ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳಿಗೆ ನ್ಯಾಯ ಒದಗಿಸಿ ಕೊಡುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಜಲಜೀವನ್ ಮಿಷನ್ ಅನುಷ್ಠಾನ ಕುರಿತ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದ ನೀರಾವರಿ ಯೋಜನೆಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ದೆಹಲಿಯಲ್ಲಿ ವಿಶೇಷ ಸಭೆ ನಡೆಸಲಾಗುವುದು ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ರಾಜ್ಯದ ಎಲ್ಲ ಗ್ರಾಮೀಣ ಕುಟುಂಬಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯನ್ನು ಸಾಕಾರಗೊಳಿಸಲಾಗುವುದು. ಈ ವರ್ಷ 25 ಲಕ್ಷ ಮನೆಗಳಿಗೆ ಶುದ್ಧ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಅಗತ್ಯ ಹಣಕಾಸು ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಕೃಷ್ಣಾ ನ್ಯಾಯಾಧೀಕರಣ, ಮೇಕೆದಾಟು, ಎತ್ತಿನಹೊಳೆ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ವಿವರವಾಗಿ ಚರ್ಚಿಸಲಾಗಿದೆ. ರಾಜ್ಯದ ಮನವಿಗೆ ಕೇಂದ್ರ ಸಚಿವರಿಂದ ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿವೆ ಎಂದು ಅವರು ಹೇಳಿದರು. ರಾಯಚೂರು ಜಿಲ್ಲೆಗೆ ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬಹುಗ್ರಾಮ ಯೋಜನೆ ರೂಪಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ನೀಡಲಾಗಿದೆ. ಶೀಘ್ರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯಲ್ಲೂ ಬಹುಗ್ರಾಮ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಿರು ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಉಪಸ್ಥಿತರಿದ್ದರು.