ಮಂಗಳೂರು: ಹಿಜಾಬ್ ನಿರಾಕರಣೆಯ ತೀರ್ಪಿನ ಕುರಿತು ನೀಡಲಾಗಿರುವ ಕರ್ನಾಟಕ ಬಂದ್ ಗೆ ಹಲವೆಡೆ ಬಹುತೇಕ ಬೆಂಬಲ ವ್ಯಕ್ತವಾಗಿದ್ದು, ಮಂಗಳೂರಿನಲ್ಲೂ ಉತ್ತಮ ಸ್ಪಂದನೆ ದೊರಕಿದೆ. ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಂಗಳೂರು ನಗರದಲ್ಲಿ ಬಲವಂತದ ಬಂದ್ ನಡೆದಿಲ್ಲ, ಸ್ವಯಂಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಕುರಿತಾಗಿ ವಿವಿಧ ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಬಂದ್ ಬಗ್ಗೆ ಗಮನಿಸಿದ್ದು, ಇಂದು ಬೆಳಗ್ಗೆ ನಾಲ್ಕು ಘಂಟೆಗಳಿಂದ ಸಿಬ್ಬಂದಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಲ್ಲಿಯೂ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟು, ವಾಹನ ಸಂಚಾರ, ವ್ಯಾಪಾರ ವಹಿವಾಟು, ಶಾಲಾ ಕಾಲೆಜುಗಳನ್ನು ಬಂದ್ ಮಾಡಲಾಗಿಲ್ಲ, ಎಲ್ಲರೂ ಸ್ವಯಂಪ್ರೇರಿತವಾಗಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ನಗರದ ಸ್ಥಳೀಯ ಖಾಸಗಿ ವಾಹನಗಳ, ಸ್ಥಳೀಯ ಬಸ್ ಗಳ ಓಡಾಟಗಳಲ್ಲೂ ವ್ಯತ್ಯಯ ಉಂಟಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.