ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲವೆಂದು 36 ನರ್ಸಿಂಗ್ ವಿದ್ಯಾರ್ಥಿಗಳ ವಿರುದ್ಧ ಕಾಲೇಜು ಆಡಳಿತ ಮಂಡಳಿ ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿದೆ.
ಚಂಡೀಗಢದ PGIMER ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್ ವಿದ್ಯಾರ್ಥಿಗಳ ವಿರುದ್ಧ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮನ್ ಕಿ ಬಾತ್‌ನಲ್ಲಿ ಭಾಗವಹಿಸದ ವಿದ್ಯಾರ್ಥಿಗಳನ್ನು ಒಂದು ವಾರಗಳ ಕಾಲ ಹಾಸ್ಟೆಲ್‌ನಿಂದ ಹೊರಗೆ ಹೋಗುವುದನ್ನು ನಿಷೇಧಿಸಲಾಗಿದೆ.
ಮನ್ ಕಿ ಬಾತ್ ನ 100ನೇ ಸಂಚಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರಲಿಲ್ಲ. PGIMER ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಎಜುಕೇಶನ್ ಮೊದಲ ಮತ್ತು ಮೂರನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಲು ಸೂಚನೆ ನೀಡಲಾಗಿತ್ತು. ಆದರೆ 36 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ನಂತರ ಸಂಸ್ಥೆಯ ಪ್ರಿನ್ಸಿಪಲ್ ಡಾ. ಸುಖಪಾಲ್ ಕೌರ್ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಗೆ ಹೋಗದಂತೆ ನಿಷೇಧಿಸಿ ಪತ್ರವನ್ನು ಹೊರಡಿಸಿದ್ದಾರೆ. 28 ಪ್ರಥಮ ವರ್ಷದ ವಿದ್ಯಾರ್ಥಿಗಳು ಮತ್ತು ಎಂಟು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ನಿಷೇಧ ಹೇರಲಾಗಿದೆ.
ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಸಮಜಾಯಿಷಿ ನೀಡಿದ್ದು, ಶಿಸ್ತು ಕಾಯ್ದುಕೊಳ್ಳುವ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ವಿದ್ಯಾರ್ಥಿಗಳು ಇಲಾಖೆ ಆಯೋಜಿಸುವ ವಿವಿಧ ಅತಿಥಿ ಉಪನ್ಯಾಸ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ ಎಂದು ಹೇಳಿದೆ.