Home ಟಾಪ್ ಸುದ್ದಿಗಳು ಸ್ಕಾರ್ಫ್ ನೆಪದಲ್ಲಿ ವಿದ್ಯಾರ್ಥಿಯರಿಗೆ ಕಾಲೇಜು ಪ್ರವೇಶ ನಿರಾಕರಣೆ ಮುಸ್ಲಿಮ್ ಅಸ್ಮಿತೆಯ ಮೇಲಿನ ದಾಳಿ: NWF ರಾಷ್ಟ್ರೀಯ...

ಸ್ಕಾರ್ಫ್ ನೆಪದಲ್ಲಿ ವಿದ್ಯಾರ್ಥಿಯರಿಗೆ ಕಾಲೇಜು ಪ್ರವೇಶ ನಿರಾಕರಣೆ ಮುಸ್ಲಿಮ್ ಅಸ್ಮಿತೆಯ ಮೇಲಿನ ದಾಳಿ: NWF ರಾಷ್ಟ್ರೀಯ ಅಧ್ಯಕ್ಷೆ ಲುಬ್ನಾ

ಮುಸ್ಲಿಮ್ ವಿದ್ಯಾರ್ಥಿನಿಯರ ಹೋರಾಟಕ್ಕೆ NWF ಐಕಮತ್ಯ ಪ್ರದರ್ಶನ

ಬೆಂಗಳೂರು: ಸ್ಕಾರ್ಫ್ ಧರಿಸಿದ್ದನ್ನೇ ನೆಪವಾಗಿಟ್ಟು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಿರುವ ಕರ್ನಾಟಕದ ಶಾಲೆ ಮತ್ತು ಕಾಲೇಜುಗಳ ನಿರ್ಣಯವನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷೆ ಲುಬ್ನಾ ಬೆಂಗಳೂರು ತೀವ್ರವಾಗಿ ಖಂಡಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ಕರ್ನಾಟಕದ ಮುಸ್ಲಿಮರು ಶತಮಾನಗಳಿಂದ ಸ್ಕಾರ್ಫನ್ನು ಧರಿಸಿಕೊಂಡು ಬಂದಿದ್ದಾರೆ. ಅವರು ಅದನ್ನು ತಮ್ಮ ಅಸ್ಮಿತೆಯ ಭಾಗವಾಗಿ ಗುರುತಿಸಿದ್ದಾರೆ. ಇದನ್ನು ಬದಲಾಯಿಸಲು ಬಲವಂತಪಡಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಉಡುಪಿ ಹಾಗೂ ಕುಂದಾಪುರದಲ್ಲಿ ಶಾಲೆ ಹಾಗೂ ಕಾಲೇಜು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಈ ಮುಸ್ಲಿಮ್ ತರುಣಿಯರು ಯಾವುದೇ ವಿಶೇಷ ಸ್ಥಾನಮಾನಗಳಿಗಾಗಿ ಬೇಡಿಕೆಯಿಡುತ್ತಿಲ್ಲ. ಅವರು ತಮ್ಮ ನಂಬಿಕೆಯನ್ನು ಆಚರಿಸುವ ಮೂಲಭೂತ ಹಕ್ಕನ್ನಷ್ಟೇ ಕೇಳುತ್ತಿದ್ದಾರೆ . ಈ ಹಕ್ಕನ್ನು ಸಂವಿಧಾನವು ಕಾಪಾಡಿಕೊಂಡು ಬಂದಿದೆ. ಅವರು ಯಾವುದೇ ಸಂಸ್ಥೆಯ ನಿಯಮವನ್ನು ಮುರಿದಿಲ್ಲ. ಕಾಲೇಜು ಕ್ಯಾಲೆಂಡರ್ ಅಥವಾ ನಿಯಮಾವಳಿ ಹೊತ್ತಿಗೆಗಳು ಸ್ಪಷ್ಟವಾಗಿ ಸ್ಕಾರ್ಫ್ ಜೊತೆ ಸಮವಸ್ತ್ರ ಧರಿಸಬಹುದೆಂದು ವಿವರಿಸಿದೆ. ಮಕ್ಕಳ ಹಕ್ಕುಗಳನ್ನು ತಡೆಯುವ ವೇಳೆ ಅವರ ಹೆತ್ತವರನ್ನು ಸಂಪರ್ಕಿಸಲಾಗಿಲ್ಲ ಅಥವಾ ಅವರ ಮನವಿಗಳನ್ನು ಆಲಿಸಲಾಗಿಲ್ಲ ಅವರು ವಿಷಾದ ವ್ಯಕ್ತಪಡಿಸಿದರು.

