Home ಟಾಪ್ ಸುದ್ದಿಗಳು ಮಲೆಮಹಾದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

ಮಲೆಮಹಾದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ದಕ್ಷಿಣ ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹಾದೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ದವಾಗಿರುವುದಾಗಿ ಮಲೆ ಮಹಾದೇಶ್ಬರ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.


ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮಲೆ ಮಹಾದೇಶ್ವರ ದಕ್ಷಿಣ ಕರ್ನಾಟಕದ ಪ್ರಸಿದ್ಧ ಕ್ಷೇತ್ರ, ಹಳೆ ಮೈಸೂರು ಭಾಗದ ಜನರು ಹೆಚ್ಚಾಗಿ ನಡೆದುಕೊಳ್ಳುವ ದೇವಸ್ಥಾನ. ಈ ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆ ದೊಡ್ಡದಿದೆ ಎಂದು ಹೇಳಿದರು.
ಹಿಂದೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಹಾಗೂ ಸುರೇಶ್ ಕುಮಾರ್ ಅವರು ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಮಲೆಮಹಾದೇಶ್ವರ ಬೆಟ್ಟದ ಅಭಿವೃದ್ಧಿಗೆ ಈಗಾಗಲೇ ಪ್ರಾಧಿಕಾರ ಯೋಜನೆ ರೂಪಿಸಿರುವುದನ್ನು ಜಾರಿಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಂದಿನ ಐದು ವರ್ಷದಲ್ಲಿ ಮಲೆ ಮಹಾದೇಶ್ವರ ಕ್ಷೇತ್ರ ಸಂಪೂರ್ಣ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಲೆ ಮಹಾದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಮುಜರಾಯಿ,ವಕ್ಫ್, ಮತ್ತು ಹಜ್ ಸಚಿವರಾದ ಶಶಿಕಲಾ ಜೊಲ್ಲೆಯವರು, ಮಲೆ ಮಹಾದೇಶ್ವರ ಬೆಟ್ಟಕ್ಕೆ ತನ್ನದೇ ಆದ ಭವ್ಯ ಪರಂಪರೆ ಹಾಗೂ ಇತಿಹಾಸವಿದೆ. ಮಲೆ ಮಹಾದೇಶ್ವರರ ಬಗೆಗೆ ಇರುವ ಜಾನಪದ ಕಾವ್ಯಗಳು ನೂರಾರು, ಮಲೆ ಮಾದಪ್ಪನ ಕಂಡರೆ ಭಕ್ತರಿಗೆ ಸಾಕಷ್ಟು ಭಯ,ಭಕ್ತಿ ಇದೆ. ಹರಕೆ ಹೊತ್ತ ಮಂದಿ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬಂದು ತಮ್ಮ ಹರಕೆ ಪೂರೈಸಿಕೊಳ್ಳುವ ಪದ್ದತಿ ನೂರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಬೆಟ್ಟದಲ್ಲಿ ಪ್ರಾಧಿಕಾರ ರಚಿಸಿ, ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಬಹಳಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಎಲ್ಲ ರೀತಿಯ ನೆರವು, ಸಹಕಾರ ನೀಡಲು ಸದಾ ಸಿದ್ದವಿದೆ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಮಲೆ ಮಹಾದೇಶ್ವರ ಬೆಟ್ಟದಲ್ಲಿ 20 ಎಕರೆ ಪ್ರದೇಶದಲ್ಲಿ ನೂರಡಿ ಎತ್ತರದ ಮಾದಪ್ಪನ ಪ್ರತಿಮೆ ನಿರ್ಮಾಣ ಕಾಮಗಾರಿ ಪ್ರಗತಿ ಕುರಿತು ಚರ್ಚಿಸಲಾಯಿತು.
ಮಲೆ ಮಹಾದೇಶ್ವರ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಯೋಜನೆ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಇದೇ ವೇಳೆ ನಾಡಿನ ವಿಜಯ ಕರ್ನಾಟಕ ದಿನ ಪತ್ರಿಕೆ ಹೊರ ತಂದಿದ್ದ ಮಾದಪ್ಪನ ಲೀಲೆಗಳನ್ನು ಸಾರುವ ಉಘೆ ಮಾದಪ್ಪ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಸುನಿಲ್ ಕುಮಾರ್ ಶಾಸಕರಾದ ಎನ್.ಮಹೇಶ್, ಪುಟ್ಟರಂಗ ಶೆಟ್ಟಿ, ನರೇಂದ್ರ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್, ಮಲೆ ಮಹಾದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಉಪಸ್ಥಿತರಿದ್ದರು.

Join Whatsapp
Exit mobile version