Home ಟಾಪ್ ಸುದ್ದಿಗಳು ಮಧ್ಯಪ್ರದೇಶದ ಖಾಂಡ್ವಾದಲ್ಲಿ ಕೋಮು ಉದ್ವಿಗ್ನತೆ; 144 ಸೆಕ್ಷನ್ ಜಾರಿ

ಮಧ್ಯಪ್ರದೇಶದ ಖಾಂಡ್ವಾದಲ್ಲಿ ಕೋಮು ಉದ್ವಿಗ್ನತೆ; 144 ಸೆಕ್ಷನ್ ಜಾರಿ

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್’ನಿಂದ 260 ಕಿಲೋಮೀಟರ್ ದೂರದ ಖಾಂಡ್ವಾದಲ್ಲಿ ಕೋಮು ಉದ್ವಿಗ್ನತೆ ಹೊಗೆಯಾಡಿದ ಪರಿಣಾಮವಾಗಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.


ಭಾನುವಾರ ತಡರಾತ್ರಿ ಮುಸ್ಲಿಂ ಮತ್ತು ಹಿಂದೂ ವಿದ್ಯಾರ್ಥಿಗಳಿದ್ದ ಒಂದು ಗುಂಪು ಹೋಟೆಲಿನಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದುದನ್ನು ವಿರೋಧಿಸಿ ಕೆಲವು ಮುಸ್ಲಿಮರು ಅಲ್ಲಿಗೆ ಹೋಗಿ ಕೆಲವರಿಗೆ ಥಳಿಸಿದ್ದಾರೆ. ಇದು ಕೋಮು ಉದ್ವಿಗ್ನತೆಗೆ ದಾರಿ ಮಾಡಿತು ಎಂದು ಪೊಲೀಸರು ಹೇಳಿದ್ದಾರೆ.


ಖಾಂಡ್ವಾ ಜಿಲ್ಲಾಡಳಿತವು ಕೂಡಲೇ 144 ನಿಷೇಧಾಜ್ಞೆ ಜಾರಿಗೊಳಿಸಿದ್ದು, ಹೆಚ್ಚಿನ ಪೊಲೀಸ್ ಪಡೆಯನ್ನು ಅಲ್ಲಿ ನಿಯೋಜಿಸಿದೆ. “ಈಗ ಪರಿಸ್ಥಿತಿ ಹತೋಟಿಯಲ್ಲಿದೆ. ಪೊಲೀಸ್ ಮಾರ್ಚಿಂಗ್ ನಡೆಸಿದ್ದಾರೆ.” ಎಂದು ಖಾಂಡ್ವಾ ಎಸ್ ಪಿ ಸತೇಂದ್ರ ಶುಕ್ಲಾ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಹೋಟೆಲ್’ನಲ್ಲಿ ಜನ್ಮ ದಿನ ಆಚರಿಸುತ್ತಿದ್ದ ವೇಳೆ ಮುಸ್ಲಿಂ ಯುವಕರು ಒಬ್ಬ ಮುಸ್ಲಿಂ ಯುವತಿ, ಶಾಲೆಯ ಪ್ರಯೋಗಶಾಲೆಯ ಟೀಚರ್ ಮತ್ತು ಹಿಂದೂ ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ್ದಾರೆ. ಆರೋಪಿಗಳು ಟೀಚರ್ ಮತ್ತು ಹಿಂದೂ ವಿದ್ಯಾರ್ಥಿಯನ್ನು ತಮ್ಮ ಜೊತೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಕೋಮು ಉದ್ವಿಗ್ನತೆ ಹೆಚ್ಚಿದಂತೆ ಮಧ್ಯ ರಾತ್ರಿಯ ವೇಳೆ ಕಾರ್ಪೊರೇಟರ್ ಅಶ್ಪಾಕ್ ಸಿಗದ್ ಅವರು ದೊಡ್ಡ ಸಂಖ್ಯೆಯ ಬೆಂಬಲಿಗರೊಡನೆ ಲಾಲ್ ಚೌಕ್ ಪೊಲೀಸ್ ಠಾಣೆಗೆ ಹೋಗಿ ಪೋಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.
ಹುಡುಗಿಯು ನನ್ನನ್ನು ಅಪಹರಿಸಿ, ಥಳಿಸಲಾಗಿದೆ ಎಂದು ದೂರು ಕೊಟ್ಟಿರುವುದರಿಂದ ಅದರ ಆಧಾರದ ಮೇಲೆ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ; ಇಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸೋಮವಾರ ಸಂಘಪರಿವಾರ ಸಂಘಟನೆಗಳು ಇಲ್ಲಿ ಪ್ರತಿಭಟನಾ ಮೆರವಣಿಗೆ ಒಂದನ್ನು ನಡೆಸಿದವು. ಇದಾಗುತ್ತಲೇ ಜಿಲ್ಲಾಡಳಿತವು 144 ಸೆಕ್ಷನ್ ಜಾರಿಗೊಳಿಸಿತು. ಮಧ್ಯ ಪ್ರದೇಶದ ಖರ್ಗೋನ್ ನಲ್ಲಿ ಕಳೆದ ವರ್ಷ ಏಪ್ರಿಲ್ 10ರಲ್ಲಿ ಭಾರೀ ಕೋಮು ಗಲಭೆ ಆಗಿತ್ತು. ಈ ವರ್ಷ ಅದರ ಬೀಜ ಖಾಂಡ್ವಾದಲ್ಲಿ ಬಿದ್ದಿದೆ ಅಷ್ಟೆ.

Join Whatsapp
Exit mobile version