗ್ರಹಿಸಿದರು.
ಜಿಲ್ಲೆಯಲ್ಲಿ ನಡೆದ ಕೋಮು ಆಧರಿತ ಹತ್ಯೆಯಲ್ಲಿ ಯಾವೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಲ್ಲ. ಬದಲಿಗೆ ಎರಡು ಮತೀಯ ಸಂಘಟನೆಗಳ ಹೆಸರುಗಳಷ್ಟೇ ಇವೆ. ಕೆಲವರು ಆ್ಯಕ್ಷನ್ ಗೆ ರಿಯಾಕ್ಷನ್ ಬಗ್ಗೆ ಮಾತಾಡುತ್ತಾರೆ. ಆದರೆ ಕಾಂಗ್ರೆಸ್ ಅಂತಹ ರಾಜಕಾರಣದ ಮೇಲೆ ನಂಬಿಕೆಯಿರಿಸಿಲ್ಲ ಎಂದರು.
ಜಾತ್ರೆಯಲ್ಲಿ ಮುಸ್ಲಿಮ್ ಸಂತೆ ವ್ಯಾಪಾರಿಗಳಿಗೆ ನಿರ್ಬಂಧ, ಮೀನು ಮಾರಾಟಗಾರರಿಗೆ ನಿರ್ಬಂಧ ಇಂದು ನಿನ್ನೆ ಆರಂಭವಾದದ್ದಲ್ಲ, ಕಳೆದ ಮೂರ್ನಾಲ್ಕು ವರುಷಗಳಿಂದ ನಡೆದುಕೊಂಡು ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾಡಳಿತವು ತಕ್ಷಣವೇ ಜಿಲ್ಲೆಯ ಪ್ರಜ್ಞಾವಂತರನ್ನು ಕರೆಸಿ ಶಾಂತಿ ಸಭೆ ನಡೆಸುವ ಮೂಲಕ ಮುಂದಾಗುವ ಅನಾಹುತ ತಪ್ಪಿಸಬೇಕು. ಕಾಂಗ್ರೆಸ್ ಪಕ್ಷವೂ ಕೂಡಾ ಮುಂದಿನ ದಿನಗಳಲ್ಲಿ ಜಿಲ್ಲೆಯ ಸಾಮರಸ್ಯಕ್ಕಾಗಿ ದಲಿತ, ಎಡಪಂಥೀಯ ಸಂಘಟನೆಗಳ ಜೊತೆ ಸೇರಿ ಕಾರ್ಯಕ್ರಮ ನಡೆಸಲಿದೆ ಎಂದರು.