ಕಲಬುರಗಿ: ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಲಾಡ್ಲೆ ಮಶಾಕ್ ದರ್ಗಾದ ಸಮೀಪ ಸಮಸ್ಯೆ ಸೃಷ್ಟಿಸುವ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ನೆರೆದಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ 19 ಮಂದಿಗೆ ಕಲಬುರ್ಗಿ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆಳಂದ ಅಲೀಂ ಸೇರಿದಂತೆ 10 ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಗದೀಶ್ ವಿ ಎನ್ ಅವರು ಪುರಸ್ಕರಿಸಿದ್ದಾರೆ.
ತನಿಖಾಧಿಕಾರಿಯ ಮುಂದೆ 15 ದಿನಗಳ ಒಳಗೆ ಹಾಜರಾಗಬೇಕು ಮತ್ತು 1 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಒಂದು ಭದ್ರತೆ ನೀಡಬೇಕು. ಪ್ರಾಸಿಕ್ಯೂಷನ್ ಸಾಕ್ಷಿಯನ್ನು ತಿರುಚಬಾರದು, ನಿರಂತರವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು. ಇಂಥ ಕೃತ್ಯದಲ್ಲಿ ಭಾಗಿಯಾಗಬಾರದು. ತನಿಖಾಧಿಕಾರಿಗೆ ತನಿಖೆ ನಡೆಸಲು ಸಹಕರಿಸಬೇಕು ಎಂಬ ಷರತ್ತುಗಳನ್ನು ಪೀಠವು ವಿಧಿಸಿದ್ದು, ಅಲೀಂ, ಮೌಲಾ ಸಾಬ್ ನಿರಗುಡಿ, ನಿಜಾಮ್ ಅಲಿ, ಮಶಾಕ್, ಆಯೂಬ್, ಲಾಡ್ಲೆ ಸಾಬ್, ಸಲಾಮ್, ಅಸ್ಲಾಮ್, ರುಕುಮ್ ಮದರ್, ಮೆಹೆಬೂಬ್, ಅಬ್ದುಲ್ ಅಲಿ, ಉಸ್ಮಾನ್, ಖಾಸೀಮ್, ಮೈನು, ಮಸ್ತಾನ್, ಅಬ್ದುಲ್ ಸಲಾಮ್, ಖಾಸಿಮ್, ರುಕ್‌ಮುದ್ದಿನ್ ಮತ್ತು ಮಶಾಕ್ ಅನ್ಸಾರ್ ಅವರಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.