ಬೆಂಗಳೂರು: ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ಕಾಲೇಜಿನ ವಿದ್ಯಾರ್ಥಿಯೊಬ್ಬನ ಮೃತದೇಹ ಬನ್ನೇರುಘಟ್ಟ ಸಮೀಪದ ಎಎಂಸಿಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಪತ್ತೆಯಾಗಿದೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಪದಿನಿ ಜರಿಯಾ ಗ್ರಾಮದ ನಿತಿ ನ್ (19) ಮೃತ ದುರ್ದೈವಿಯಾಗಿದ್ದಾನೆ. ಡಿ.1ರಂದು ಈತ ಎಎಂಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್) ಕೋರ್ಸಿಗೆ ತನ್ನ ಸಹೋದರನ ಜತೆ ಬಂದು ಅಡ್ಮಿಶನ್ ಪಡೆದಿದ್ದ. ದುಬೈನಲ್ಲಿ ವಾಸವಿರುವ ತಂದೆ-ತಾಯಿಗೆ ಪದೇಪದೆ ಫೋನ್ ಮಾಡಿ ತನನ್ನು ನೋಡಲು ಬರುವಂತೆ ಮನವಿ ಮಾಡುತ್ತಿದ್ದ. ಅಲ್ಲದೆ ಕಾಲ್ ಮಾಡಿ ಜಗಳವನ್ನೂ ಮಾಡಿದ್ದ ಎಂದು ತಿಳಿದು ಬಂದಿದೆ. ತನ್ನಿಂದ ಅಪ್ಪ-ಅಮ್ಮ ದೂರವಿದ್ದಾರೆ ಎಂದು ಮನನೊಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಾಲೇಜಿನ ಕ್ಯಾಂಪಸ್ ಒಳಗಿನ ಹಾಸ್ಟೆಲ್ ನಲ್ಲಿ ಸಹಪಾಠಿಯೊಬ್ಬರನ ಜತೆ ರೂಂನಲ್ಲಿ ವಾಸವಿದ್ದ ನಿತಿನ್, ಬುಧವಾರ ಮಧ್ಯಾಹ್ನ ಹಾಸ್ಟೆಲ್ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಹಾಸ್ಟೆಲ್ ನ ಸಹಪಾಠಿ ಬಂದು ಬಾಗಿಲು ಬಡಿದರೂ ನಿತಿನ್ ತೆರೆದಿರಲಿಲ್ಲ. ಈ ಬಗ್ಗೆ ಸಹಪಾಠಿ ಹಾಸ್ಟೆಲ್ ವಾರ್ಡನ್ ಗೆ ತಿಳಿಸಿದ್ದ. ವಾರ್ಡನ್ ಹಾಗೂ ಸಿಬ್ಬಂದಿ ಬಂದು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಕತ್ತು ಕೊಯ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.