ತರಗತಿಯೊಳಗೆ ಭಿನ್ನತೆ ಸೃಷ್ಟಿಸುವ ಅಧಿಕಾರಿಗಳ ಕ್ರಮ ಸಂವಿಧಾನದ ಅನುಬಂಧ 14 ಅನ್ನು ಉಲ್ಲಂಘಿಸುತ್ತದೆ. ಕಾನೂನಿನ ಮುಂದೆ ಸಮಾನತೆಯ ಹಕ್ಕನ್ನು ರಾಜ್ಯ ಸರಕಾರ ಯಾವುದೇ ವ್ಯಕ್ತಿಗೆ ನಿರಾಕರಿಸುವಂತಿಲ್ಲ. ಶಿಕ್ಷಣದ ಹಕ್ಕು ಕಾಯ್ದೆ 2009 ಮತ್ತು ಅನುಬಂಧ 21 ಎಲ್ಲಾ ರೀತಿಯ ದೈಹಿಕ ಶಿಕ್ಷೆ ಮತ್ತು ಮಾನಸಿಕ ಹಿಂಸೆ, ಲಿಂಗ, ವರ್ಗ ಮತ್ತು ಧರ್ಮಾಧಾರಿತ ತಾರತಮ್ಯವನ್ನು ನಿಷೇಧಿಸಿದೆ ಎಂದು ಅವರು ತಿಳಿಸಿದರು.

ಭಂಡಾಕಾರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜ್, ಕುಂದಾಪುರ, ಆರ್.ಎನ್. ಶೆಟ್ಟಿ, ಪಿಯು ಕಾಲೇಜು, ಬೈಂದೂರು ಸರಕಾರಿ ಪಿಯು ಕಾಲೇಜು, ಉಡುಪಿ ಡಾಕ್ಟರ್ ಬಿ.ಬಿ. ಹೆಗ್ಡೆ ಪದವಿ ಕಾಲೇಜು, ಕುಂದಾಪುರ ಸರ್ಕಾರಿ ಪಿಯು ಕಾಲೇಜು ನಾವುಂದ, ಸರಸ್ವತಿ ವಿದ್ಯಾಲಯ ಪಿಯು ಕಾಲೇಜು, ಗಂಗೊಳ್ಳಿ ಸೇರಿದಂತೆ ಉಡುಪಿ ಸರಕಾರಿ ಪಿಯು ಕಾಲೇಜಿನ ಘಟನೆಯ ಬಳಿಕ ಇತರ ಕಾಲೇಜುಗಳಲ್ಲೂ ಅದೇ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹೇಳಲಾದ ಶೈಕ್ಷಣಿಕ ಸಂಸ್ಥೆಗಳ ವರ್ತನೆ ಬಹುತ್ವ ಮತ್ತು ಪ್ರಜಾಪ್ರಭುತ್ವವಾದಿ ಸಮಾಜಕ್ಕೆ ಸಹಿಸಲಸಾಧ್ಯ ಮತ್ತು ನಾಚಿಕೆಗೇಡಿನದ್ದಾಗಿದೆ. ಅವರು ಪ್ರಾಥಮಿಕವಾಗಿ ಸಂಘಪರಿವಾರದ ಮುಸ್ಲಿಮ್ ವಿರೋಧಿ ಅಜೆಂಡಾವನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಸಂಘಪರಿವಾರವು ಸಮಾಜದಲ್ಲಿ ಅಸಹಿಷ್ಣುತೆಯನ್ನು ಪ್ರಚಾರಪಡಿಸುತ್ತಿದೆ. ಕರ್ನಾಟಕ ಮತ್ತು ದೇಶದ ಇತರ ಭಾಗಗಳಲ್ಲಿ ಜನರು ಮತ್ತು ಆರಾಧನಾ ಸ್ಥಳಗಳ ಮೇಲೆ ಹಿಂಸೆಗಳನ್ನು ನಡೆಸುತ್ತಿದೆ. ತಮ್ಮ ನಂಬಿಕೆಗಳನ್ನು ಆಚರಿಸುವ ಯಾರ ವಿರುದ್ಧವೂ ಈ ವಿದ್ಯಾರ್ಥಿಗಳಿಗೆ ತಕರಾರಿಲ್ಲ ಮತ್ತು ತಮ್ಮ ಅಸ್ಮಿತೆಯೊಂದಿಗೆ ರಾಜಿಯಾಗದೆ ತಮಗೆ ಶಿಕ್ಷಣ ಗಳಿಸಲು ಅವಕಾಶ ಮಾಡಿಕೊಡಬೇಕೆಂದಷ್ಟೇ ಅವರೆಲ್ಲರೂ ಆಗ್ರಹಿಸುತ್ತಿದ್ದಾರೆ. ಮುಸ್ಲಿಮ್ ಮಹಿಳೆಯರ ಶೈಕ್ಷಣಿಕ ಮತ್ತು ಸಾರ್ವಜನಿಕ ಜೀವನವನ್ನು ಹಾಳು ಮಾಡಲು ಹಿಂದುತ್ವ ಸಂಘಟನೆಗಳು ಹಿಂದೂ ವಿದ್ಯಾರ್ಥಿಗಳನ್ನು ದಾಳಗಳಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು.

