Home ಟಾಪ್ ಸುದ್ದಿಗಳು ಗೋದಾಮಿನಿಂದ ಕಾಫಿ ಕಳ್ಳತನ: ಆರು ಮಂದಿ ಚೋರರ ಬಂಧನ, ವಾಹನ ವಶ

ಗೋದಾಮಿನಿಂದ ಕಾಫಿ ಕಳ್ಳತನ: ಆರು ಮಂದಿ ಚೋರರ ಬಂಧನ, ವಾಹನ ವಶ

ಮಡಿಕೇರಿ: ಕಾಫಿ ತೋಟದ ಗೋದಾಮಿನಿಂದ ಅಂದಾಜು 3 ಲಕ್ಷ ರೂ ಮೌಲ್ಯದ ಕಾಫಿ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿ, ಎರಡು ವಾಹನವನ್ನು ವಶಪಡಿಸಿಕೊಂಡ ಘಟನೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆಯಲ್ಲಿ  ನಡೆದಿದೆ.

ಕಾಫಿ ಬೆಳೆಗಾರ ಪಟ್ಟಡ ಮಾಚಯ್ಯ ಎಂಬವರಿಗೆ ಸೇರಿದ ಕಾಫಿ ಗೋದಾಮಿನಿಂದ ಅಂದಾಜು ರೂ 3 ಲಕ್ಷ ಮೌಲ್ಯದ ಕಾಫಿ ಕಳ್ಳತನವಾಗಿರುವ ಬಗ್ಗೆ 16.08.2022 ರಂದು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ ಅವರು ಆರೋಪಿಗಳ ಪತ್ತೆಗಾಗ ವಿಶೇಷ ತಂಡವನ್ನು ರಚಿಸಿದ್ದರು.

ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಸಮೀಪದ ಕೆಲವು ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ತೋಟದ ಮಾಲಿಕರು ಸ್ಥಳದಲ್ಲಿ ಇಲ್ಲದ ಸಂದರ್ಭಗಳಲ್ಲಿ ಗೋದಾಮಿನ ಸೀಟು ತೆಗೆದು ರಾತ್ರಿ ವೇಳೆಯಲ್ಲಿ ಒಳನುಗ್ಗಿರುವ ಕಳ್ಳರು ಅಂದಾಜು 80ಕ್ಕೂ ಹೆಚ್ಚು ಚೀಲ ಕಾಫಿ ಕಳ್ಳತನ ಮಾಡಿ, ಗೋಣಿಕೊಪ್ಪಲು ಕಾಫಿ ವ್ಯಾಪಾರಿಗೆ ಮಾರಾಟ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಚೆನ್ನಯ್ಯನಕೋಟೆಯ ಮಣಿ, ಮಂಜು, ಅಯ್ಯಪ್ಪ, ಸುರೇಶ್ ಕುಮಾರ್, ಲಕ್ಷ್ಮಣ, ಕಾಳ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ ಒಂದು ಮಾರುತಿ ವ್ಯಾನ್ ಮತ್ತು ಆಟೋವನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಮಡಿಕೇರಿ ನಗರ ಸಿ.ಐ ನಾಗೇಶ್ ಕದ್ರಿ ಮತ್ತು ಸಿದ್ದಾಪುರ ಪಿ.ಎಸ್.ಐ ಮೋಹನ್ ರಾಜ್ ನೇತೃತ್ವದ ತಂಡದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್ಐ ತಮ್ಮಯ್ಯ, ಸಿಬ್ಬಂದಿಗಳಾದ ರತನ್, ಲಕ್ಷ್ಮೀಕಾಂತ್, ಭರತ್, ಕಿರಣ್ ಕುಮಾರ್, ವಸಂತ್ ಕುಮಾರ್, ಮಲ್ಲಪ್ಪ ಮುಶಿಗೇರಿ ಹಾಗೂ ಮಡಿಕೇರಿ ನಗರ ವೃತ್ತದ ಸಿಬ್ಬಂದಿಗಳಾದ ಕಿರಣ್ ಕುಮಾರ್ ಮತ್ತು ಸುಧೀರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Join Whatsapp
Exit mobile version