ನವದೆಹಲಿ: ದೆಹಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ದಟ್ಟವಾದ ಮಂಜು ಕವಿದ ವಾತಾವರಣದಿಂದಾಗಿ 150 ಕ್ಕೂ ಹೆಚ್ಚು ದೇಶೀಯ ವಿಮಾನಗಳ ಹಾರಾಟ ವಿಳಂಬವಾಗಿದ್ದು, 250 ಕ್ಕೂ ಹೆಚ್ಚು ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ.
ಕನಿಷ್ಠ ತಾಪಮಾನವು ಸ್ವಲ್ಪಮಟ್ಟಿಗೆ ಏರಿದ್ದರೂ ರಾಜಧಾನಿಯಲ್ಲಿ ಶೀತ ಅಲೆಯ ಪರಿಸ್ಥಿತಿಗಳು ಸತತ ಐದನೇ ದಿನವೂ ಮುಂದುವರೆದಿದೆ.
ರಾಷ್ಟ್ರ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ, ಇಂದು ಮುಂಜಾನೆ ಗೋಚರತೆ 25 ಮೀಟರ್’ಗೆ ಇಳಿದಿದೆ. ವಾಹನಗಳು ಅಪಾಯದ ದೀಪಗಳನ್ನು ಉರಿಸಿ ನಿಧಾನವಾಗಿ ಚಲಿಸುತ್ತಿದ್ದವು.
“ಮಂಜು ಮತ್ತು ಇತರ ಪರಿಸ್ಥಿತಿಗಳಿಂದಾಗಿ ಇಂದು ಒಟ್ಟು 267 ರೈಲುಗಳನ್ನು ರದ್ದುಗೊಳಿಸಲಾಯಿತು. ಬೆಳಿಗ್ಗೆ 11 ರವರೆಗೆ ಒಟ್ಟು 170 ರೈಲುಗಳು ವಿಳಂಬವಾದವು ಮತ್ತು 170 ರೈಲುಗಳಲ್ಲಿ 91 ರೈಲುಗಳು (54%) ಹವಾಮಾನ ವೈಪರೀತ್ಯದಿಂದಾಗಿ ತಡವಾಗಿ ಓಡುತ್ತಿವೆ ಎಂದು ರೈಲ್ವೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ವಾಯುವ್ಯ ಭಾರತದಲ್ಲಿ ಮುಂದಿನ ಎರಡು ದಿನಗಳ ಕಾಲ ಚಳಿ ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಶನಿವಾರ ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ಶೀತದ ಅಲೆಯು ಎಷ್ಟು ತೀವ್ರವಾಗಿದೆ ಎಂದರೆ ಅದರ ಕನಿಷ್ಠ ತಾಪಮಾನವು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗಿರಿಧಾಮಗಳಿಗಿಂತ ಕಡಿಮೆಯಾಗಿದೆ.
ಸಫ್ದರ್ಜಂಗ್ ವೀಕ್ಷಣಾಲಯವು ಇಂದು ಬೆಳಿಗ್ಗೆ ಕನಿಷ್ಠ ತಾಪಮಾನ 3.8 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ, ನಿನ್ನೆ ದಾಖಲಾದ 1.9 ಡಿಗ್ರಿಗಿಂತ ಸ್ವಲ್ಪ ಹೆಚ್ಚಾಗಿದೆ. ಲೋಧಿ ರಸ್ತೆ, ಅಯನಗರ್ ಮತ್ತು ರಿಡ್ಜ್ನಲ್ಲಿನ ಹವಾಮಾನ ಕೇಂದ್ರಗಳು ಕ್ರಮವಾಗಿ 3.6 ಡಿಗ್ರಿ, 3.2 ಡಿಗ್ರಿ ಮತ್ತು 3.3 ಡಿಗ್ರಿಗಳಷ್ಟು ಕನಿಷ್ಠ ತಾಪಮಾನವನ್ನು ದಾಖಲಿಸಿವೆ. ಎಲ್ಲಾ ಖಾಸಗಿ ಶಾಲೆಗಳು ಜನವರಿ 15 ರವರೆಗೆ ಮುಚ್ಚುವಂತೆ ದೆಹಲಿ ಸರ್ಕಾರ ಸಲಹೆ ನೀಡಿದೆ.