ಈ ನಿಟ್ಟಿನಲ್ಲಿ ನ್ಯಾಷನಲ್ ವಿಮೆನ್ಸ್ ಫಂಟ್, ವಿದ್ಯಾರ್ಥಿನಿಯರ ಹೋರಾಟದೊಂದಿಗೆ ಐಕಮತ್ಯ ವ್ಯಕ್ತಪಡಿಸುತ್ತದೆ ಮತ್ತು ಅವರಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತದೆ. ತಮ್ಮ ಅಸ್ಮಿತೆಯೊಂದಿಗೆ ರಾಜಿಯಾಗದೆ ತಮ್ಮ ಶಿಕ್ಷಣ ಮತ್ತು ವೃತ್ತಿಯನ್ನು ಗಳಿಸುವ ಮುಸ್ಲಿಮ್ ಮಹಿಳೆಯರ ಹಕ್ಕುಗಳೊಂದಿಗೆ ನಿಲ್ಲಬೇಕೆಂದು ನಾವು ದೇಶದ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳಿಗೆ ಕರೆ ನೀಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯ ಸರಕಾರವು ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶ ಮಾಡಿ ಸ್ಕಾರ್ಫ್ ಮೇಲಿನ ಕಾನೂನುಬಾಹಿರ ಮತ್ತು ಅಸಂವಿಧಾನಿಕ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಕಾಲೇಜುಗಳಿಗೆ ನಿರ್ದೇಶನ ನೀಡಬೇಕೆಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ NWF ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೌಶೀರಾ, NWF ಕರ್ನಾಟಕ ರಾಜ್ಯಾಧ್ಯಕ್ಷೆ ಫರ್ಝಾನ ಮುಹಮ್ಮದ್, NWF ಕರ್ನಾಟಕ ಪ್ರಧಾನ ಕಾರ್ಯದರ್ಶಿ ಬೀಬಿ ಆಯಿಶಾ, NWF ಕರ್ನಾಟಕ ರಾಜ್ಯ ಕಾರ್ಯದರ್ಶಿ ರಮ್ಲತ್ ವಾಮಂಜೂರು ಉಪಸ್ಥಿತರಿದ್ದರು.

Join Whatsapp
Exit mobile version